ಭಾರತೀಯ ಚಿತ್ರರಂಗದಲ್ಲಿ LGBTQ ಸಮುದಾಯದ ಕುರಿತು ಕಥಾ ಹಂದರವಿರುವ ಸಾಕಷ್ಟು ಸಿನಿಮಾಗಳು ರೂಪುಗೊಂಡಿವೆ. ಈಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಪುರುಷನ ವಿಚಿತ್ರ ಕಥೆಯೊಂದು ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆಸಿದೆ!
ಹೆಣ್ಣು ಗರ್ಭ ಧರಿಸಿದಾಗ, ಪರೀಕ್ಷಿಸಿದ ವೈದ್ಯರು ʻಎ ಸ್ವೀಟ್ ನ್ಯೂಸ್ ಫಾರ್ ಯೂʼ ಅನ್ನೋದು ವಾಡಿಕೆ. ಅದೇ ಒಬ್ಬ ಪುರುಷನನ್ನು ಗರ್ಭ ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಅಂದರೆ, ಎಂಥವರಿಗಾದರೂ ಆಶ್ಚರ್ಯವಾಗುವುದಿಲ್ವಾ? ಒಬ್ಬ ಗಂಡು ಗರ್ಭ ಧರಿಸುತ್ತಾನೆ ಅನ್ನೋ ಕಲ್ಪನೆಯೇ ಒಂಥರಾ ವಿಲಕ್ಷಣ ಭಾವನೆ ಉಂಟುಮಾಡುತ್ತದೆ. ಹೀಗಿರುವಾಗ ಅದನ್ನು ವೆಬ್ ಸರಣಿಯ ಸರಕಾಗಿಸಿರುವ ತಂಡದ ಧೈರ್ಯ ನಿಜಕ್ಕೂ ಬಲು ದೊಡ್ಡದು. ಸದ್ಯ ಲೋಕಾರ್ಪಣೆಗೊಂಡಿರುವ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್ ವ್ಯಾಪಕವಾಗಿ ವೈರಲ್ ಆಗಿದೆ.
ಈ ಯುವಕ ಗರ್ಭ ಧರಿಸಿದ್ದು ಹೇಗೆ?
ಗೋಲ್ಡ್ ಚೈನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಪ್ರಯೋಗವಿದು. ನಟ ಉಪೇಂದ್ರರ ಟೋಪಿವಾಲಾ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗಿದ್ದಾರೆ. ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಿಂದ ಪರಿಚಯಗೊಳ್ಳುತ್ತಿದ್ದಾರೆ. ಇಷ್ಟಕಾಮ್ಯ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ಶೆಟ್ಟಿ ನಾಯಕಿಯಾಗಿದ್ದಾರೆ. ಉರ್ವಿ ಸಿನಿಮಾದ ಮೂಲಕ ಛಾಯಾಗ್ರಹಣದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಆನಂದ್ ಸುಂದರೇಶ್ ಛಾಯಾಗ್ರಹಣವಿರುವ ಈ ಸರಣಿಯ ಕ್ರಿಯೇಟೀವ್ ತಂಡದಲ್ಲಿ ಪ್ರಿಯಾಂಕಾ ಎಂ ಆರ್, ಜಗದೀಶ್ ಸಿಂಗ್, ಯೋಗೇಶ್ ನಂಜಪ್ಪ, ಪ್ರಕಾಶ್ ಎಸ್ಆರ್, ಅನಿಲ್ ಕುಮಾರ್, ಅಕ್ಷೋಭ್ಯಾ, ಪ್ರಶಾಂತ್ ಆರ್ ಮತ್ತು ಮಂಜುನಾಥ್ ಸಿಂಗ್, ಪ್ರಜ್ವಲ್ ಮುದ್ದಿ ಕೆಲಸ ಮಾಡಲಿದ್ದಾರೆ.
ಕಾಫಿ ಡೇ ಈ ಸರಣಿಯ ಬ್ರಾಂಡ್ ಪಾರ್ಟ್ನರ್ ಕೂಡಾ ಆಗಿರುವುದರಿಂದ ಅಲ್ಲಿಯೇ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್ನ ವಿನೂತನವಾಗಿ ಅನಾವರಣ ಮಾಡಲಾಗಿದೆ. ಜನಸಾಮಾನ್ಯರೇ ಇದ್ದಲ್ಲಿಂದಲೇ ಸ್ಕ್ರಾಚ್ ಕಾರ್ಡ್ ಲಿಂಕ್ ಶೇರ್ ಮಾಡುವ ಮೂಲಕ ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ. ಮೊದಲೇ ಬಿಡುಗಡೆಗೊಂಡಿದ್ದ ಲಿಂಕ್ ಕ್ಲಿಕ್ ಮಾಡಿದರೆ, ಅದು ರೀ ಡೈರೆಕ್ಟ್ ಮಾಡುತ್ತದೆ. ಅಲ್ಲಿ ಸ್ಕ್ರಾಚ್ ಮಾಡಬಹುದು, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಹುದು. ಹಾಗೆ ಶೇರ್ ಮಾಡಿದ ಕೆಲವರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ನಡೆಯಲಿರುವ ಸಮಾರಂಭದಲ್ಲಿ ವಿಶೇಷ ಉಡುಗೊರೆಯನ್ನೂ ಸಹ ನೀಡಲಾಗುತ್ತಿದೆ.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನ ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷಿಸುತ್ತಿದ್ದಾರೆ. ಹೊಸತು ಅನ್ನೋ ಪದಕ್ಕೇ ಅನ್ವರ್ಥವಾಗಿರುವ ಆಲೋಚನೆಯೊಂದಿಗೆ ಯುವ ಪ್ರತಿಭೆಗಳೆಲ್ಲಾ ಸೇರಿ ʻನಿಮಗೊಂದು ಸಿಹಿ ಸುದ್ದಿʼ ನೀಡಲು ಮುಂದಾಗಿದೆ. ಸದ್ಯ ಕಾನಿ ಸ್ಟುಡಿಯೋ ವಿನ್ಯಾಸಗೊಳಿಸಿರುವ ಪೋಸ್ಟರ್ ಎಲ್ಲರ ಗಮನ ಸೆಳೆದಿರುವುದರೊಂದಿಗೆ, ಚರ್ಚೆಯ ವಸ್ತುವೂ ಆಗಿದೆ!