‘ಅಶೋಕ ಬ್ಲೇಡ್’ ಸಿನಿಮಾ ನಿರ್ದೇಶಕ ನಿರ್ದೇಶಕ ವಿನೋದ್ ದೋಂಡಾಲೆ ಸಾವು
ಸತೀಶ್ ನೀನಾಸಂ ನಟಿಸುತ್ತಿರುವ ‘ಅಶೋಕಾ ಬ್ಲೇಡ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದ ವಿನೋದ್ ದೊಂಡಾಲೆ ನಿಧನ ಹೊಂದಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ವಿನೋದ್, ‘ಕರಿಮಣಿ’ ಧಾರಾವಾಹಿಯ ನಿರ್ದೇಶಕರೂ ಹೌದು.
ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿ ನಿರ್ದೇಶಕ ವಿನೋದ್ ದೊಂಡಾಲೆ ನಿಧನ ಹೊಂದಿದ್ದಾರೆ. ಅವರ ಶವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿನೋದ್ ದೊಂಡಾಲೆ ಅವರು ಹಣಕಾಸಿನ ವಿಚಾರಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ವಿನೋದ್ ದೊಂಡಾಲೆಗೆ ಮೂವರು ಮಕ್ಕಳು ಹಾಗೂ ಪತ್ನಿ ಇದ್ದರು. ವಿನೋದ್ ನಿಧನಕ್ಕೆ ಚಿತ್ರರಂಗದ ಕೆಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಿನೋದ್ ದೊಂಡಾಲಿ ಅವರ ನಾಗರಬಾವಿಯ ಮನೆಯಲ್ಲಿ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಕೆಲ ಮೂಲಗಳ ಪ್ರಕಾರ, ವಿನೋದ್ ಅವರು ಸಿನಿಮಾ ಹಾಗೂ ವೈಯಕ್ತಿಕ ಜೀವನ ನಿರ್ವಹಣೆಗೆ ಹಲವರಿಂದ ಸಾಲಗಳನ್ನು ಮಾಡಿಕೊಂಡಿದ್ದರಂತೆ. ಈಗ ಸಾಲ ತೀರಿಸಲು ಆಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನೀನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಸಿನಿಮಾವನ್ನು ವಿನೋದ್ ನಿರ್ದೇಶನ ಮಾಡುತ್ತಿದ್ದರು. ‘ಅಶೋಕ್ ಬ್ಲೇಡ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ. ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಹಾಗೂ ‘ಅಶೋಕ ಬ್ಲೇಡ್’ ಸಿನಿಮಾದ ನಿರ್ಮಾಪಕರ ಜೊತೆ ಶೂಟಿಂಗ್ ಬಗ್ಗೆ ಚರ್ಚಿಸಿದ್ದರಂತೆ ವಿನೋದ್. ಆದರೆ ಆ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ:ಖ್ಯಾತ ನಟನ ಮಗಳು ನಿಧನ; ಕ್ಯಾನ್ಸರ್ಗೆ ಬಲಿ
ವಿನೋದ್, ಖ್ಯಾತ ನಿರ್ದೇಶಕ ಪಿ ಶೇಷಾದ್ರಿ ಹಾಗೂ ಟಿಎನ್ ಸೀತಾರಾಮ್ ಗರಡಿಯಲ್ಲಿ ಪಳಗಿದ್ದ ನಿರ್ದೇಶಕ. ಈ ಇಬ್ಬರಿಗೂ ಸಹ ಸಹಾಯಕ ನಿರ್ದೇಶಕನಾಗಿ ವಿನೋದ್ ಕೆಲಸ ಮಾಡಿದ್ದರು. ಸಿನಿಮಾ ಮಾತ್ರವೇ ಅಲ್ಲದೆ ಕಿರುತೆರೆಯಲ್ಲಿಯೂ ವಿನೋದ್ ಕೆಲಸ ಮಾಡಿದ್ದು ‘ಕರಿಮಣಿ’ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದರು. ವಿನೋದ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ನಿರ್ದೇಶಕ ಪಿ ಶೇಷಾದ್ರಿ, ‘ಒಂದು ಮಾತಾದರೂ ಹೇಳಬಾರದಿತ್ತೆ? ನಿನಗೆ ನನ್ನ ನೆನಪಾದರೂ ಬರಲಿಲ್ಲ ಏಕೆ?, ಹೆಂಡತಿ, ಮಕ್ಕಳ ಮುಖವೂ ಕಣ್ಣ ಮುಂದೆ ಬರಲಿಲ್ಲವೇ, ತಪ್ಪು ಮಾಡಿಬಿಟ್ಟೆ ನೀನು ಅಲ್ಲಾದರೂ ನೆಮ್ಮದಿಯಾಗಿರು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ