AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು! ಬೆಂಗಳೂರಿನಲ್ಲೇ ಅತಿಹೆಚ್ಚು ಸಾವು!

ಕರ್ನಾಟಕದಲ್ಲಿ ಪ್ರತಿದಿನ 31 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು, 86 ಮಂದಿ ಗಾಯಗೊಳ್ಳುತ್ತಿದ್ದಾರೆ. 2025ರಲ್ಲಿ 10 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿದ್ದು, ಬೆಂಗಳೂರು, ಬೆಳಗಾವಿ, ತುಮಕೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ವರದಿಯಾಗಿವೆ. ವೇಗದ ಚಾಲನೆ, ನಿರ್ಲಕ್ಷ್ಯ, ಮೂಲಸೌಕರ್ಯ ಸಮಸ್ಯೆಗಳು ಪ್ರಮುಖ ಕಾರಣಗಳಾಗಿವೆ.

ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು! ಬೆಂಗಳೂರಿನಲ್ಲೇ ಅತಿಹೆಚ್ಚು ಸಾವು!
ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು!
ಭಾವನಾ ಹೆಗಡೆ
|

Updated on:Feb 23, 2026 | 2:22 PM

Share

ಬೆಂಗಳೂರು, ಫೆಬ್ರವರಿ 23: ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 31 ಮಂದಿ ರಸ್ತೆ ಅಪಘಾತಗಳಲ್ಲಿ (Road accidents) ಸಾವನ್ನಪ್ಪುತ್ತಿದ್ದು, 86 ಮಂದಿ ಗಾಯಗೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. 2025ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಶೇ 62.68 ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೇ ನಡೆದಿದ್ದು, 2026ರ ಜನವರಿಯಲ್ಲಿಯೇ 1,009 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಈ ವರದಿ ಬಹಿರಂಗಪಡಿಸಿದೆ. ವೇಗದ ಚಾಲನೆ, ನಿರ್ಲಕ್ಷ್ಯ, ಹೆದ್ದಾರಿ ಕಾಮಗಾರಿಗಳು ಮತ್ತು ಮೂಲಸೌಕರ್ಯ ಸಮಸ್ಯೆಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ವರ್ಷದಲ್ಲಿ 800ಕ್ಕೂ ಹೆಚ್ಚು ಬೆಂಗಳೂರಿಗರು ಬಲಿ

2025ರಲ್ಲಿ 11,408 ಅಪಘಾತಗಳಲ್ಲಿ ಜನರು ಪ್ರಾಣ ಕಳೆದುಕೊಂಡರೆ, 31,751 ಅಪಘಾತಗಳಿಂದ ಜನರು ಗಂಭೀರವಾಗಿ ಗಾಯಗೊಂಡಿದ್ದಾಗಿ ಈ ವರದಿ ತಿಳಿಸಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚುಸಾವುಗಳು ಸಂಭವಿಸಿದ್ದು, 891 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳೂ ಹೆಚ್ಚು ಸಾವಿನ ಪ್ರಕರಣಗಳನ್ನು ಹೊಂದಿರುವುದಾಗಿ ತಿಳಿದು ಬಂದಿದೆ. ಅಪಘಾತ ತಡೆಗೆ ಉತ್ತಮ ಮೂಲಸೌಕರ್ಯ, ಕಠಿಣ ಕ್ರಮ ಜಾರಿ ಜೊತೆಗೆ ಜಾಗೃತಿ ಅಭಿಯಾನ ಅಗತ್ಯವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ರಸ್ತೆ ಅಪಘಾತಗಳ ಹೆಚ್ಚಳ ಹಿನ್ನೆಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಸಾಮಾಜಿಕ ಜಾಲತಾಣಗಳ ಅಭಿಯಾನಗಳ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರಸ್ತೆಗಳಲ್ಲಿ ಪ್ರತಿಫಲಕ ಗುರುತುಗಳ ಕೊರತೆ ಹಾಗೂ ಅಡ್ಡವಾಗಿ ಬೆಳೆದ ಗಿಡಗಂಟಿಗಳು ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಅತಿ ವೇಗದ ಚಾಲನೆ, ನಿರ್ಲಕ್ಷ್ಯವೇ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ಗೆ’ ತಿಳಿಸಿದ್ದಾರೆ.

ಇದನ್ನೂ ಓದಿ ಹಾಸನ: ಅವೈಜ್ಞಾನಿಕ ಹಂಪ್​​ಗೆ ವಿದ್ಯಾರ್ಥಿನಿ ಬಲಿ, ಮತ್ತೋರ್ವಳ ಸ್ಥಿತಿ ಗಂಭೀರ

ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣವೇನು?

ಹಾಸನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಹೆದ್ದಾರಿಗಳಲ್ಲಿ ನಿಯಮಿತ ಪೆಟ್ರೋಲಿಂಗ್ ನಡೆಸಿ, ಶಿಸ್ತಿನ ಉಲ್ಲಂಘನೆ ಮತ್ತು ಅತಿವೇಗ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಧರಿಸುವಂತಹ ನಿಯಮಗಳನ್ನು ಪಾಲಿಸಿದರೆ ಅಪಘಾತಗಳಿಂದಾಗುವ ಸಾವುಗಳನ್ನು ಕಡಿಮೆ ಮಾಡಬಹುದು. ಅತಿವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ದೊಡ್ಡ ತಪ್ಪುಗಳಾಗಿವೆ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳು, ಅಪಾಯಕಾರಿ ತಿರುವುಗಳು ಅಪಘಾತಗಳಿಗೆ ಕಾರಣವಾಗುತ್ತಿರುವುದು ಉಪವಿಭಾಗ ಡಿವೈಎಸ್ಪಿಗಳು ಗುರುತಿಸಿದ್ದಾರೆ.ರಾಜ್ಯ ಹೆದ್ದಾರಿಗಳ ಕುರಿತು ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD)ಗೆ ವರದಿ ಸಲ್ಲಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಬಹುತೇಕ ಹೆದ್ದಾರಿಗಳು ಕಾಮಗಾರಿ ಹಂತದಲ್ಲಿದ್ದು, ಹಲವೆಡೆ ಸಮರ್ಪಕ ಬೆಳಕಿನ ಕೊರತೆ ಇದೆ ಎಂದು ಎಸ್‌ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ. 2025ರಲ್ಲಿ ಅತಿವೇಗ ಪ್ರಕರಣಗಳು ದ್ವಿಗುಣಗೊಂಡಿವೆ. ಸೇವಾ ರಸ್ತೆಗಳ ಕೊರತೆಯೂ ದೂರ ಪ್ರಯಾಣಿಕರಿಗೆ ತೊಂದರೆ ತಂದಿದೆ. ಬೆಂಗಳೂರು ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಹೆಚ್ಚಳದಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಅಪಘಾತಗಳ ಪ್ರಮಾಣವೂ ಏರಿಕೆಯಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:22 pm, Mon, 23 February 26