ದರ್ಶನ್ ಪತ್ನಿಗೆ ಅಸಭ್ಯ ಕಮೆಂಟ್ ಪ್ರಕರಣ: 2 ನೋಟಿಸ್ಗೂ ಉತ್ತರ ನೀಡದ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ, ಅಸಭ್ಯ ಕಮೆಂಟ್ ಬಂದಿದೆ ಎಂದು ದೂರು ನೀಡಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ನೋಟಿಸ್ಗಳಿಗೆ ವಿಜಯಲಕ್ಷ್ಮಿ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಈಗಾಗಲೇ ಎರಡು ನೋಟಿಸ್ ಕಳಿಸಿರುವ ಪೊಲೀಸರು ಮೂರನೇ ನೋಟಿಸ್ ಕಳಿಸಲು ಮುಂದಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ನಟ ದರ್ಶನ್ (Darshan) ಅವರ ಪತ್ನಿ ವಿಜಯಲಕ್ಷ್ಮಿಗೆ ಕೆಡಿಗೇಡಿಗಳು ಅಸಭ್ಯ ಕಮೆಂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭ ಆಗಿತ್ತು. ಅಶ್ಲೀಲ ಕಮೆಂಟ್ಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ಎರಡು ಬಾರಿ ನೋಟಿಸ್ ಕಳಿಸಿದ್ದಾರೆ. ಆದರೆ ಈ ಎರಡೂ ನೋಟಿಸ್ಗಳಿಗೆ ಅವರು ಉತ್ತರ ನೀಡಿಲ್ಲ! ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಚೆನ್ನಮ್ಮನಕರೆ ಅಚ್ಚುಕಟ್ಟು ಪೊಲೀಸರಿಂದ ನೋಟಿಸ್ ಕಳಿಸಲಾಗಿದೆ. ಪೊಲೀಸರ ನೋಟಿಸ್ಗಳಿಗೆ ವಿಜಯಲಕ್ಷ್ಮಿ (Vijayalakshmi Darshan) ಅವರು ಕ್ಯಾರೇ ಎನ್ನುತ್ತಿಲ್ಲ.
ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟ ಕಮೆಂಟ್ಗಳು ಬಂದಿವೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಹಾಗಾಗಿ ಮಹಿಳಾ ಆಯೋಗದಿಂದ ಸುಮೋಟೊ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು. ಎರಡು ನೋಟಿಸ್ಗಳಿಗೂ ವಿಜಯಲಕ್ಷ್ಮಿ ಅವರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಈಗ ಮೂರನೇ ನೋಟಿಸ್ ನೀಡಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದಾರೆ.
ಒಂದು ವೇಳೆ, ಮೂರನೇ ನೋಟಿಸ್ಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದಾದರೆ ಪೊಲೀಸರು ಈ ಪ್ರಕರಣವನ್ನು ಮುಕ್ತಾಯ ಮಾಡಲಿದ್ದಾರೆ. ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಕೆ ಮಾಡಲಿದ್ದಾರೆ. ಮುಂದಿನ ತನಿಖೆಗೆ ಯಾವುದೇ ಮಾಹಿತಿ ಅಥವಾ ಲೀಡ್ ಸಿಗುತ್ತಿಲ್ಲ ಎಂದು ಸಿ ರಿಪೋರ್ಟ್ ಸಲ್ಲಿಕೆ ಮಾಡಲಾಗುತ್ತದೆ. ಈಗಲಾದರೂ ವಿಜಯಲಕ್ಷ್ಮಿ ಅವರು ನೋಟಿಸ್ಗೆ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.
ಕಳೆದ ಎರಡು ವರ್ಷಗಳ ಹಿಂದಿನ ಕಾಮೆಂಟ್ಗೆ ಇತ್ತೀಚೆಗೆ ದೂರು ನೀಡಲಾಯಿತು. 6 ಟ್ವಿಟರ್ ಖಾತೆಗಳು ಕೂಡ ಎರಡು ವರ್ಷಗಳ ಹಿಂದೆಯೇ ಡಿಲೀಟ್ ಆಗಿವೆ. ಕಳೆದ ಎರಡು ವರ್ಷಗಳಿಂದ ಆರು ಟ್ಟಿಟರ್ ಅಕೌಂಟ್ಗಳಿಂದ ಯಾವುದೇ ಮೆಸೇಜ್ಗಳು ವಿನಿಮಯ ಆಗಿಲ್ಲ. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿರುವ ಸಿಕೆ ಅಚ್ಚುಕಟ್ಟು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್ ಕಾರು ತಡೆದ ಜೈಲು ಸಿಬ್ಬಂದಿ
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅರೆಸ್ಟ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಭರದಲ್ಲಿ ಕೆಲವರು ಅಸಭ್ಯ, ಅಶ್ಲೀಲ ಪದ ಬಳಕೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



