ರೈತನ ಕಥೆ ಇರುವ ‘ಗೋಪಿಲೋಲ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಶಿವಣ್ಣ
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಶಿವರಾಜ್ಕುಮಾರ್ ಅವರ ಕೈಯಿಂದ ‘ಗೋಪಿಲೋಲ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿಸಲಾಗಿದೆ. ಈ ಸಿನಿಮಾದಲ್ಲಿ ರೈತರ ಕುರಿತಾದ ಕಥೆ ಇರಲಿದೆ. ಅ.4ಕ್ಕೆ ಈ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ. ಆರ್. ರವೀಂದ್ರ ಅವರ ನಿರ್ದೇಶನ ಈ ಸಿನಿಮಾಗಿದೆ. ‘ಗೋಪಿಲೋಲ’ ಚಿತ್ರತಂಡಕ್ಕೆ ಶಿವಣ್ಣ ವಿಶ್ ಮಾಡಿದ್ದಾರೆ.
ಆರ್. ರವೀಂದ್ರ ಅವರು ನಿರ್ದೇಶನ ಮಾಡಿದ ‘ಗೋಪಿಲೋಲ’ ಸಿನಿಮಾದಿಂದ ‘ಗೋಪಿಲೋಲ ಓ ಶೋಕಿವಾಲ..’ ಸಾಂಗ್ ಬಿಡುಗಡೆ ಮಾಡಲಾಗಿದೆ. ಎಸ್.ಆರ್. ಸನತ್ ಕುಮಾರ್ ಅವರು ‘ಸುಕೃತಿ ಚಿತ್ರಾಲಯ’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಅರಸು ಅವರ ಸಹ ನಿರ್ಮಾಪಕರಾಗಿದ್ದಾರೆ. ಗೌರಿ ಹಬ್ಬದ ಶುಭದಿನದಂದು ಈ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅವರು ಈ ಗೀತೆಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
‘ಗೋಪಿಲೋಲ ಓ ಶೋಕಿವಾಲ..’ ಹಾಡನ್ನು ಕೇಶವ ಚಂದ್ರ ಅವರು ಬರೆದಿದ್ದಾರೆ. ಈ ಗೀತೆಯನ್ನು ಹೇಮಂತ್ ಕುಮಾರ್ ಮತ್ತು ವಾರಿಜಶ್ರೀ ಅವರು ಹಾಡಿದ್ದಾರೆ. ಮಿಥುನ್ ಅಶೋಕನ್ ಚೆನ್ನೈ ಸಂಗೀತ ನಿರ್ದೇಶನ ಮಾಡಿದ್ದಾರೆ. ಸದಾಚಾರ್ಯ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಮಂಜುನಾಥ್ ಅರಸು ಮತ್ತು ನಿಮಿಷಾ ಅವರು ಈ ಸಾಂಗ್ನಲ್ಲಿ ಹೆಜ್ಜೆ ಹಾಕಿದ್ದಾರೆ. ‘ಸುಕೃತಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ಮೂಲಕ ಸಾಂಗ್ ಬಿಡುಗಡೆ ಆಗಿದೆ.
ಇದು ರೈತನೊಬ್ಬನ ಕಥೆ ಇರುವ ಸಿನಿಮಾ. ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬುದನ್ನು ನಂಬಿದ ರೈತನ ಕಥೆಯನ್ನು ‘ಗೋಪಿಲೋಲ’ ಸಿನಿಮಾ ಹೇಳಲಿದೆ. ಭೂಮಿಯನ್ನು ನಂಬಿದ ರೈತ ಎಂದಿಗೂ ಹಾಳಾಗಲ್ಲ ಎಂಬುದನ್ನು ಅರಿತಿರುವ ಧರ್ಮೇಗೌಡ ಎಂಬ ರೈತನ ಕಥೆ ಕೂಡ ಹೌದು. ರಾಸಾಯನಿಕ ಆಹಾರ ಪೂರೈಕೆಯ ವಿರುದ್ದವಾಗಿ, ನೈಸರ್ಗಿಕ ಕೃಷಿಯನ್ನು ನಂಬಿಕೊಂಡು ಆತ ಬದುಕು ಸಾಗಿಸುತ್ತಾನೆ. ರಾಸಾಯನಿಕ ಆಹಾರ ಪೂರೈಕೆ ಮತ್ತು ನೈಸರ್ಗಿಕ ಕೃಷಿಕರ ನಡುವೆ ನಡೆಯವ ಸಂಘರ್ಷ ಈ ಸಿನಿಮಾ ಇರಲಿದೆ. ಅದರ ನಡುವೆ ಗೋಪಿ ಮತ್ತು ಲೀಲಾಗೆ ಪ್ರೀತಿ ಚಿಗುರುತ್ತದೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಜೊತೆ ಸಣ್ಣ ಪಾತ್ರ ಮಾಡಿದ್ದ ಈ ಕಲಾವಿದ ಈಗ ಬಾಲಿವುಡ್ನ ಸ್ಟಾರ್ ಹೀರೋ
ಅಕ್ಟೋಬರ್ 4ರಂದು ‘ಗೋಪಿಲೋಲ’ ಸಿನಿಮಾ ರಿಲೀಸ್ ಆಗಲಿದೆ. ನೈಸರ್ಗಿಕ ಕೃಷಿಯ ಮಹತ್ವವನ್ನು ಈ ಸಿನಿಮಾ ಸಾರಲಿದೆ. ನಿರ್ಮಾಪಕ ಎಸ್.ಆರ್. ಸನತ್ ಕುಮಾರ್ ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೇಶವಚಂದ್ರ ಬರೆದಿದ್ದಾರೆ. ಸೂರ್ಯಕಾಂತ್ ಅವರು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರು ಸಂಕಲನ ಮಾಡಿದ್ದಾರೆ.
ರಾಕೇಶ್ ಆಚಾರ್ಯ ಅವರು ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಸ್ ನಾರಾಯಣ್, ಸಪ್ತಗಿರಿ, ಜೋಸೈಮನ್, ಜಾಹ್ನವಿ, ನಾಗೇಶ್ ಯಾದವ್, ಸ್ವಾತಿ, ಪದ್ಮಾ ವಾಸಂತಿ, ಹನುಮಂತೇ ಗೌಡ, ಕೆಂಪೇಗೌಡ, ಸಚಿನ್, ಡಿಂಗ್ರಿ ನಾಗರಾಜ್, ರಾಧಾ ರಾಮಚಂದ್ರ, ಸತೀಶ್, ರೇಖಾದಾಸ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.