
‘ಸೀತಾರಾಮ ಕಲ್ಯಾಣ’ ತೆರೆಗೆ ಬಂದ ನಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಅವರು ಒಪ್ಪಿಕೊಂಡಿದ್ದ ‘ರೈಡರ್’ ಸಿನಿಮಾ ಕೆಲಸಗಳು ವಿಳಂಬವಾದವು. ಈಗ ಕೊವಿಡ್ ಮುಗಿದು ಚಿತ್ರಮಂದಿರಗಳು ಓಪನ್ ಆಗಿವೆ. ಜನರು ಮತ್ತೆ ಥಿಯೇಟರ್ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಸಾಲುಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ನಿಖಿಲ್ ಕುಮಾರ್ ನಟನೆಯ ‘ರೈಡರ್’ ಕೂಡ ರಿಲೀಸ್ ದಿನಾಂಕ ಘೋಷಣೆ ಮಾಡಿದೆ. ಕ್ರಿಸ್ಮಸ್ ನಿಮಿತ್ತ ಸಿನಿಮಾ ಡಿಸೆಂಬರ್ 24ರಂದು ತೆರೆಗೆ ಬರುತ್ತಿದೆ.
ವಿಜಯ್ ಕುಮಾರ್ ಕೊಂಡ ಅವರು ‘ರೈಡರ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿಖಿಲ್ ಕುಮಾರ್ ಆಪ್ತ ಸುನೀಲ್ ಗೌಡ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಲಹರಿ ಫಿಲ್ಮ್ಸ್ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವೆಂಬರ್ ತಿಂಗಳಲ್ಲೇ ‘ರೈಡರ್’ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ಕೆಲಸಗಳು ಪೂರ್ಣಗೊಳ್ಳದ ಕಾರಣ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.
ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಹಿರಿಯ ನಟ ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ಶಿವರಾಜ್.ಕೆ.ಆರ್.ಪೇಟೆ, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ನಿಹಾರಿಕ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ನಟಿ ಕಾಶ್ಮೀರಿ ಪರ್ದೇಸಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ. ‘ಡವ ಡವಢ..’ ಸಿನಿಮಾದ ಹಾಡು ಇತ್ತೀಚೆಗೆ ರಿಲೀಸ್ ಆಗಿ ಜನ ಮನ್ನಣೆ ಪಡೆದುಕೊಂಡಿತ್ತು.
‘ರೈಡರ್’ ಸಿನಿಮಾ ದೊಡ್ಡ ಸ್ಪರ್ಧೆ ಎದುರಿಸಲಿದೆ. ಡಿಸೆಂಬರ್ ತಿಂಗಳಲ್ಲಿ ದೊಡ್ಡ ಬಜೆಟ್ನ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಜನವರಿಯಲ್ಲೂ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ. ‘ಪುಷ್ಪ’, ‘ಆರ್ಆರ್ಆರ್’, ‘ರಾಧೆ ಶ್ಯಾಮ್’, ‘ಸರ್ಕಾರಿ ವಾರು ಪಾಟ’ ಚಿತ್ರಗಳು ‘ರೈಡರ್’ ಸಿನಿಮಾದ ಆಸುಪಾಸಿನ ಡೇಟ್ನಲ್ಲಿಯೇ ತೆರೆಗೆ ಬರುತ್ತಿವೆ. ಈ ಮೂಲಕ ನಿಖಿಲ್ ಸಿನಿಮಾ ದೊಡ್ಡ ಸಿನಿಮಾಗಳ ಜತೆ ಸ್ಪರ್ಧೆಗೆ ಇಳಿದಿದೆ.
ಇದನ್ನೂ ಓದಿ: Rider Movie: ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್
ಮತ್ತೆ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡ ನಿಖಿಲ್: ಜನ್ಮದಿನಕ್ಕೆ ರಿಲೀಸ್ ಆಯ್ತು ರೈಡರ್ ಟೀಸರ್
Published On - 8:51 pm, Mon, 22 November 21