ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೆ ಕೊರತೆ ಇಲ್ಲ. ಹೊಸ ಹೊಸ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತ ಬರಲಾಗುತ್ತಿದೆ. ಹಲವು ಗಡಿ ಸಮಸ್ಯೆಗಳ ಕುರಿತು ಚಿತ್ರಗಳು ಮೂಡಿ ಬಂದಿವೆ. ಕರ್ನಾಟಕ ಹಾಗೂ ಮಹರಾಷ್ಟ್ರದ ಗಡಿ ಸಮಸ್ಯೆ ತುಂಬಾನೇ ಹಳೆಯದು. ಯುವ ನಿರ್ದೇಶಕ ಹರ್ಷದ್ ನಲವಾಡೆ ಅವರು ನಿರ್ದೇಶನ ಮಾಡಿರುವ ‘ಫಾಲೋವರ್’ ಸಿನಿಮಾ ಈ ವಿಚಾರದ ಮೇಲೆ ಬೆಳಕು ಚೆಲ್ಲುತ್ತದೆ. ಇದು ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಸದ್ಯ ನಡೆಯುತ್ತಿರುವ ‘ಮುಂಬೈ ಫಿಲ್ಮ್ ಫೆಸ್ಟಿವಲ್’ನಲ್ಲೂ ಈ ಸಿನಿಮಾ ಪ್ರದರ್ಶನ ಕಂಡಿದ್ದು, ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದೆ.
ಹರ್ಷದ್ ನಲವಾಡೆ ನಿರ್ದೇಶನ ಮಾಡಿದ ಮೊದಲ ಸಿನಿಮಾ ಇದು. ಮೊದಲ ಚಿತ್ರದಲ್ಲೇ ಅವರು ಚಾಲೆಂಜಿಂಗ್ ಹಾಗೂ ಸೂಕ್ಷ್ಮ ವಿಚಾರ ಎತ್ತಿಕೊಂಡಿದ್ದಾರೆ. ಇದನ್ನು ಅವರು ಸಮರ್ಥವಾಗಿ ವಿವರಿಸಿದ್ದಾರೆ. ಸಿನಿಮಾ ನೋಡಿದ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಿ ರಾಜಕೀಯ ನಾಯಕರೊಬ್ಬರಿಗಾಗಿ ಕೆಲಸ ಮಾಡುವ ಮೂಲಭೂತವಾದಿ ಯುವಕನ ಜೀವನ ಮತ್ತು ಅವನನ್ನು ಹಾಗೆ ಮಾಡಲು ಪ್ರೇರೇಪಿಸುವ ಘಟನೆಗಳ ಕುರಿತು ಸಿನಿಮಾದಲ್ಲಿ ಹೇಳಲಾಗುತ್ತಿದೆ.
ಗಡಿ ಹಾಗೂ ಭಾಷೆ ವಿಚಾರಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಧ್ಯೆ ತಿಕ್ಕಾಟ ಇದ್ದೇ ಇದೆ. ಬೆಳಗಾವಿಯಲ್ಲಿ ಮರಾಠಿ ಮಾತನಾಡುವರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಬೆಳಗಾವಿ ತಮ್ಮ ರಾಜ್ಯಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರದ ರಾಜಕಾರಣಿಗಳು ಅಭಿಪ್ರಾಯ. ಆದರೆ ಬೆಳಗಾವಿ ನಮ್ಮದು ಎಂದು ಕರ್ನಾಟಕದವರು ಹೇಳುತ್ತಲೇ ಬರುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಈ ಚಿತ್ರದಲ್ಲಿ ಫ್ರೆಂಡ್ಶಿಪ್ ಬಗ್ಗೆಯೂ ಇದೆ. ರಾಜಕೀಯ ನಾಯಕರು ಜನರನ್ನು, ವಿಚಾರಗಳನ್ನು ಹೇಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಹೇಳಲಾಗುತ್ತಿದೆ. ಈ ಸಿನಿಮಾ ಭಾಗಶಃ ಜನರಿಂದ ಹಣ ಸಂಗ್ರಹಿಸಿ ಮಾಡಲಾದ ಸಿನಿಮಾ. ಈ ರೀತಿಯ ಸೂಕ್ಷ್ಮ ವಿಚಾರ ಹೇಳುವಾಗ ಯಾರೊಬ್ಬರೂ ಹಣ ಹೂಡಲು ಮುಂದೆ ಬರುವುದಿಲ್ಲ. ಸಿನಿಮಾ ವಿವಾದಕ್ಕೆ ಎಡೆ ಮಾಡಿಕೊಡಬಹುದು ಎನ್ನುವ ಭಯ ಇರುತ್ತದೆ. ಹೀಗಾಗಿ, ಜನರಿಂದ ಹಣ ಸಂಗ್ರಹಿಸಿ ಸಿನಿಮಾ ಮಾಡಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ಬಗ್ಗೆ ಇಲ್ಲಿದೆ ಮಾಹಿತಿ
ಕ್ರೌಂಡ್ಫಂಡ್ನಿಂದ ನಿರ್ದೇಶಕರಿಗೆ ಸಹಾಯ ಆಗಿದೆ. ಅವರು ಅಂದುಕೊಂಡ ರೀತಿಯಲ್ಲಿ ಕಥೆಯನ್ನು ಹೇಳಲು ಅವಕಾಶ ಸಿಕ್ಕಿದೆ. ಸದ್ಯ ಹಲವು ಸಿನಿಮೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ