
ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್ ಚಾಪ್ಟರ್ 2’ (KGF 2) ಮತ್ತು ‘ಸಲಾರ್’ (Salaar) ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಈ ಎರಡೂ ಸಿನಿಮಾಗಳಿಗೆ ನಿರ್ದೇಶನ ಮಾಡುತ್ತಿರುವುದು ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಮಾಡುತ್ತಿರುವುದು ಹೊಂಬಾಳೆ ಫಿಲ್ಸ್ಮ್ (Hombale Films) ಸಂಸ್ಥೆಯ ವಿಜಯ್ ಕಿರಗಂದೂರು. ಈ ಚಿತ್ರಗಳ ರಿಲೀಸ್ ದಿನಾಂಕದ ಬಗ್ಗೆ ಈಗ ತಾಜಾ ಮಾಹಿತಿ ಹೊರಬಿದ್ದಿದೆ. 2022ರ ಏಪ್ರಿಲ್ 14ರಂದು ‘ಕೆಜಿಎಫ್ 2’ ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಖಚಿತಪಡಿಸಿದೆ. ಆದರೆ ಇದು ಪ್ರಭಾಸ್ (Prabhas) ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಈ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ಭಾರಿ ಚರ್ಚೆ ಆಗುತ್ತಿದೆ.
ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿರುವ ‘ಸಲಾರ್’ ಮೇಲೆ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2022ರ ಏಪ್ರಿಲ್ 14ರಂದು ಈ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲು ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ಅದೇ ದಿನಾಂಕದಲ್ಲೇ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ತೆರೆಕಾಣಲಿದೆ ಎಂದು ನಿರ್ಮಾಪಕರು ಮಾಹಿತಿ ಬಹಿರಂಗ ಮಾಡಿದ್ದಾರೆ. ಹಾಗಾಗಿ ‘ಸಲಾರ್’ ರಿಲೀಸ್ ಡೇಟ್ ಬದಲಾಗುವುದು ಅನಿವಾರ್ಯ ಆಗಿದೆ.
ಹಾಗಾದರೆ ‘ಸಲಾರ್’ ಯಾವಾಗ ರಿಲೀಸ್ ಆಗಲಿದೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಷ್ಟು ಸುಲಭವಲ್ಲ. ಕೊವಿಡ್ ಕಾರಣದಿಂದ ಹಲವು ಸ್ಟಾರ್ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದ್ದವು. ಈಗ ಎರಡನೇ ಅಲೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಂದೊಂದೇ ಸಿನಿಮಾಗಳು ತಮ್ಮ ಹೊಸ ರಿಲೀಸ್ ದಿನಾಂಕವನ್ನು ಲಾಕ್ ಮಾಡಿಕೊಳ್ಳುತ್ತಿವೆ. ಅವುಗಳ ಮಧ್ಯೆ ಒಂದು ಸೂಕ್ತ ದಿನಾಂಕಕ್ಕಾಗಿ ‘ಸಲಾರ್’ ತಂಡ ಹುಡುಕಾಟ ನಡೆಸಬೇಕಿದೆ.
ಡಿಸೆಂಬರ್ನಲ್ಲಿ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’, ಆಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಮುಂತಾದ ಬಿಗ್ ಸಿನಿಮಾಗಳು ರಿಲೀಸ್ ಆಗುತ್ತಿವೆ. 2022ರ ಜನವರಿ 14ರಂದು ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಬಿಡುಗಡೆ ಆಗಲಿದೆ. ಇದಾದಮೇಲೆ 2022ರ ಏಪ್ರಿಲ್ನಲ್ಲಿ ‘ಕೆಜಿಎಫ್ 2’ ಧೂಳೆಬ್ಬಿಸಲಿದೆ. ಅಂದರೆ, ಈ ಎಲ್ಲ ಪ್ರಮುಖ ಸಿನಿಮಾಗಳು ಬಿಡುಗಡೆ ಆಗುವವರೆಗೂ ‘ಸಲಾರ್’ ತಂಡ ಕಾಯಬೇಕಾಗಿರುವುದು ಅನಿವಾರ್ಯ ಆಗಿದೆ. ಇದು ಸಹಜವಾಗಿಯೇ ಪ್ರಭಾಸ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಈ ವಿಚಾರದ ಬಗ್ಗೆ ಪ್ರಭಾಸ್, ಯಶ್, ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರು ಸದ್ಯಕ್ಕೆ ಏನನ್ನೂ ಮಾತನಾಡಿಲ್ಲ. ‘ಸಲಾರ್’ ಚಿತ್ರಕ್ಕಾಗಿ ನಿಗದಿ ಆಗಿದ್ದ ದಿನಾಂಕದಲ್ಲೇ ‘ಕೆಜಿಎಫ್ 2’ ಸಿನಿಮಾವನ್ನು ರಿಲೀಸ್ ಮಾಡಲು ನಿರ್ಧರಿಸಿದ್ದು ಯಾಕೆ ಎಂದು ಅವರೇ ಉತ್ತರ ನೀಡಬೇಕಿದೆ. ಅವರಿಂದ ಬರುವ ಪ್ರತಿಕ್ರಿಯೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.
ಇದನ್ನೂ ಓದಿ:
ಪ್ರಶಾಂತ್ ನೀಲ್ ಕಣ್ಣು ತಪ್ಪಿಸಿ ಪ್ರಭಾಸ್ ವಿಡಿಯೋ ಲೀಕ್? ಸಲಾರ್ ಸೆಟ್ನಲ್ಲಿ ಕಿತಾಪತಿ
Published On - 5:16 pm, Sun, 22 August 21