ಒಂದೊಳ್ಳೆ ಚಿತ್ರ ತುಳಿಯುತ್ತಿರುವ ಕಾಣದ ಕೈಗಳು; ‘ಮದರ್ ಪ್ರಾಮಿಸ್’ಚಿತ್ರಕ್ಕೆ ಸಂಕಷ್ಟ
ಡಾಲಿ ಧನಂಜಯ್ ನಟನೆಯ 'ಮದರ್ ಪ್ರಾಮಿಸ್' ಚಿತ್ರವು ಉದ್ದೇಶಪೂರ್ವಕ ನೆಗೆಟಿವ್ ರೇಟಿಂಗ್‌ಗಳಿಂದ ಗಳಿಕೆ ಕಳೆದುಕೊಂಡಿದೆ. ಬುಕ್‌ಮೈಶೋನಂತಹ ವೇದಿಕೆಗಳಲ್ಲಿನ ಕಡಿಮೆ ವಿಮರ್ಶೆಗಳು ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಮಾಡಿವೆ. ನಿರ್ದೇಶಕ ಪೂರ್ಣಚಂದ್ರ ಮೈಸೂರು ಅವರ ಹಾಸ್ಯಮಯ ಚಿತ್ರಕ್ಕೆ ಈ ವಿಮರ್ಶೆಗಳು ಮಾರಕವಾಗಿವೆ. ಧನಂಜಯ್ ಚಿತ್ರ ನೋಡಲು ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು
- ಮದರ್ ಪ್ರಾಮಿಸ್ ಚಿತ್ರಕ್ಕೆ ಉದ್ದೇಶಪೂರ್ವಕ ನೆಗೆಟಿವ್ ರೇಟಿಂಗ್ಸ್
- ಬಾಕ್ಸ್ ಆಫೀಸ್ ಗಳಿಕೆ ಕುಸಿತ
- ಅಭಿಮಾನಿಗಳ ಬಳಿ ಮನವಿ ಮಾಡಿದ ಧನಂಜಯ್
ಯಾವುದೇ ಸಿನಿಮಾ ರಿಲೀಸ್ ಆದರೂ ಉತ್ತಮವಾಗಿದೆ ಅಥವಾ ಉತ್ತಮವಾಗಿಲ್ಲ ಎಂದು ನಿರ್ಧಾರ ಆಗೋದು ರೇಟಿಂಗ್ ಮೇಲೆ. ಇದನ್ನು ಆಧರಿಸಿಯೇ ಜನರು ಸಿನಿಮಾಗೆ ತೆರಳುತ್ತಾರೆ. ಸದ್ಯದ ಮಟ್ಟಿಗೆ ಟ್ರೆಂಡಿಂಗ್ ರೇಟಿಂಗ್ ಆ್ಯಪ್ ಎಂದರೆ ಬುಕ್ ಮೈ ಶೋ. ಈ ಆ್ಯಪ್ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡಿ, ಆ ಬಳಿಕ ರೇಟಿಂಗ್ ಕೊಡಬಹುದು. ಡಾಲಿ ಧನಂಜಯ್ ನಟಿಸಿ, ನಿರ್ಮಿಸಿರೋ ‘ಮದರ್ ಪ್ರಾಮಿಸ್’ ಸಿನಿಮಾಗೆ (Mother Promise Movie ) ಈ ರೇಟಿಂಗ್ಗಳೇ ಮುಳುವಾಗಿವೆ.
ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳು ವಿಮರ್ಶೆ ಆಯ್ಕೆಯನ್ನೇ ಆಫ್ ಮಾಡುತ್ತಿವೆ. ರಿಲೀಸ್ ಬಳಿಕ ಕೆಲವರು ದುರುದ್ದೇಶದಿಂದ ಸಿನಿಮಾಗೆ ಕೆಟ್ಟ ರೇಟಿಂಗ್ ಕೊಡುತ್ತಾರೆ. ‘ಮದರ್ ಪ್ರಾಮಿಸ್’ ಸಿನಿಮಾ ಹಾಸ್ಯದ ಅಲೆಯಲ್ಲಿ ಪ್ರೇಕ್ಷಕರನ್ನು ತೇಲಿಸೋ ತಾಕತ್ತು ಹೊಂದಿದೆ. ಆದರೆ, ಇದಕ್ಕೆ ಕೆಲವರು ಹತ್ತಕ್ಕೆ ಒಂದು ರೇಟಿಂಗ್ ಕೊಟ್ಟು ಸಿನಿಮಾನ ತುಳಿಯೋ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ವಿಮರ್ಶೆಗೆ ಹೆಚ್ಚು ಲೈಕ್ಸ್ ಸಿಗುವಂತೆ ಮಾಡಿ, ಅದು ಮೊದಲಿಗೆ ಎದ್ದು ಕಾಣುವಂತೆ ಮಾಡಿದ್ದಾರೆ.
ಹಾಸ್ಯದ ಶೈಲಿಯ ಸಿನಿಮಾಗಳನ್ನು ನೋಡುವ ವರ್ಗ ದೊಡ್ಡದಿದೆ. ಆದರೆ, ಉದ್ದೇಶಪೂರ್ವಕವಾಗಿ ಹಬ್ಬಿಸಿದ ನೆಗೆಟಿವ್ ವಿಮರ್ಶೆ ಕಾರಣದಿಂದ ಚಿತ್ರದ ಗಳಿಕೆ ಕುಗ್ಗಿದೆ. ಮೂರು ದಿನಕ್ಕೆ ಸಿನಿಮಾ ಕೇವಲ ಒಂದೂವರೆ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಚಿತ್ರತಂಡದ ಆತಂಕ ಹೆಚ್ಚಿಸಿದೆ.
View this post on Instagram
ಧನಂಜಯ್ ಅವರು ಎಲ್ಲಾ ಹೀರೋಗಳ ಜೊತೆಯೂ ಉತ್ತಮವಾಗಿದ್ದಾರೆ. ಅವರಿಗೆ ಯಾವುದೇ ಶತ್ರುಗಳಿಲ್ಲ ಎಂದೇ ಹೇಳಬಹುದು. ಆದಾಗ್ಯೂ ಸಿನಿಮಾ ಬಗ್ಗೆ ಈ ರೀತಿ ನೆಗಟಿವ್ ವಿಮರ್ಶೆ ಹಬ್ಬಿಸಿದವರು ಯಾರು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಡಾಲಿ ಧನಂಜಯ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬೇಸರ ಹೊರಹಾಕಿದ್ದಾರೆ. ದಯವಿಟ್ಟು ಸಿನಿಮಾ ನೋಡುವಂತೆ ಅವರು ಅಭಿಮಾನಿಗಳ ಬಳಿ ಕೋರಿಕೊ0ಡಿದ್ದಾರೆ.
ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ನೆಗೆಟಿವ್ ಪ್ರಚಾರ, ಡಾಲಿ ಬೇಸರ
‘ಮದರ್ ಪ್ರಾಮಿಸ್’ ಚಿತ್ರಕ್ಕೆ ಪೂರ್ಣಚಂದ್ರ ಮೈಸೂರು ನಿರ್ದೇಶನ ಮಾಡಿದ್ದಾರೆ. ಡಾಲಿ ನಿರ್ಮಿಸಿದ್ದಾರೆ. ಈ ಚಿತ್ರದ ಹಾಡುಗಳು ಗಮನ ಸೆಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Mon, 13 July 26




