ವಿನೋದ್ ರಾಜ್ ಅವರು ತುಂಬ ಶ್ರದ್ಧೆಯಿಂದ ಲೀಲಾವತಿ ಸ್ಮಾರಕವನ್ನು ನಿರ್ಮಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಸ್ಮಾರಕದ ಉದ್ಘಾಟನೆ ಮಾಡಲಾಯಿತು. ಈಗ ಆ ಜಾಗದಲ್ಲಿ ಸಿನಿಮಾದ ಮುಹೂರ್ತ ನಡೆದಿದೆ ಎಂಬುದು ವಿಶೇಷ. ಹೌದು, ‘ಜನರಿಂದ ನಾನು ಮೇಲೆ ಬಂದೆ’ ಶೀರ್ಷಿಕೆ ಇರುವ ಹೊಸ ಸಿನಿಮಾಗೆ ಲೀಲಾವತಿ ಅವರ ಸ್ಮಾರಕದಲ್ಲಿ ಇತ್ತೀಚೆಗೆ ಮುಹೂರ್ತ ಮಾಡಲಾಯಿತು. ಲೀಲಾವತಿ ಸ್ಮಾರಕದಲ್ಲಿ ಮುಹೂರ್ತ ಮಾಡಿಕೊಂಡ ಮೊದಲ ಸಿನಿಮಾ ಇದು. ‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾದ ಪೂಜೆಯ ಸಂದರ್ಭದಲ್ಲಿ ವಿನೋದ್ ರಾಜ್ ಕೂಡ ಉಪಸ್ಥಿತರಿದ್ದರು.
ಶೀರ್ಷಿಕೆಯ ಕಾರಣದಿಂದಲೇ ‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾ ಗಮನ ಸೆಳೆಯುತ್ತಿದೆ. ಡಾ. ರಾಜ್ಕುಮಾರ್ ನಟಿಸಿದ್ದ ಕೊನೆಯ ಸಿನಿಮಾ ‘ಶಬ್ಧವೇದಿ’ಯಲ್ಲಿ ‘ಜನರಿಂದ ನಾನು ಮೇಲೆ ಬಂದೆ..’ ಹಾಡು ಸೂಪರ್ ಹಿಟ್ ಆಗಿತ್ತು. ಆ ಸಾಲನ್ನೇ ಈಗ ಶೀರ್ಷಿಕೆಯಾಗಿಸಿಕೊಂಡು ಹೊಸ ಸಿನಿಮಾ ಮಾಡಲಾಗುತ್ತಿದೆ. ಈ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ವಿನೋದ್‌ರಾಜ್ ಅವರು ಕ್ಲ್ಯಾಪ್ ಮಾಡಿ ಶುಭ ಕೋರಿದರು.
ಲೀಲಾವತಿ ನಾಗರಾಜ್ ಅವರು ‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ‘ಮಂಜುನಾಥ್ ಸಿನಿಮಾಸ್’ ಬ್ಯಾನರ್ ಮೂಲಕ ಹೇಮಾವತಿ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ನವಿಲುಗರಿ ನವೀನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಬರುತ್ತಿರುವ 4ನೇ ಸಿನಿಮಾ ಇದು. ನಾಯಕನಾಗಿ ಅವರಿಗೆ ಇದು ಎರಡನೇ ಸಿನಿಮಾ.
‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾದಲ್ಲಿ ನವೀನ್ ಜೊತೆ ಗಂಧರ್ವ ರಾಜ್ (ಶಂಕರ್) ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಸೌಂದರ್ಯಾ ಹಾಗೂ ಕೃತಿಕಾ ದಿವಾಕರ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿನೋದ್ ರಾಜ್ ಕೂಡ ನಟಿಸುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿದೆ. ಇನ್ನುಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: ಅಮ್ಮನಿಗಾಗಿ ನಟ ವಿನೋದ್ ಕಟ್ಟಿಸಿರುವ ಸುಂದರ ಸ್ಮಾರಕ ಹೇಗಿದೆ ನೋಡಿ
ಪ್ರಣವ್ ಸತೀಶ್ ಅವರ ಸಂಗೀತ ಈ ಸಿನಿಮಾಗೆ ಇದೆ. ಜಿ.ವಿ. ರಮೇಶ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಗೌತಮ್ ಗೌಡ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಚೆನ್ನೈ ಮುಂತಾದ ಕಡೆ ಶೂಟಿಂಗ್ ನಡೆಯಲಿದೆ. ನೈಜ ಘಟನೆಯನ್ನು ಆಧರಿಸಿ ಕಥೆ ಬರೆಯಲಾಗಿದೆ. ಡ್ಯಾನ್ಸ್ ಕುರಿತಾದ ಕತೆ ಈ ಸಿನಿಮಾದಲ್ಲಿ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.