ಬೆಂಗಳೂರಿಂದ ಹಿಮಾಲಯ ತನಕ ಸಾಗುವ ಕನ್ನಡ ಸಿನಿಮಾ; ಇದು ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸ್ಪೆಷಲ್
Ello Jogappa Ninna Aramane: ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾಗಾಗಿ ನಟ ಅಂಜನ್ ನಾಗೇಂದ್ರ ಅವರು ದೇಶಾದ್ಯಂತ ಪ್ರಯಾಣ ಮಾಡಿದ್ದಾರೆ. ಅದಕ್ಕೆ ಒಂದು ಕಾರಣ ಕೂಡ ಇದೆ.
‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ (Ello Jogappa Ninna Aramane) ಶೀರ್ಷಿಕೆಯಲ್ಲಿ ಹೊಸ ಕನ್ನಡ ಸಿನಿಮಾ (Kannada Cinema) ಮೂಡಿಬರುತ್ತಿದೆ. ಹಯವದನ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿದ್ದ ಈ ಸಿನಿಮಾ ತಂಡ ಒಂದು ಸಾಂಗ್ನ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿತ್ತು. ಈಗ ಅದು ಕೂಡ ಪೂರ್ಣಗೊಂಡಿದೆ. ‘ಹೌದಾ ಹುಲಿಯಾ ಹೌದೌದು..’ ಎಂಬ ಈ ಗೀತೆಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನಾಯಕ ನಟ ಅಂಜನ್ ನಾಗೇಂದ್ರ ಅವರು ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಆರ್ಟ್ ಡೈರೆಕ್ಟರ್ ಹೊಸಮನೆ ಮೂರ್ತಿ ಅವರು ಹಾಕಿದ್ದ ಅದ್ದೂರಿಯಾದ ಸೆಟ್ನಲ್ಲಿ ಮಾಸ್ ಸಾಂಗ್ ಚಿತ್ರೀಕರಣ ನಡೆದಿದೆ.
ಈ ಸಿನಿಮಾಗಾಗಿ ನಟ ಅಂಜನ್ ನಾಗೇಂದ್ರ ಅವರು ದೇಶಾದ್ಯಂತ ಪ್ರಯಾಣ ಮಾಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಈ ಸಿನಿಮಾದ ಕಥೆಯಲ್ಲಿ ಒಂದು ಜರ್ನಿ ಇರಲಿದೆ. ‘ಈ ಚಿತ್ರಕ್ಕಾಗಿ ಇಡೀ ಇಂಡಿಯಾ ಸುತ್ತಿದ್ದೇನೆ. ಇದು ಒಂದು ಜರ್ನಿ ಸಿನಿಮಾ. ತಂದೆ ಮತ್ತು ಮಗನ ಬಾಂಧವ್ಯದ ಕಹಾನಿ ಇದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಹೋಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ’ ಎಂದು ಅಂಜನ್ ಹೇಳಿದ್ದಾರೆ.
ಹಲವು ರಾಜ್ಯಗಳ ಅನೇಕ ಲೊಕೇಷನ್ಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಆ ಬಗ್ಗೆ ನಿರ್ದೇಶಕ ಹಯವದನ ಮಾತನಾಡಿದ್ದಾರೆ. ‘ಈ ಸಿನಿಮಾ ಮೂಲ ಪಾತ್ರವು ಹೋಗಿ ಹಿಮಾಲಯವನ್ನು ತಲುಪುತ್ತದೆ. ಆ ಪ್ರಯಾಣಕ್ಕೆ ಒಂದು ಉದ್ದೇಶ ಕೂಡ ಇದೆ. ಈ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬುದು ಜನಪದ ಗೀತೆಯ ಸಾಲು. ಹಾಗೆಯೇ ‘ಜೋಗಿ’ ಸಿನಿಮಾದ ಹಾಡಿನಲ್ಲೂ ಈ ಸಾಲು ಬಳಕೆ ಆಗಿದೆ. ನಮ್ಮ ಕಥೆ ಕೂಡ ಈ ಶೀರ್ಷಿಕೆಗೆ ನ್ಯಾಯ ಸಲ್ಲಿಸುತ್ತದೆ’ ಎಂದಿದ್ದಾರೆ ನಿರ್ದೇಶಕರು.
ಈ ಸಿನಿಮಾದಲ್ಲಿ ಅಂಜನ್ ನಾಗೇಂದ್ರ ಮತ್ತು ಹೊಸ ನಟಿ ವೆನ್ಯಾ ರೈ ಅವರು ಜೋಡಿಯಾಗಿ ನಟಿಸಿದ್ದಾರೆ. ಸಂಜನಾ ದಾಸ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ. ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಬರೆದಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:07 pm, Sun, 23 July 23