ನಟನೆ ಮುಂದುವರೆಸುತ್ತಾರಾ ಆಂಧ್ರ ಡಿಸಿಎಂ ಪವನ್ ಕಲ್ಯಾಣ್? ಕೊಟ್ಟರು ಸ್ಪಷ್ಟನೆ
ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸಲಿದ್ದಾರೆಯೇ? ಈ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಸ್ಪಷ್ಟನೆ ನೀಡಿದ್ದಾರೆ.
ಭಾರತದ ಹಾಲಿ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು ನಟ ಪವನ್ ಕಲ್ಯಾಣ್. ಮೊದಲ ದಿನವೇ 50 ಕೋಟಿ, 100 ಕೋಟಿ ಗಳಿಸುವ ಸಿನಿಮಾಗಳನ್ನು ನೀಡುವ ಸಾಮರ್ಥ್ಯವಿರುವ ಕೆಲವೇ ನಟರಲ್ಲಿ ಪವನ್ ಕಲ್ಯಾಣ್ ಸಹ ಒಬ್ಬರು. ಟಾಲಿವುಡ್ನಲ್ಲಿ ಭಾರಿ ಬೇಡಿಕೆ ಇರುವಾಗಲೇ ಪವನ್ ಕಲ್ಯಾಣ್ ರಾಜಕೀಯಕ್ಕೆ ಧುಮುಕಿದ್ದಾರೆ. ಮಾತ್ರವಲ್ಲ ಅಲ್ಲಿಯೂ ಅವರಿಗೆ ಭರ್ಜರಿ ಯಶಸ್ಸೇ ದೊರಕಿದೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಗೆಲುವು ಕಂಡಿರುವ ಪವನ್ ಕಲ್ಯಾಣ್ ಆಂಧ್ರದ ಉಪ ಮುಖ್ಯಮಂತ್ರಿ ಆಗಿದ್ದಾರೆ. ಮಾತ್ರವಲ್ಲದೆ ಪಂಚಾಯತ್ ರಾಜ್ ಸೇರಿದಂತೆ ಕೆಲವು ಪ್ರಮುಖ ಖಾತೆಗಳನ್ನು ಸಹ ನಿಭಾಯಿಸುತ್ತಿದ್ದಾರೆ.
ಪವನ್ ಅಧಿಕಾರ ಸ್ವೀಕರಿಸಿದ ಕೂಡಲೇ ಕೆಲ ಒಳ್ಳೆಯ ಕಾರ್ಯಗಳನ್ನು ಮಾಡಲು ಆರಂಭಿಸಿದ್ದಾರೆ ಆದರೆ ಪವನ್ರ ಅಭಿಮಾನಿಗಳಿಗೆ ಇದು ತುಸು ನಿರಾಸೆಯನ್ನೂ ಸಹ ಮೂಡಿಸಿದೆ. ರಾಜ್ಯದ ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ನಟಿಸುತ್ತಾರೆಯೇ ಇಲ್ಲವೇ? ಈಗಾಗಲೇ ಪವನ್ರ ಮೂರು ಸಿನಿಮಾಗಳು ಬಿಡುಗಡೆ ಬಾಕಿ ಇವೆ. ಅವುಗಳಲ್ಲಿ ಮೊದಲು ಯಾವುದು ಬಿಡುಗಡೆ ಆಗುತ್ತದೆ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಗೊಂದಲವೂ ಇದೆ. ಅದಕ್ಕೆಲ್ಲ ಸ್ವತಃ ಪವನ್ ಕಲ್ಯಾಣ್ ಸ್ಪಷ್ಟನೆ ನೀಡಿದ್ದಾರೆ.
ಶಾಸಕನಾಗಿ ಆಯ್ಕೆ ಆಗಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಪೀಠಾಪುರಂ ಕ್ಷೇತ್ರಕ್ಕೆ ಆಗಮಿಸಿದ್ದ ಪವನ್ ಕಲ್ಯಾಣ್, ಪೀಠಾಪುರಂ ಕ್ಷೇತ್ರದ ಜನರ ಎದುರು ಮತ್ತೊಮ್ಮೆ ಪ್ರತಿಜ್ಞೆ ಸ್ವೀಕರಿಸಿದರು. ಪೀಠಾಪುರಂ ಕ್ಷೇತ್ರಕ್ಕಾಗಿ ತಾವು ಮಾಡಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಭರವಸೆ ನೀಡಿದರು. ಇದೇ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್, ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದನ್ನು ಸಹ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಸರ್ಕಾರಕ್ಕೆ ಹಣದ ಕೊರತೆ: ಸಂಬಳ, ಕಾರು ನಿರಾಕರಿಸಿದ ಡಿಸಿಎಂ ಪವನ್ ಕಲ್ಯಾಣ್
‘ಜನ ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಅಭಿವೃದ್ಧಿ ಮಾಡಲಿ ಎಂಬ ಕಾರಣಕ್ಕೆ ನನ್ನನ್ನು ಗೆಲ್ಲಿಸಿದ್ದಾರೆ. ಆದರೆ ನಾನು ಸಿನಿಮಾ ಚಿತ್ರೀಕರಣ ಮಾಡಿಕೊಂಡು ಕೂತರೆ ಜನ ನನ್ನನ್ನು ಬೈಯ್ಯಲು ಆರಂಭಿಸುತ್ತಾರೆ. ಅಭಿವೃದ್ಧಿ ಮಾಡಲಿ, ನಮ್ಮ ಪರವಾಗಿ ಕೆಲಸ ಮಾಡಲಿ ಎಂದು ಆಯ್ಕೆ ಮಾಡಿದರೆ ಇವನೇನು ಸಿನಿಮಾ ಮಾಡುತ್ತಿದ್ದಾನೆ ಎನ್ನುತ್ತಾರೆ. ಹಾಗಾಗಿ ಮೊದಲ ಮೂರು ತಿಂಗಳು ನಾನು ಸಂಪೂರ್ಣವಾಗಿ ಆಡಳಿತದಲ್ಲಿಯೇ ತೊಡಗಿಕೊಳ್ಳುತ್ತೇನೆ’ ಎಂದಿದ್ದಾರೆ.
ಅದಾದ ಬಳಿಕವೂ ಸಹ ಯಾವಾಗಲಾದರೂ ತೀರ ಬಿಡುವಾಗಿದ್ದಾಗಲಷ್ಟೆ ಸಿನಿಮಾದಲ್ಲಿ ನಟಿಸುವೆ. ಇನ್ನು ಮೂರು ಸಿನಿಮಾಗಳಿವೆ. ಆ ಸಿನಿಮಾಗಳ ನಿರ್ಮಾಪಕರಿಗೂ ಸಹ ನಾನು ಈ ವಿಷಯ ತಿಳಿಸಿದ್ದೇನೆ. ಅವರೂ ಸಹ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ‘ಓಜಿ’ ಸಿನಿಮಾ ಬಗ್ಗೆ ವಿಶೇಷವಾಗಿ ಮಾತನಾಡಿದ ಪವನ್ ಕಲ್ಯಾಣ್, ‘ಓಜಿ’ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ನಿಮಗೆ ಖಂಡಿತ ಇಷ್ಟವಾಗುತ್ತದೆ. ಶೀಘ್ರವೇ ಆ ಸಿನಿಮಾ ಬಿಡುಗಡೆ ಆಗಲಿದೆ ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಿ’ ಎಂದಿದ್ದಾರೆ ಪವನ್ ಕಲ್ಯಾಣ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ