ಚಿತ್ರರಂಗಕ್ಕೆ ಆರ್ಮುಗ ರವಿಶಂಕರ್ ಪುತ್ರನ ಎಂಟ್ರಿ; ಮಗನ ಚಿತ್ರಕ್ಕೆ ತಂದೆಯ ನಿರ್ದೇಶನ

|

Updated on: Oct 23, 2023 | 8:31 PM

ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಸುಬ್ರಹ್ಮಣ್ಯ’ ಸಿನಿಮಾ ತಯಾರಾಗಲಿದೆ. ಡಿಸೆಂಬರ್​ನಲ್ಲಿ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾ ಮೂಲಕ ಪಿ. ರವಿಶಂಕರ್​ ಅವರ ಮಗ ಅದ್ವಯ್​ ಹೀರೋ ಆಗುತ್ತಿದ್ದಾರೆ. ಬರೋಬ್ಬರಿ 20 ವರ್ಷಗಳ ಬಳಿಕ ರವಿಶಂಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಮೂಡಿದೆ.

ಚಿತ್ರರಂಗಕ್ಕೆ ಆರ್ಮುಗ ರವಿಶಂಕರ್ ಪುತ್ರನ ಎಂಟ್ರಿ; ಮಗನ ಚಿತ್ರಕ್ಕೆ ತಂದೆಯ ನಿರ್ದೇಶನ
‘ಸುಬ್ರಹ್ಮಣ್ಯ’ ಸಿನಿಮಾದ ಪೋಸ್ಟರ್
Follow us on

ಕನ್ನಡ ಚಿತ್ರರಂಗದಲ್ಲಿ ಪಿ. ರವಿಶಂಕರ್​ (P Ravi Shankar) ಅವರು ಸಖತ್​ ಮಿಂಚಿದ್ದಾರೆ. ಕಲಾವಿದನಾಗಿ ಅವರು ಆರ್ಮುಗ ರವಿಶಂಕರ್ ಅಂತಲೇ ಫೇಮಸ್​. ಅವರು ನಟ, ಕಂಠದಾನ ಕಲಾವಿದ ಮಾತ್ರವಲ್ಲ.. ನಿರ್ದೇಶಕ ಕೂಡ ಹೌದು, ಹಲವು ವರ್ಷಗಳ ಹಿಂದೆ ಅವರು ‘ದುರ್ಗಿ’ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಮಾಲಾಶ್ರೀ ಅಭಿನಯಿಸಿದ್ದ ಆ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಪರಭಾಷೆಗೂ ರಿಮೇಕ್​ ಆಗಿತ್ತು. ನಿರ್ದೇಶನದಲ್ಲಿ ಯಶಸ್ಸು ಸಿಕ್ಕರೂ ಕೂಡ ರವಿಶಂಕರ್​ ಅವರು ಮತ್ತೆ ಡೈರೆಕ್ಟರ್​ ಕ್ಯಾಪ್​ ತೊಟ್ಟಿರಲಿಲ್ಲ. ಇಷ್ಟು ವರ್ಷಗಳ ಕಾಲ ಕಂಠದಾನ ಕಲಾವಿದನಾಗಿ, ನಟನಾಗಿ ಬ್ಯುಸಿ ಆಗಿದ್ದ ಅವರು ಈಗ ಮತ್ತೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಅದು ಕೂಡ ಅವರ ಪುತ್ರನ ಸಿನಿಮಾಗೆ ಎಂಬುದು ವಿಶೇಷ. ಹೌದು, ರವಿಶಂಕರ್​ ಅವರ ಪುತ್ರ ಅದ್ವಯ್ (Advay)​ ಅವರು ಸಿನಿಮಾರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಆ ಸಿನಿಮಾಗೆ ‘ಸುಬ್ರಹ್ಮಣ್ಯ’ (Subrahmaya) ಎಂದು ಶೀರ್ಷಿಕೆ ಇಡಲಾಗಿದ್ದು ರವಿಶಂಕರ್​ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ.

ಬರೋಬ್ಬರಿ 20 ವರ್ಷಗಳ ಬಳಿಕ ರವಿಶಂಕರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ‘ಸುಬ್ರಹ್ಮಣ್ಯ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ರವಿಶಂಕರ್ ಅವರ ಪುತ್ರ ಅದ್ವಯ್​ ವಿದೇಶದಲ್ಲಿ ಅಭಿನಯದ ತರಬೇತಿ ಪಡೆದು ಬಂದಿದ್ದಾರೆ. ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಅವರು ಬಣ್ಣದ ಲೋಕದಲ್ಲಿ ಈಗ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಅವರ ಕುಟುಂಬದ ಹಲವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಅದ್ವಯ್​ ಅವರು ಯಾವ ರೀತಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಸುಬ್ರಹ್ಮಣ್ಯ’ ಸಿನಿಮಾ ತಯಾರಾಗಲಿದೆ. ಡಿಸೆಂಬರ್​ನಲ್ಲಿ ಶೂಟಿಂಗ್ ಆರಂಭ ಆಗಲಿದೆ.

ಸೋಮವಾರ (ಅಕ್ಟೋಬರ್​ 23) ಆಯುಧಪೂಜೆ ಪ್ರಯಕ್ತ ಅದ್ವಯ್​ ನಟನೆಯ ಮೊದಲ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್​ ಲಾಂಚ್​ ಮಾಡಲಾಗಿದೆ. ‘ಸುಬ್ರಹ್ಮಣ್ಯ’ ಎಂಬ ಟೈಟಲ್ ಗಮನ ಸೆಳೆಯುತ್ತಿದೆ. ಶೀರ್ಷಿಕೆಗೆ ತಕ್ಕಂತೆಯೇ ಪೋಸ್ಟರ್ ವಿನ್ಯಾಸಗೊಂಡಿದೆ. ಇದರಲ್ಲಿ ದೈವಿಕ ಅಂಶಗಳು ಗಮನ ಸೆಳೆಯುತ್ತಿವೆ. ಪೋಸ್ಟರ್​ನಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಹಾಗೂ ದೇವರ ವಾಹನ ನವಿಲು ಕೂಡ ಹೈಲೈಟ್​ ಆಗಿದೆ. ಅದ್ವಯ್​ ಅವರು ಒಂದು ಕೈಯಲ್ಲಿ ಬೆಂಕಿ ಹಾಗೂ ಮತ್ತೊಂದು ಕೈಯಲ್ಲಿ ಪುಸ್ತಕ ಹಿಡುಕೊಂಡು ಪೋಸ್ ನೀಡಿದ್ದಾರೆ. ಇದರಿಂದಾಗಿ ಸಿನಿಮಾ ಮೇಲಿನ ಕೌತುಕ ಹೆಚ್ಚಾಗಿದೆ.

ಇದನ್ನೂ ಓದಿ: ನಾಗಭೂಷಣ್, ಅಮೃತಾ​ ನಟನೆಯ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​

‘ಸುಬ್ರಹ್ಮಣ್ಯ’ ಸಿನಿಮಾದ ತಾಂತ್ರಿಕ ವರ್ಗದ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ರಾಜ್ ತೋಟ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ರವಿ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಎಂ. ಕುಮಾರ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ‘ಎಸ್.ಜಿ ಮೂವೀ ಮೇಕರ್ಸ್’ ಬ್ಯಾನರ್ ಮೂಲಕ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಅವರು ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.