ಸಿನಿಮಾಗಳ ಟಿಕೆಟ್ ದರ ಹೆಚ್ಚಳ ಮಾಡಬೇಕೆಂದು ನೆರೆಯ ರಾಜ್ಯಗಳಲ್ಲಿ ಸರ್ಕಾರ ಹಾಗೂ ಚಿತ್ರರಂಗದ ನಡುವೆ ಕಿತ್ತಾಟ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಸಹ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ ದರಗಳ ಬಗ್ಗೆ ಆಗಾಗ್ಗೆ ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಕನ್ನಡದ ಸಿನಿಮಾ ಒಂದು ಉಚಿತವಾಗಿ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಆದರೆ ಅರ್ಧ ಸಿನಿಮಾ ಮಾತ್ರ!
ಹೌದು, ‘ನಾಟ್ ಔಟ್’ ಹೆಸರಿನ ಕನ್ನಡ ಸಿನಿಮಾ ಒಂದು ಕೆಲವೇ ಜುಲೈ 19ಕ್ಕೆ ತೆರೆಗೆ ಬರಲಿದ್ದು, ಈ ಸಿನಿಮಾ ನೋಡಲು ಬಯಸುವ ಜನರಿಗೆ ಟಿಕೆಟ್ ಉಚಿತ ಆದರೆ ಒಂದು ಷರತ್ತಿದೆ. ಉಚಿತ ಟಿಕೆಟ್ ಇರುವುದು ಕೇವಲ ಅರ್ಧ ಸಿನಿಮಾಕ್ಕೆ ಮಾತ್ರ. ಇನ್ನರ್ಧ ಸಿನಿಮಾ ನೋಡಬೇಕು ಎಂದುಕೊಂಡರೆ ಆಗ ಟಿಕೆಟ್ ಖರೀದಿ ಮಾಡಬೇಕು. ಅರ್ಧ ಸಿನಿಮಾ ನೋಡಿ ಸಾಕಪ್ಪ ಎಂದುಕೊಂಡರೆ ಹಣ ಕೊಡದೆ ಚಿತ್ರಮಂದಿರದಿಂದ ಹೊರಗೆ ಹೋಗಬಹುದು. ಅರ್ಧ ಸಿನಿಮಾ ನೋಡಿದವರು ಹಣ ಕೊಟ್ಟಾದರೂ ಸಹ ಪೂರ್ತಿ ಸಿನಿಮಾ ನೋಡಿಯೇ ನೋಡುತ್ತಾರೆ ಎಂಬುದು ಚಿತ್ರತಂಡದ ನಂಬಿಕೆ.
ಇದನ್ನೂ ಓದಿ:ಪವನ್ ಕಲ್ಯಾಣ್ರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಯಿತೇ?
ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ಅವರುಗಳು ‘ನಾಟ್ ಔಟ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಜಯ್ ಪೃಥ್ವಿ, ರಚನಾ ಇಂದರ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಸಿನಿಮಾವನ್ನು ಅಂಬರೀಶ್ ಎಂ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಮಗುವನ್ನು ಆಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಹನೀಫ್ ಮೂವರು ಸೇರಿ ಟ್ರೇಲರ್ ಬಿಡುಗಡೆ ಮಾಡಿ, ಸಿನಿಮಾಕ್ಕೆ ಶುಭ ಕೋರಿದರು.
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಂಬರೀಶ್, ಲಾಕ್ ಡೌನ್ ಸಂದರ್ಭದಲ್ಲಿ ನಾನು ಬರೆದ ಕಥೆಯೇ ‘ನಾಟ್ ಔಟ್’. ಕಥೆ ಮೆಚ್ಚಿ ನಿರ್ಮಾಪಕರು ಹಣ ಹೂಡಲು ಮುಂದೆ ಬಂದರು. ಟೊರೊಂಟೊದಲ್ಲಿ ನಟನೆ ತರಬೇತಿ ಮುಗಿಸಿರುವ ಅಜಯ್ ಪೃಥ್ವಿ ಈ ಸಿನಿಮಾದ ನಾಯಕ. ರಚನಾ ಇಂದರ್ ನಾಯಕಿ. ರವಿಶಂಕರ್, ಕಾಕ್ರೋಚ್ ಸುಧೀರ್ ಇತರೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಡಾರ್ಕ್ ಹ್ಯೂಮರ್ ಇದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ