ಕನ್ನಡ ಚಿತ್ರರಂಗದಲ್ಲಿ ‘ತೂಫಾನ್’ ಬರಲಿದೆ; ‘ತಡೆಯೋ ಪ್ರಯತ್ನ ಮಾಡಬೇಡಿ’ ಎಂದ ಟೀಮ್
‘ತೂಫಾನ್’ ಸಿನಿಮಾದ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ‘ನೆವರ್ ಟ್ರೈ ಟು ಸ್ಟಾಪ್’ ಎಂಬ ಟ್ಯಾಗ್ ಲೈನ್ ಈ ಶೀರ್ಷಿಕೆಗೆ ಇದೆ. ಅಂದರೆ, ‘ತಡೆಯೋ ಪ್ರಯತ್ನ ಮಾಡಬೇಡಿ’ ಎಂಬ ಸೂಚನೆ ನೀಡುತ್ತಾ ಗ್ಲಿಂಪ್ಸ್ ಅನಾವರಣ ಮಾಡಲಾಗಿದೆ. ‘ತೂಫಾನ್’ ಗ್ಲಿಂಪ್ಸ್ ನೋಡಿದರೆ ‘ಕೆಜಿಎಫ್’, ‘ಕಬ್ಜ’ ಸಿನಿಮಾಗಳ ಮೇಕಿಂಗ್ ನೆನಪಾಗುತ್ತದೆ. ಆದರೆ ಆ ಸಿನಿಮಾಗಳಿಗೂ ಈ ಚಿತ್ರಕ್ಕೂ ಸಂಬಂಧ ಇಲ್ಲ ಎಂದು ಚಿತ್ರತಂಡ ಹೇಳಿದೆ.
ಸ್ಯಾಂಡಲ್ವುಡ್ನಲ್ಲಿ ಮೇಕಿಂಗ್ ಕಾರಣದಿಂದ ಕೆಲವು ಸಿನಿಮಾಗಳು ಭರ್ಜರಿ ಸದ್ದು ಮಾಡುತ್ತವೆ. ‘ತೂಫಾನ್’ ಸಿನಿಮಾ ಕೂಡ ಅದೇ ಸಾಲಿಗೆ ಸೇರುವ ಲಕ್ಷಣ ಕಾಣಿಸಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಗ್ಲಿಂಪ್ಸ್ ಅನಾವರಣ ಆಗಿದೆ. ಆ ಮೂಲಕ ಚಿತ್ರದ ಬಗ್ಗೆ ಜನರು ಮಾತನಾಡುವಂತಾಗಿದೆ. ‘1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಕಥೆಯ ಏಳೆ ಈ ಸಿನಿಮಾದಲ್ಲಿದೆ. ಈಗಾಗಲೇ ಶೇ.50ರಷ್ಟು ಶೂಟಿಂಗ್ ಮುಗಿದಿದೆ. ನಿರ್ಮಾಪಕರ ಹಂಬಲದ ಮೇರೆಗೆ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದೇವೆ’ ಎಂದು ನಿರ್ದೇಶಕ ಚಂದ್ರಕಾಂತ್ ಹೇಳಿದ್ದಾರೆ. ಚಿತ್ರತಂಡದ ಬಗ್ಗೆ ಇಲ್ಲಿದೆ ವಿವರ.
ಬಾಲಿವುಡ್ ಮಟ್ಟದಲ್ಲೂ ‘ತೂಫಾನ್’ ಬಗ್ಗೆ ಟಾಕ್ ಸೃಷ್ಟಿ ಆಗಿದೆ ಎಂಬುದು ಚಿತ್ರತಂಡದ ಹೆಮ್ಮೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಗ್ಲಿಂಪ್ಸ್ ಬಿತ್ತರ ಮಾಡಲಾಯಿತು. ‘ಎಸ್.ಆರ್. ಮೂವೀಸ್’ ಸಂಸ್ಥೆಯ ಮೂಲಕ ಬೆಳಗಾವಿ ಮೂಲದ ಕನ್ನಡ ಅಭಿಮಾನಿ ಷರೀಫ ಬೇಗಂ ನಡಾಫ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆರ್. ಚಂದ್ರಕಾಂತ್ ಅವರು ಚಿತ್ರಕಥೆ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ನಟ ರೋಶನ್ ಅವರು ಕಥೆ ಬರೆದು, ಹೀರೋ ಆಗಿ ನಟಿಸುತ್ತಿದ್ದಾರೆ.
‘ತೂಫಾನ್’ ಗ್ಲಿಂಪ್ಸ್ ಬಿಡುಗಡೆ ಕಾರ್ಯಕ್ರಮಕ್ಕೆ ಗೀತರಚನಾಕಾರ ಕವಿರಾಜ್ ಅವರು ಚಾಲನೆ ನೀಡಿದರು. ‘ಇದರ ಅದ್ದೂರಿತನವನ್ನು ದೊಡ್ಡ ಪರದೆಯ ಮೇಲೆ ನೋಡುವುದೇ ಚೆಂದ. ಬೇರೆಯದೇ ಲೋಕ ಸೃಷ್ಟಿಸುವ ಹಾಗೆ ಕಾಣಿಸುತ್ತಿದೆ. ಈ ಸಿನಿಮಾದಿಂದ ಇಡೀ ತಂಡಕ್ಕೆ ದೊಡ್ಡ ಗೆಲುವು ಸಿಗಲಿ’ ಎಂದು ಅವರು ಹಾರೈಸಿದರು.
‘ತೂಫಾನ್’ ಫಸ್ಟ್ ಗ್ಲಿಂಪ್ಸ್:
ನಾಯಕಿಯಾಗಿ ಅನುಷಾ ರೈ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಖಳನಟನಾಗಿ ಭೀಷ್ಮ ರಾಮಯ್ಯ ನಟಿಸುತ್ತಿದ್ದಾರೆ. ರಂಗಾಯಣ ರಘು, ಸೂರ್ಯ ಪ್ರವೀಣ್, ಅಶ್ವಿನ್ ಹಾಸನ್, ಅಯ್ಯಪ್ಪ ಶರ್ಮಾ, ಬಿ. ಸುರೇಶ್, ಉಗ್ರಂ ರವಿ ಮುಂತಾದವರು ಸಹ ಪಾತ್ರವರ್ಗದಲ್ಲಿದ್ದಾರೆ. ಸಚಿನ್ ಬಸ್ರೂರು ಅವರ ಸಂಗೀತ ನಿರ್ದೇಶನ, ಗಂಗು ಅವರ ಛಾಯಾಗ್ರಹಣ, ನರಸಿಂಹ ಅವರ ಸಾಹಸ ನಿರ್ದೇಶನ, ಉಮೇಶ್ ಆರ್.ಬಿ. ಅವರ ಸಂಕಲನ ಈ ಸಿನಿಮಾಗಿದೆ.
ನಿರ್ದೇಶಕ ಚಂದ್ರಕಾಂತ್ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಈ ಸಿನಿಮಾ ನನ್ನದು ಎನ್ನುವುದಕ್ಕಿಂತ ರೋಷನ್ ಅವರ ಕನಸು ಎಂದೇ ಹೇಳಬೇಕು. ಇದು ಟೀಸರ್ ಅಥವಾ ಟ್ರೇಲರ್ ಅಲ್ಲ. ಸಣ್ಣ ಗ್ಲಿಂಪ್ಸ್ ಅಷ್ಟೇ. ಪ್ಯಾನ್ ಇಂಡಿಯಾ ಸಿನಿಮಾದ ಒಂದು ಕಿಡಿ ಎನ್ನಬಹುದು. ನಮ್ಮ ಸಿನಿಮಾ ಹೇಗೆ ಬರುತ್ತಿದೆ? ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ತೋರಿಸಲು ಈ ಗ್ಲಿಂಪ್ಸ್ ಸಿದ್ದಪಡಿಸಿದ್ದೇವೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಶಿವಣ್ಣ-ಹೇಮಂತ್ ರಾವ್ ಕಾಂಬಿನೇಷನ್ನ ಹೊಸ ಸಿನಿಮಾಗೆ ‘ಭೈರವನ ಕೊನೆ ಪಾಠ’ ಶೀರ್ಷಿಕೆ
‘ಕಥೆಯ ಒನ್ ಲೈನ್ ನನ್ನದಾದರೂ ಅದಕ್ಕೆ ಸುಂದರವಾದ ಆಕಾರ ನೀಡುತ್ತಿರುವುದು ನಮ್ಮ ನಿರ್ದೇಶಕರು. ದೇಶಾದ್ಯಂತ ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಛಲ ಬಂದಿದೆ. ಪ್ರಶಾಂತ್ ನೀಲ್ ಅವರ ಆರ್ಶಿವಾದ ಸಿಕ್ಕಿದೆ. 2 ವರ್ಷದ ನಮ್ಮ ಶ್ರಮ ಇಲ್ಲಿಯತನಕ ತಂದು ನಿಲ್ಲಿಸಿದೆ’ ಎಂದು ನಟ ರೋಶನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.