ಕೊನೆಗೂ ದೊಡ್ಡ ತೆರೆಗೆ ಬರುತ್ತಿದೆ ಜುಗಾರಿ ಕ್ರಾಸ್​ನ ಕೆಂಪು ಹವಳದ ಕತೆ

|

Updated on: Sep 08, 2024 | 12:30 PM

ಪೂರ್ಣಚಂದ್ರ ತೇಜಸ್ವಿ ಬರೆದಿರುವ ಹಲವು ಕತೆಗಳು ಈಗಾಗಲೇ ಸಿನಿಮಾ ಆಗಿವೆ. ಆದರೆ ಸಿನಿಮಾ ರೀತಿಯಲ್ಲಿ ಬಹಳ ಥ್ರಿಲ್ಲಿಂಗ್ ಆಗಿರುವ ‘ಜುಗಾರಿ ಕ್ರಾಸ್’ ಕತೆ ಸಿನಿಮಾ ಆಗಿರಲಿಲ್ಲ. ಹಲವು ಈ ಕತೆಯನ್ನು ಸಿನಿಮಾ ಮಾಡುವ ಪ್ರಯತ್ನ ಪಟ್ಟು ಸೋತಿದ್ದರು. ಈಗ ಕೊನೆಗೂ ಈ ಕತೆ ಸಿನಿಮಾ ಆಗುತ್ತಿದೆ.

ಕೊನೆಗೂ ದೊಡ್ಡ ತೆರೆಗೆ ಬರುತ್ತಿದೆ ಜುಗಾರಿ ಕ್ರಾಸ್​ನ ಕೆಂಪು ಹವಳದ ಕತೆ
Follow us on

ಕನ್ನಡದ ಅತ್ಯಂತ ಜನಪ್ರಿಯ ಕತೆಗಾರ ಪೂರ್ಣ ಚಂದ್ರ ತೇಜಸ್ವಿ ಅವರ ಮತ್ತೊಂದು ಕತೆ ಸಿನಿಮಾ ಆಗುತ್ತಿದೆ. ಈಗಾಗಲೇ ಪೂಚಂತೆ ರಚಿಸಿರುವ ‘ಕುಬಿ ಮತ್ತು ಇಯಾಲ’, ‘ತಬರನ ಕತೆ’, ‘ಡೇರ್​ಡೆವಿಲ್ ಮುಸ್ತಫಾ’, ‘ಕಿರಗೂರಿನ ಗಯ್ಯಾಳಿಗಳು’, ‘ಅಬಚೂರಿನ ಪೋಸ್ಟಾಫೀಸು’ ಕತೆಗಳನ್ನು ಸಿನಿಮಾ ಮಾಡಲಾಗಿದೆ. ಆದರೆ ತೇಜಸ್ವಿ ಅವರ ಒಂದು ಕತೆಯನ್ನು ಸಿನಿಮಾ ಮಾಡಲು ಬಹಳ ವರ್ಷಗಳಿಂದಲೂ ಪ್ರಯತ್ನಗಳು ನಡೆದಿದ್ದವು. ಆದರೆ ಬಹಳ ಸಂಕೀರ್ಣವಾದ ತುರುಸಿನ ನಿರೂಪಣೆ ಇರುವ ಆ ಕತೆಯನ್ನು ಸಿನಿಮಾ ಮಾಡುವುದು ದೊಡ್ಡ ಸವಾಲೇ ಎಂದರಿತು ಹಲವು ನಿರ್ದೇಶಕರು ಹಿಂದೆ ಸರಿದಿದ್ದರು. ಈಗ ಕೊನೆಗೂ ಆ ಕತೆಯನ್ನು ತೆರೆಗೆ ತರಲು ಯುವ ನಿರ್ದೇಶಕರೊಬ್ಬರು ಕೈ ಹಾಕಿದ್ದಾರೆ.

ತೇಜಸ್ವಿ ಅವರು ಬರೆದಿರುವ ಕತೆಗಳಲ್ಲಿಯೇ ಅತ್ಯಂತ ರೋಚಕ, ವೇಗದ ನಿರೂಪಣೆ ಹೊಂದಿರುವ ಕತೆ ‘ಜುಗಾರಿ ಕ್ರಾಸ್’. ಮಲೆನಾಡಿನ ಕೃಷಿಕ ದಂಪತಿಗಳು ಏಲಕ್ಕಿ ಮಾರಲು ಹೋಗುತ್ತಾ ತಮಗೆ ಅರಿವೇ ಇಲ್ಲದಂತೆ ಜುಗಾರಿಯ ಭೂಗತ ಲೋಕದ ತೆಕ್ಕೆಗೆ ಬೀಳುವುದು, ಅದರಿಂದ ತಪ್ಪಿಸಿಕೊಳ್ಳಲು ಮಾಡುವ ಪ್ರಯತ್ನದಲ್ಲಿ ಜುಗಾರಿಯ ಭೂಗತ ಇತಿಹಾಸದ ಭಾಗವೇ ಆಗಿಬಿಡುವುದು, ಜುಗಾರಿಯ ಕೆಂಪು ಹವಳದ ಕತೆ ಅದರಿಂದಾಗಿ ಹೋದ ಜೀವಗಳು, ನಾಶವಾದ ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ತೇಜಸ್ವಿ.

ಓದುಗರ ನೆಚ್ಚಿನ ಶ್ರೇಷ್ಠ ಕಾದಂಬರಿ ಜುಗಾರಿ ಕ್ರಾಸ್ ಇದೀಗ ಸಿನಿಮಾವಾಗುತ್ತಿದೆ. ಬೆಳ್ಳಿ ಪರದೆ ಮೇಲೆ ತೇಜಸ್ವಿಯವರ ಜುಗಾರಿ ಕ್ರಾಸ್ ಬರಲು ಸಿದ್ದವಾಗುತ್ತಿದೆ. ಅಂದಹಾಗೆ ಈ ಕಾದಂಬರಿಯನ್ನು ತೆರೆಮೇಲೆ ತರುವ ಸಾಹಸಕ್ಕೆ ಮುಂದಾಗಿರುವುದು ‘ಕರಾವಳಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ. ಇಂದು ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಘೋಷಣೆ ಮಾಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಫಸ್ಟ್​ ಲುಕ್ ಪೋಸ್ಟರ್​ನಲ್ಲಿ ರೈಲು, ಕೆಂಪು ಹವಳ ಮತ್ತು ಆ ಹಳೆಯ ಮ್ಯಾಪ್​ನ ಚಿತ್ರವಿದೆ. ಕತೆ ಓದಿರುವವರಿಗೆ ಈ ಮೂರು ವಿಷಯಗಳ ಪ್ರಾಧಾನ್ಯತೆ ಅರ್ಥವಾಗುತ್ತದೆ.

ಇದನ್ನೂ ಓದಿ:ಕಾವೇರಿ ವಿವಾದ: ಪೂರ್ಣಚಂದ್ರ ತೇಜಸ್ವಿ ಹೇಳಿದ ಅರ್ಥಪೂರ್ಣ ಮಾತು ನೆನಪಿಸಿಕೊಂಡ ಉಪೇಂದ್ರ

ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಅನೇಕರು ಕನಸು ಕಂಡಿದ್ದಾರೆ. ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ನಿರ್ದೇಶಕರು, ಕಲಾವಿದರು ಪ್ರಯತ್ನ ಪಟ್ಟಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ಜುಗಾರಿ ಕ್ರಾಸ್ ಕಾಂದಬರಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಸಮಯ ಬಂದಿದೆ.

ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ, ಜುಗಾರಿ ಕ್ರಾಸ್ ನಲ್ಲಿ ಬರುವ ಪಾತ್ರಗಳಿಗೆ ಯಾರೆಲ್ಲ ಜೀವ ತುಂಬಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸುಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತರುವುದೆ ಅತೀ ದೊಡ್ಡ ಜವಾಬ್ದಾರಿ. ಹಾಗಾಗಿ ಈ ಶ್ರೇಷ್ಠ ಕಾದಂಬರಿಯ ಸಿನಿಮಾದಲ್ಲಿ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಾರಾ ಅಥವಾ ಸ್ಟಾರ್ ನಟರು ಬಣ್ಣ ಹಚ್ಚುತ್ತಾರಾ ಕಾದುನೋಡಬೇಕು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Sun, 8 September 24