Dhruva Sarja: ಐದು ದಿನಕ್ಕೆ ‘ಮಾರ್ಟಿನ್’ ಚಿತ್ರ ಮಾಡಿದ ಗಳಿಕೆ ಎಷ್ಟು?

|

Updated on: Oct 16, 2024 | 10:49 AM

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಭಾರಿ ಬಜೆಟ್​ನ ಈ ಸಿನಿಮಾ ಬಿಡುಗಡೆ ಆದಾಗ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಿತ್ತು. ಚಿತ್ರದ ಗಳಿಕೆ ಬಗ್ಗೆ ಇಲ್ಲಿದೆ ವಿವರ.

Dhruva Sarja: ಐದು ದಿನಕ್ಕೆ ‘ಮಾರ್ಟಿನ್’ ಚಿತ್ರ ಮಾಡಿದ ಗಳಿಕೆ ಎಷ್ಟು?
ಧ್ರುವ ಸರ್ಜಾ
Follow us on

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ. ಮೊದಲ ಮೂರು ದಿನ ಚಿತ್ರವು ಭರ್ಜರಿ ಗಳಿಕೆ ಮಾಡಿತ್ತು. ಈಗ ವಾರದ ದಿನಗಳಲ್ಲಿ ಸಿನಿಮಾದ ಗಳಿಕೆ ನಿಧಾನವಾಗಿ ತಗ್ಗುತ್ತಿದೆ. ಮಂಗಳವಾರ (ಅಕ್ಟೋಬರ್ 16) ಈ ಚಿತ್ರ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ, ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಯಿತು. ತಮಿಳಿನಲ್ಲಿ ‘ವೆಟ್ಟೈಯಾನ್’, ಹಿಂದಿಯಲ್ಲಿ ‘ಜಿಗ್ರಾ’ ಸಿನಿಮಾಗಳು ರಿಲೀಸ್ ಆದ ಹೊರತಾಗಿಯೂ ‘ಮಾರ್ಟಿನ್’ ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿತು. ಆದರೆ, ವಾರದ ದಿನ ಸಿನಿಮಾದ ಕಲೆಕ್ಷನ್ ತಗ್ಗುತ್ತಿದೆ.

Sacnilk ವರದಿ ಮಾಡಿರುವ ಪ್ರಕಾರ, ‘ಮಾರ್ಟಿನ್’ ಚಿತ್ರ ಐದನೇ ದಿನವಾದ ಮಂಗಳವಾರ 1 ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ. ಮೊದಲ ದಿನ ಈ ಚಿತ್ರ 6.7 ಕೋಟಿ ರೂಪಾಯಿ, ಎರಡನೇ ದಿನ 5.5 ಕೋಟಿ ರೂಪಾಯಿ, ಮೂರನೇ ದಿನ 3.35 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 1.35 ಕೋಟಿ ರೂಪಾಯಿ ಹಾಗೂ ಐದನೇ ದಿನ 1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 18 ಕೋಟಿ ರೂಪಾಯಿ ಆಗಿದೆ.

18 ಕೋಟಿ ರೂಪಾಯಿ ದೊಡ್ಡ ಮೊತ್ತವೇ. ಆದರೆ, ಚಿತ್ರದ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತುಂಬಾನೇ ಚಿಕ್ಕದು ಎನಿಸಿದೆ. ಸಿನಿಮಾಗೆ ನಿರ್ಮಾಪಕ ಉದಯ್ ಮೆಹ್ತಾ ಅವರು ಬರೋಬ್ಬರಿ 100 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನುವ ವರದಿ ಇದೆ. ಇದು ನಿಜವೇ ಆಗಿದ್ದಲ್ಲಿ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಗಿದೆ.

ಇದನ್ನೂ ಓದಿ: ‘ಮಾರ್ಟಿನ್’ ಚೆನ್ನಾಗಿಲ್ಲ ಎಂದ ಯೂಟ್ಯೂಬರ್​ಗೆ ಧ್ರುವ ಅಭಿಮಾನಿಗಳಿಂದ ಬೆದರಿಕೆ

ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ನಿಧಾನವಾಗಿ ಕುಗ್ಗುತ್ತಾ ಬರುತ್ತದೆ. ಈ ವಾರಾಂತ್ಯದಲ್ಲಿ ಸಿನಿಮಾದ ಕಲೆಕ್ಷನ್ ಸ್ವಲ್ಪ ಹೆಚ್ಚಬಹುದು. ‘ಮಾರ್ಟಿನ್’ ಸಿನಿಮಾ ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ಹೆಚ್ಚಿನ ಗಳಿಕೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:37 am, Wed, 16 October 24