‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಹಲವರ ಜೊತೆ ಒಡನಾಟ ಇದೆ. ಅವರಿಗೆ ಇಂದು (ಡಿ.13) ಜಾಮೀನು ಸಿಕ್ಕಿದ್ದಕ್ಕೆ ಬಹುತೇಕ ಸೆಲೆಬ್ರಿಟಿಗಳಿಗೆ ಸಂತಸ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ನಟ ಪ್ರಕಾಶ್ ರಾಜ್ ಅವರು ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ದರ್ಶನ್ಗೆ ಜಾಮೀನು ಸಿಕ್ಕ ಬಳಿಕ ಆ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ ತುಂಬ ವ್ಯಂಗ್ಯವಾಗಿ ಪ್ರಕಾಶ್ ರಾಜ್ ಅವರು ಉತ್ತರ ನೀಡಿದ್ದಾರೆ.
ಮೈಸೂರಿನಲ್ಲಿ ನಟ ಪ್ರಕಾಶ್ ರೈ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ದರ್ಶನ್ಗೆ ಜಾಮೀನು ಸಿಕ್ಕಿತು. ಪ್ರಕಾಶ್ ರಾಜ್ ಕೂಡ ಕನ್ನಡ ಚಿತ್ರರಂಗದ ಪ್ರಮುಖ ನಟನಾದ್ದರಿಂದ ಅವರಿಗೆ ಈ ಕುರಿತು ಅಭಿಪ್ರಾಯ ಕೇಳಲಾಯಿತು. ಆದರೆ ಅದಕ್ಕೆ ಉತ್ತರಿಸಲು ಪ್ರಕಾಶ್ ರಾಜ್ ಇಷ್ಟಪಡಲಿಲ್ಲ. ಹಾಗಂತ ಅವರು ನೋ ಕಮೆಂಟ್ಸ್ ಎಂದು ಕೂಡ ಸುಮ್ಮನಾಗಲಿಲ್ಲ.
ಪ್ರಕಾಶ್ ರಾಜ್ ಅವರು ಶ್ರೀರಂಗಪಟ್ಟಣದಲ್ಲಿ ‘ನಿರ್ದಿಗಂತ’ ರಂಗಶಾಲೆಯನ್ನು ನಡೆಸುತ್ತಿದ್ದಾರೆ. ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳ ಕುರಿತಾಗಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ದರ್ಶನ್ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಪ್ರಕಾಶ್ ರಾಜ್ ವ್ಯಂಗ್ಯ ಮಾಡಿದರು. ‘ನಾನು ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ಳ ನನ್ನ ಮಕ್ಕಳ ಬಗ್ಗೆ ಅಲ್ಲ. ಹಾಗಾಗಿ ಮಕ್ಕಳ ಬಗ್ಗೆ ಮಾತ್ರ ಮಾತನಾಡೋಣ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ. ಆ ಕಾರಣಕ್ಕಾಗಿ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಹಲ್ಲೆ ಮಾಡಿ ಸಾಯಿಸಿದ ಆರೋಪ ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್ ಮೇಲಿದೆ. ಈ ಪ್ರಕರಣದಲ್ಲಿ ಎಲ್ಲ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಜಾಮೀನು ನೀಡಲು ಹೈಕೋರ್ಟ್ ಪರಿಗಣಿಸಿದ ಪ್ರಮುಖ ಅಂಶಗಳು ಇಲ್ಲಿವೆ
ಸದ್ಯಕ್ಕೆ ದರ್ಶನ್ ಅವರು ಬೆನ್ನು ನೋವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಜಾಮೀನು ಸಿಕ್ಕಿದ್ದಕ್ಕೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಜಾಮೀನು ಸಿಕ್ಕ ಕೂಡಲೇ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರದಲ್ಲಿ ಆನಂದಭಾಷ್ಪ ಸುರಿಸಿದ್ದಾರೆ. ‘ಬಹಳ ಖುಷಿ ಆಗಿದೆ’ ಎಂದು ಅವರು ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.