ಸಿನಿಮಾ (Cinema) ಟಿಕೆಟ್ ದರಗಳು ಈಗಾಗಲೇ ಗಗನಕ್ಕೇರಿ ಕುಳಿತಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಕಡಿಮೆ ಆಗಿರುವ ಈ ಸಮಯದಲ್ಲಿ ಸಿನಿಮಾ ಪ್ರೇಮಿಗಳು ವಿಧಿಯಿಲ್ಲದೆ ಮಲ್ಟಿಪ್ಲೆಕ್ಸ್ಗಳನ್ನು (Multiplex) ನೆಚ್ಚಿಕೊಳ್ಳಬೇಕಾಗಿದೆ. ಮಲ್ಟಿಪ್ಲೆಕ್ಸ್ಗಳು ಹೆಚ್ಚು ಮೊತ್ತಕ್ಕೆ ಟಿಕೆಟ್ಗಳನ್ನು ಮಾರಾಟ ಮಾಡುತ್ತಿವೆ. ಅಲ್ಲಿನ ಪಾಪ್ಕಾರ್ನ್, ಕೂಲ್ ಡ್ರಿಂಕ್ಸ್ ಬೆಲೆಗಳಂತೂ ಗಗನದಲ್ಲಿವೆ. ಹೀಗಿರುವಾಗ, ಮೈಸೂರಿನ ಮಲ್ಟಿಪ್ಲೆಕ್ಸ್ ಒಂದರಲ್ಲಿ ಹಠಾತ್ತನೆ ಟಿಕೆಟ್ ಬೆಲೆ ಏರಿಸಿದ್ದಕ್ಕೆ ಪ್ರೇಕ್ಷಕರು ಮಲ್ಟಿಪ್ಲೆಕ್ಸ್ ಸಿಬ್ಬಂದಿ ಜೊತೆ ಜಗಳ ಮಾಡಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಮಾಲ್ ಆಫ್ ಮೈಸೂರು ಶಾಪಿಂಗ್ ಮಾಲ್ನಲ್ಲಿರುವ ಐನಾಕ್ಸ್ ಮಲ್ಟಿಪ್ಲೆಕ್ಸ್ ನಲ್ಲಿ ಇಂದು (ಆಗಸ್ಟ್ 01) ರಾತ್ರಿ ಸಿನಿಮಾ ನೋಡಲು ಹೋದವರಿಗೆ ಶಾಕ್ ನೀಡಿದ್ದಾರೆ ಮಲ್ಟಿಪ್ಲೆಕ್ಸ್ ಸಿಬ್ಬಂದಿ. ರಾತ್ರಿಯ ಶೋನ ಟಿಕೆಟ್ ದರ 160 ಇತ್ತು. ಆದರೆ ಏಕಾ-ಏಕಿ ಟಿಕೆಟ್ ಬೆಲೆ ಏರಿಸಿ 200 ರೂಪಾಯಿ ಮಾಡಲಾಗಿದೆ. ಪ್ರೇಕ್ಷಕರಿಂದ ಟಿಕೆಟ್ ಬೆಲೆಗಿಂತಲೂ 40 ರೂಪಾಯಿ ಹೆಚ್ಚಿನ ಮೊತ್ತ ವಸೂಲಾತಿ ಮಾಡುವ ಪ್ರಯತ್ನವನ್ನು ಮಲ್ಟಿಪ್ಲೆಕ್ಸ್ ಸಿಬ್ಬಂದಿ ಮಾಡಿದ್ದಾರೆ.
ಇದರಿಂದ ಸಿಟ್ಟಾದ ಕೆಲವು ಪ್ರೇಕ್ಷಕರು ಮಲ್ಟಿಪ್ಲೆಕ್ಸ್ ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಾರೆ. ಪಟ್ಟು ಬಿಡದ ಮಲ್ಟಿಪ್ಲೆಕ್ಸ್ ಸಿಬ್ಬಂದಿ ಪ್ರೇಕ್ಷಕರೊಟ್ಟಿಗೆ ಏರಿದ ದನಿಯಲ್ಲಿ ವಾಗ್ವಾದ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಕೊನೆಗೆ ನಜಾರ್ಬಾದ್ ಪೊಲೀಸರು ಮಾಲ್ಗೆ ಆಗಮಿನಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆ ಕುರಿತು ಇನ್ನಷ್ಟು ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.
ಕೆಲವು ದಿನಗಳ ಹಿಂದಷ್ಟೆ ಮಲ್ಟಿಪ್ಲೆಕ್ಸ್ಗಳಲ್ಲಿ ಮಾರಾಟವಾಗುವ ಪಾಪ್ಕಾರ್ನ್ ಇನ್ನಿತರೆ ತಿಂಡಿ ತಿನಿಸು ಹಾಗೂ ಪಾನೀಯಗಳ ಮೇಲಿನ ತೆರಿಗೆಯನ್ನು ಇಳಿಸಲಾಗಿತ್ತು. ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ವೀಕ್ಷಣೆಯನ್ನು ತುಸು ಅಗ್ಗ ಮಾಡುವ ನಿರ್ಧಾರವನ್ನು ಸರ್ಕಾರ ತಳೆದಿತ್ತು, ಅದರ ಬೆನ್ನಲ್ಲೆ ಇದೀಗ ಮಲ್ಟಿಪ್ಲೆಕ್ಸ್ಗಳು ಹಠಾತ್ತನೆ ಟಿಕೆಟ್ ಬೆಲೆ ಏರಿಕೆ ಮಾಡಿ, ಸಾಮಾನ್ಯನ ಜೇಬಿಗೆ ಕತ್ತರಿ ಹಾಕುವ ಯತ್ನ ಮಾಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ