ಪೀಠಾಪುರಂನಲ್ಲಿ 3.5 ಎಕರೆ ಜಮೀನು ಖರೀದಿಸಿದ ನಟ ಪವನ್ ಕಲ್ಯಾಣ್
ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದ ಶಾಸಕರಾಗಿದ್ದು, ಕ್ಷೇತ್ರದಲ್ಲಿ 3.5 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಘನ ಉದ್ದೇಶದಿಂದ ಈ ಜಮೀನು ಖರೀದಿ ಮಾಡಿದ್ದು, ಪವನ್ ಕಲ್ಯಾಣ್ ಉದ್ದೇಶ ಸಾರ್ಥಕವಾಗುತ್ತದೆಯೇ ನೋಡಬೇಕು.
ಕಳೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಪವನ್ ಕಲ್ಯಾಣ್ ಸ್ಪರ್ಧಿಸಿದ್ದರು. ಆದರೆ ಎರಡೂ ಕ್ಷೇತ್ರಗಳಲ್ಲಿಯೂ ಸೋಲನುಭವಿಸಿದರು. ಆದರೆ ಕೇವಲ ಐದು ವರ್ಷದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪವನ್ ಕಲ್ಯಾಣ್ರಿಗೆ ಮೊಟ್ಟ ಮೊದಲ ಚುನಾವಣಾ ಜಯ ದೊರೆತಿದೆ. ಮೊದಲ ಜಯದಲ್ಲಿಯೇ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ ಆಗಿದ್ದಾರೆ. ಇದೆಲ್ಲದಕ್ಕೂ ಕಾರಣವಾಗಿದ್ದು ಪೀಠಾಪುರಂ ಮತದಾರರು. ಆಂಧ್ರದ ಡಿಸಿಎಂ ಆದ ಬಳಿಕ ನಿನ್ನೆ ಮೊದಲ ಬಾರಿಗೆ ಪೀಠಾಪುರಂಗೆ ಹೋಗಿದ್ದ ಪವನ್ ಕಲ್ಯಾಣ್ ಮತದಾರರಿಗೆ ಧನ್ಯವಾದ ಅರ್ಪಿಸಿದರು. ವಿಶೇಷವೆಂದರೆ ಪೀಠಾಪುರಂನಲ್ಲಿ ಜಮೀನು ಸಹ ಖರೀದಿ ಮಾಡಿದ್ದಾರೆ.
ಚುನಾವಣೆಗೆ ಮುನ್ನ ಪೀಠಾಪುರಂನಲ್ಲಿ ಪವನ್ ಕಲ್ಯಾಣ್ ದೊಡ್ಡ ಬಂಗಲೆಯೊಂದನ್ನು ಖರೀದಿ ಮಾಡಿದ್ದರು. ಚುನಾವಣೆ ಸಮಯದಲ್ಲಿ ಇದನ್ನು ತಮ್ಮ ಕಚೇರಿಯನ್ನಾಗಿ ಬಳಸಿದ್ದರು. ಇದೀಗ ಪೀಠಾಪುರಂನಲ್ಲಿ 3.5 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಪೀಠಾಪುರಂನ ಭೋಗಾಪುರಂನಲ್ಲಿ ಪವನ್ ಕಲ್ಯಾಣ್ ಈ ಜಮೀನು ಖರೀದಿ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನವಷ್ಟೆ ಈ ಆಸ್ತಿಯ ನೊಂದಾವಣಿ ಆಗಿದೆ.
ಪವನ್ ಕಲ್ಯಾಣ್ ಪೀಠಾಪುರಂನಲ್ಲಿಯೇ ಮನೆ ಕಟ್ಟಿಸಿ ಅಲ್ಲಿಯೇ ನೆಲೆಸಲು ನಿಶ್ಚಯಿಸಿದ್ದಾರೆ. ಈಗಾಗಲೇ ಒಂದು ಕಚೇರಿಯನ್ನು ಪೀಠಾಪುರಂನಲ್ಲಿ ಹೊಂದಿರುವ ಪವನ್ ಈಗ ಎರಡು ಎಕರೆ ಪ್ರದೇಶದಲ್ಲಿ ದೊಡ್ಡ ಮನೆ ನಿರ್ಮಿಸಿ ಕುಟುಂಬ ಸಮೇತ ಅಲ್ಲಿಗೆ ಸ್ಥಳಾಂತರಗೊಳ್ಳಲು ಯೋಜನೆ ಹಾಕಿದ್ದಾರಂತೆ. ಹಾಗಾಗಿ ಅವರು ಪೀಠಾಪುರಂನಲ್ಲಿ ದೊಡ್ಡ ಜಾಗ ಖರೀದಿ ಮಾಡಿದ್ದಾರೆ.\
ಇದನ್ನೂ ಓದಿ:ನಟನೆ ಮುಂದುವರೆಸುತ್ತಾರಾ ಆಂಧ್ರ ಡಿಸಿಎಂ ಪವನ್ ಕಲ್ಯಾಣ್? ಕೊಟ್ಟರು ಸ್ಪಷ್ಟನೆ
ಪವನ್ ಕಲ್ಯಾಣ್ ಪ್ರಸ್ತುತ ಹೈದರಾಬಾದ್ನಲ್ಲಿ ವಾಸವಿದ್ದಾರೆ. ಹೈದರಾಬಾದ್, ತೆಲಂಗಾಣ ರಾಜ್ಯಕ್ಕೆ ಸೇರಿದೆ. ಈಗ ಪೀಠಾಪುರಂ ಶಾಸಕರಾಗಿರುವ ಪವನ್ ಕಲ್ಯಾಣ್, ಕ್ಷೇತ್ರದ ಮತದಾರರಿಗೆ ಹತ್ತಿರವಾಗಿರಬೇಕೆಂಬ ಕಾರಣಕ್ಕೆ ಅಲ್ಲಿಯೇ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದು ಪವನ್ಗೆ ಮುಂದಿನ ದಿನಗಳಲ್ಲಿ ಬಹಳ ಸಹಾಯಕರಾಗಿ ಆಗಲಿದೆ ಎನ್ನಲಾಗುತ್ತಿದೆ.
ಪೀಠಾಪುರಂನಲ್ಲಿ ನಿನ್ನೆ ಸಾರ್ವಜನಿಕ ಸಭೆ ನಡೆಸಿದ ಪವನ್ ಕಲ್ಯಾಣ್, ಮತದಾರನ್ನುದ್ದೇಶಿಸಿ ಮಾತನಾಡಿ ಜನರೆದುರು ಮತ್ತೊಮ್ಮೆ ಪ್ರತಿಜ್ಞೆ ಸ್ವೀಕರಿಸಿದರು. ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವುದು ತಮ್ಮ ಗುರಿ ಎಂದಿದ್ದಾರೆ. ಮೊದಲಿಗೆ ಕ್ಷೇತ್ರದಲ್ಲಿನ ರಸ್ತೆಗಳನ್ನು ಸರಿಪಡಿಸಬೇಕೆಂಬ ಗುರಿ ಹೊಂದಿದ್ದೇವೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ