ಹೊಸಬರು ಚಿತ್ರರಂಗಕ್ಕೆ ಕಾಲಿಟ್ಟಾಗ ಅವರ ಜೊತೆ ಹೊಸ ಐಡಿಯಾಗಳು ಕೂಡ ಬರುತ್ತವೆ. ಹೊಸ ರೀತಿಯ ಪ್ರಯೋಗಗಳು ಆಗುತ್ತವೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ನಮಸ್ತೆ ಗೋಷ್ಟ್’ (Namasthe Ghost) ಸಿನಿಮಾ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರದಲ್ಲಿ ಹಾರರ್-ಕಾಮಿಡಿ (Horror Comedy) ಕಥಾಹಂದರ ಇದೆ. ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಇವೆ. ಅಷ್ಟರಲ್ಲಾಗಲೇ ಸಾವಿರಾರು ಪ್ರೇಕ್ಷಕರು ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ? ಖಂಡಿತಾ ಸಾಧ್ಯವಿದೆ. ‘ನಮಸ್ತೆ ಗೋಷ್ಟ್’ ಬಿಡುಗಡೆಗೂ ಮುನ್ನ ಅನೇಕ ಕಾಲೇಜುಗಳಲ್ಲಿ ಉಚಿತವಾಗಿ ಪ್ರದರ್ಶನ ಮಾಡಲಾಗಿದೆ. ಅಂದಾಜು 6000 ವಿದ್ಯಾರ್ಥಿಗಳು (College Students) ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಭರತ್ ನಂದ ಅವರು ‘ನಮಸ್ತೆ ಗೋಷ್ಟ್’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಆ್ಯಕ್ಷನ್-ಕಟ್ ಹೇಳುವುದರ ಜೊತೆಗೆ ಅವರು ಹೀರೋ ಆಗಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ವಿದ್ಯಾ ರಾಜ್ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಬಾಲ ರಾಜುವಾಡಿ ,ಶಿವಮೊಗ್ಗ ಹರೀಶ್, ಶಿವಕುಮಾರ್ ಆರಾಧ್ಯ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಶೀರ್ಷಿಕೆ ನೋಡಿದರೆ ಇದು ಹಾರರ್ ಸಿನಿಮಾ ಎಂಬುದು ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ಹಾರರ್ ಮಾತ್ರವಲ್ಲದೇ ಕಾಮಿಡಿ ಕೂಡ ಇದೆ. ‘ನಮಸ್ತೆ ಗೋಷ್ಟ್’ ಸಿನಿಮಾವನ್ನು ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಯದುನಂದನ್ ಅವರ ಸಂಗೀತ ನಿರ್ದೇಶನ ಮತ್ತು ವಿನಯ್ ಕುಮಾರ್ ಅವರ ಸಂಕಲನದಲ್ಲಿ ಈ ಚಿತ್ರ ಮೂಡಿಬಂದಿದೆ.
ಇಂದಿನ ಜಮಾನದಲ್ಲಿ ಮೌತ್ ಪಬ್ಲಿಸಿಟಿ ತುಂಬ ಮುಖ್ಯವಾಗುತ್ತದೆ. ಯುವಕ-ಯುವತಿಯರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾಡುತ್ತಿದ್ದಾರೆ ಎಂದರೆ ಆ ಸಿನಿಮಾದಲ್ಲಿ ಮನರಂಜನೆ ಖಂಡಿತವಾಗಿಯೂ ಇದೆ ಎಂದರ್ಥ. ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೇ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಕೂಡ ‘ನಮಸ್ತೆ ಗೋಷ್ಟ್’ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅದನ್ನೇ ಒಂದು ಟ್ರೇಲರ್ ರೀತಿಯಲ್ಲಿ ಚಿತ್ರತಂಡ ಹಂಚಿಕೊಂಡಿದೆ. ಇಡೀ ಸಿನಿಮಾದಲ್ಲಿ ತಮಗೆ ಏನೆಲ್ಲ ಇಷ್ಟ ಆಯ್ತು ಎಂಬುದನ್ನು ಯುವ ಪ್ರೇಕ್ಷಕರು ವಿವರಿಸಿದ್ದಾರೆ.
ಇದನ್ನೂ ಓದಿ: ಹಾಲಿವುಡ್ಗೆ ಹಾರಲಿದ್ದಾರೆ ಪ್ರಭಾಸ್? ಹಾರರ್ ಕಥೆಯಲ್ಲಿ ಸಲಾರ್ ಹೀರೋ
30ಕ್ಕೂ ಅಧಿಕ ಕಾಲೇಜುಗಳಲ್ಲಿ ಉಚಿತವಾಗಿ ಸಿನಿಮಾ ಪ್ರದರ್ಶನ ಮಾಡುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಅಲ್ಲಿನ ಸಭಾಂಗಣವನ್ನೇ ಥಿಯೇಟರ್ ರೀತಿ ಬಳಸಿಕೊಳ್ಳಬೇಕಿತ್ತು. ಇರುವ ಸೌಕರ್ಯವನ್ನೇ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಥಿಯೇಟರ್ ರೀತಿಯ ಫೀಲ್ ನೀಡಲು ಪ್ರಯತ್ನಿಸಲಾಗಿದೆ. ಅದರ ಎಲ್ಲ ಖರ್ಚನ್ನು ಚಿತ್ರತಂಡವೇ ಭರಿಸಿದೆ. ಜುಲೈ 14ರಂದು ‘ನಮಸ್ತೆ ಗೋಷ್ಟ್’ ಚಿತ್ರ ಬಿಡುಗಡೆ ಆಗಲಿದೆ. ಯುವ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾ ತಂಡ ಮಾಡಿದ ಪ್ರಯತ್ನ ನಿಜಕ್ಕೂ ಭಿನ್ನವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.