ಭಿನ್ನ ಮಾದರಿಯ ಸಿನಿಮಾಗಳ ಆಯ್ಕೆ ಮಾಡುತ್ತಾ ಬರುತ್ತಿರುವ ಮೂಲಕ ಗಮನ ಸೆಳೆದಿರುವ ರಿಷಿ (Rishi) ಇದೀಗ ‘ರಾಮನ ಅವತಾರ‘ (Ramana Avathara) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ ಅಂಥಹಾ ಸಿನಿಮಾಗಳ ಮೂಲಕ ಬಹುವಾಗಿ ಗಮನ ಸೆಳೆದಿರುವ ರಿಷಿ ಇತ್ತೀಚೆಗೆ ವೆಬ್ ಸರಣಿಯೊಂದರಲ್ಲಿ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ರಿಷಿ ನಟನೆಯ ‘ರಾಮನ ಅವತಾರ’ ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ.
ರಿಷಿ ನಟನೆಯ ‘ರಾಮನ ಅವತಾರ’ ಸಿನಿಮಾದ ‘ರಾಮ ಈಸ್ ಜೆಂಟಲ್ ಮೆನ್’ ಹಾಡು ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಇದೀಗ ‘ರಾಮನ ಅವತಾರ’ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ‘ಮನಸ್ಸು ಬೇರೆಯೇ ದಿಕ್ಕಲಿ ಸಾಗಲು’ ಎಂದು ಶುರುವಾಗುವ ಹಾಡು ಗಮನ ಸೆಳೆಯುತ್ತಿದೆ. ಹಾಡಿಗೆ ನಿರ್ದೇಶಕ ಸಿಂಪಲ್ ಸುನಿ ಸಾಹಿತ್ಯ ಒದಗಿಸಿದ್ದಾರೆ. ಮನಸ್ಸು ಬೇರೆ ದಿಕ್ಕಿಗೆ ಸಾಗಲು ಹಾಡನ್ನು ಸಂಚಿತ್ ಹೆಗ್ಡೆ ಹಾಡಿದ್ದಾರೆ. ಸಂಗೀತ ನಿರ್ದೇಶಕ ಜೂಡ್ ಸ್ಯಾಂಡಿ ರಾಗ ಸಂಯೋಜಿಸಿದ್ದಾರೆ. ಉಡುಪಿ ಕಡಲ ಕಿನಾರೆಯಲ್ಲಿ ಇಡೀ ಹಾಡನ್ನು ಸುಂದರವಾಗಿ ಚಿತ್ರೀಕರಣ ಮಾಡಲಾಗಿದೆ. ರಿಷಿ ಮತ್ತು ಪ್ರಣೀತಾ ಜೋಡಿ ಈ ಸೊಗಸಾದ ಹಾಡಿನಲ್ಲಿ ಗಮನಸೆಳೆಯುತ್ತಿದ್ದಾರೆ.
‘ರಾಮನ ಅವತಾರ’ ಚಿತ್ರದಲ್ಲಿ ಪ್ರಣಿತಾ ಸುಭಾಷ್ ಮತ್ತು ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ಪ್ರತಿಭಾನ್ವಿತ ನಟ ಅರುಣ್ ಸಾಗರ್ ಸಹ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಾಟಿ ಫ್ಯಾಕ್ಟರಿ’ ಹೆಸರಿನ ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯತೆ ಪಡೆದಿರುವ ವಿಕಾಸ್ ಪಂಪಾಪತಿ ‘ರಾಮನ ಅವತಾರ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಕಾಸ್ ಪಂಪಾಪತಿಗೆ ಇದು ಮೊದಲ ಸಿನಿಮಾ.
ಇದನ್ನೂ ಓದಿ:ರುದ್ರ ಗರುಡ ಪುರಾಣ: ಖಡಕ್ ಪೊಲೀಸ್ ಅಧಿಕಾರಿಯಾದ ರಿಷಿ, ಶುಭಕೋರಿದ ನೀನಾಸಂ ಸತೀಶ್
‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಅವರು ಸ್ಟಾರ್ ಫ್ಯಾಬ್ ನಿರ್ಮಾಣ ಸಂಸ್ಥೆಯ ಅಡಿ ‘ರಾಮನ ಅವತಾರ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಗೆ ಸೇರಿದ ಈ ಸಿನಿಮಾಕ್ಕೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಜೂಡಾ ಸ್ಯಾಂಡಿ ಸಿನಿಮಾಕ್ಕೆ ಸಂಗೀತ ಒದಗಿಸಿದ್ದಾರೆ. ಎಡಿಟಿಂಗ್ ಕಾರ್ಯ ಅಮರನಾಥ್ ಅಮರ್ನಾಥ್ ಅವರದ್ದು. ಬೆಂಗಳೂರು, ಉಡುಪಿ ಹಾಗೂ ಇನ್ನೂ ಕೆಲವೆಡೆಗಳಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಜಾರಿಯಲ್ಲಿದೆ. ಕೆಲವೇ ದಿನಗಳಲ್ಲಿ ಸಿನಿಮಾವನ್ನು ಸೆನ್ಸಾರ್ ಮಂಡಳಿಗೆ ಕಳಿಸಲಾಗುತ್ತದೆ.
ಒಂದೇ ಮಾದರಿಯ ಸಿನಿಮಾ ಹಾಗೂ ಪಾತ್ರಗಳಿಗೆ ಅಂಟಿಕೊಳ್ಳದೆ ಹೊಸ ಪ್ರಯೋಗಗಳಿಗೆ ರಿಷಿ ತಮ್ಮನ್ನು ಒಡ್ಡಿಕೊಳ್ಳುತ್ತಾ ಬಂದಿದ್ದಾರೆ. ಕಾಮಿಡಿ, ಸಸ್ಪೆನ್ಸ್, ಲವ್ ಸ್ಟೋರಿ ಎಲ್ಲ ರೀತಿಯ ಕತೆಗೂ ಪಾತ್ರಕ್ಕೂ ರಿಷಿ ಸೈ. ಸಿನಿಮಾ ಮಾತ್ರವೇ ಅಲ್ಲದೆ ವೆಬ್ ಸೀರಿಸ್ ನಲ್ಲೂ ರಿಷಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಶೈತಾನ್’ ಹೆಸರಿನ ವೆಬ್ ಸರಣಿಯಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ರಿಷಿ ಮಿಂಚಿದ್ದಾರೆ. ಈ ವೆಬ್ ಸರಣಿಯನ್ನು ತೆಲುಗಿನ ಜನಪ್ರಿಯ ನಿರ್ದೇಶಕ ಮಹಿ ರಾಘವ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ