ಪವನ್ ಕಲ್ಯಾಣ್ರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಯಿತೇ?
ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಯಿತೇ? ಹೀಗೊಂದು ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ. ನಿರ್ದೇಶಕ ಹರೀಶ್ ಶಂಕರ್ ಆ ಬಗ್ಗೆ ಮಾತನಾಡಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಈಗ ಫುಲ್ ಟೈಮ್ ರಾಜಕಾರಣಿಯಾಗಿದ್ದಾರೆ. ಹತ್ತು ವರ್ಷಗಳ ರಾಜಕೀಯ ಹೋರಾಟಕ್ಕೆ ಫಲ ದೊರೆತಿದ್ದು ಕಳೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದ್ದು ಮಾತ್ರವೇ ಅಲ್ಲದೆ ಆಂಧ್ರದ ಉಪ ಮುಖ್ಯಮಂತ್ರಿ ಸಹ ಆಗಿದ್ದಾರೆ. ಜೊತೆಗೆ ಕೆಲವು ಪ್ರಮುಖ ಖಾತೆಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹೀಗಿರುವಾಗ ಪವನ್ ಕಲ್ಯಾಣ್ ಚಿತ್ರರಂಗದಿಂದ ಇನ್ನೈದು ವರ್ಷ ದೂರಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆ ಬಗ್ಗೆ ಪವನ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಸ್ಪಷ್ಟನೆ ಬೆನ್ನಲ್ಲೆ ಪವನ್ರ ಹೊಸ ಸಿನಿಮಾ ಒಂದು ನಿಂತು ಹೋಯ್ತು ಎಂಬ ಸುದ್ದಿ ಹರಿದಾಡುತ್ತಿದೆ.
ಪವನ್ ಕಲ್ಯಾಣ್ ಚುನಾವಣೆ ಪ್ರಚಾರ ಪ್ರಾರಂಭ ಮಾಡುವ ಮುನ್ನ. ‘ಉಸ್ತಾದ್ ಭಗತ್ ಸಿಂಗ್’, ‘ಹರಿಹರ ವೀರ ಮಲ್ಲು’ ಹಾಗೂ ‘ಓಜಿ’ ಸಿನಿಮಾಗಳ ಚಿತ್ರೀರಕಣದಲ್ಲಿ ತೊಡಗಿಕೊಂಡಿದ್ದರು. ಕೆಲವು ಸಿನಿಮಾಗಳ ಚಿತ್ರೀಕರಣ ಮುಗಿದಿದ್ದರೆ ಕೆಲವು ಸಿನಿಮಾಗಳ ಚಿತ್ರೀಕರಣ ಮುಗಿದಿರಲಿಲ್ಲ. ಇತ್ತೀಚೆಗೆ ಸಿನಿಮಾದಲ್ಲಿ ನಟಿಸುವ ಕುರಿತು ಸ್ಪಷ್ಟನೆ ನೀಡಿದ್ದ ಪವನ್ ಕಲ್ಯಾಣ್, ‘ಓಜಿ’ ಸಿನಿಮಾ ಬಗ್ಗೆ ಮಾತ್ರವೇ ಮಾತನಾಡಿದರು. ಆದರೆ ‘ಉಸ್ತಾದ್ ಭಗತ್ ಸಿಂಗ್’ ಬಗ್ಗೆ ಮಾತನಾಡಿರಲಿಲ್ಲ. ಹಾಗಾಗಿ ಈ ಸಿನಿಮಾ ನಿಂತು ಹೋಯ್ತೆ ಎಂಬ ಅಭಿಪ್ರಾಯ ಮೂಡಿತ್ತು.
ಇದನ್ನೂ ಓದಿ:ಪೀಠಾಪುರಂನಲ್ಲಿ 3.5 ಎಕರೆ ಜಮೀನು ಖರೀದಿಸಿದ ನಟ ಪವನ್ ಕಲ್ಯಾಣ್
ಈ ಕುರಿತು ಸ್ಪಷ್ಟನೆ ನೀಡಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿರ್ದೇಶಕ ಹರೀಶ್ ಶಂಕರ್, ‘ಸಿನಿಮಾ ಪ್ರಾರಂಭವೇ ಆಗಿಲ್ಲ ಎಂದಾಗಲೇ ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈಗಂತೂ ಇಂಥಹಾ ಗಾಸಿಪ್ ಸುದ್ದಿಗಳನ್ನು ಓದುವುದಕ್ಕೂ ಸಹ ಸಮಯವಿಲ್ಲ’ ಎಂದಿದ್ದಾರೆ. ಅಸಲಿಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಪ್ರಾರಂಭಕ್ಕೆ ಮುನ್ನ ‘ಭವತೀಯಡು ಭಗತ್ ಸಿಂಗ್’ ಎಂದು ಹೆಸರಿಡಲಾಗಿತ್ತು, ಪೂಜಾ ಭಟ್ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಆ ಸಿನಿಮಾ ಪ್ರಾರಂಭ ಆಗಲೇ ಇಲ್ಲ. ಕೊನೆಗೆ ‘ಉಸ್ತಾದ್ ಭಗತ್ ಸಿಂಗ್’ ಹೆಸರಲ್ಲಿ ಸಿನಿಮಾ ಪ್ರಾರಂಭವಾಗಿ ಸಿನಿಮಾಕ್ಕೆ ಕನ್ನಡತಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಮಾಡಿದರು.
ಸಿನಿಮಾದ ಚಿತ್ರೀಕರಣ ಒಂದು ಹಂತಕ್ಕೆ ಮುಗಿದಿದ್ದು ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಗಡ್ ಪೊಲೀಸ್ ಪಾತ್ರದಲ್ಲಿ ಪವನ್ ಕಲ್ಯಾಣ್ ಭಾಗಿ ಆಗಿದ್ದಾರೆ. ಈ ಹಿಂದೆ ಪವನ್ ನಟಿಸಿದ್ದ ‘ಗಬ್ಬರ್ ಸಿಂಗ್’ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದರು. ಅಲ್ಲದೆ ಅಲ್ಲು ಅರ್ಜುನ್ ನಟನೆಯ ‘ದುವ್ವಾಡ ಜಗನ್ನಾದ’, ಎನ್ಟಿಆರ್ ನಟನೆಯ ‘ರಮಯ್ಯ ವಸ್ತಾವಯ್ಯ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ