ಸರಳವಾದ ಕತೆಗುಳ್ಳ, ಒಂದು ಸೀಮಿತ ಪ್ರದೇಶಕ್ಕೆ ಮೀಸಲಾದ ಕತೆಯುಳ್ಳ ಸಿನಿಮಾಗಳು ಇತ್ತೀಚೆಗೆ ಗಮನ ಸೆಳೆಯುತ್ತಿವೆ. ವಿಶೇಷವಾಗಿ ಪರಭಾಷೆಯಲ್ಲಿ ಇಂಥಹಾ ಕತೆಗಳೇ ಹೆಚ್ಚು ಯಶಸ್ಸು ಕಾಣುತ್ತಿವೆ. ಕನ್ನಡದಲ್ಲಿಯೂ ಸಹ ‘ಬೆಲ್ ಬಾಟಮ್’, ‘ದೃಶ್ಯ’ ಇನ್ನಿತರೆ ಇದೇ ರೀತಿಯ ಸಿನಿಮಾಗಳು ಗೆದ್ದ ಉದಾಹರಣೆ ಸಾಕಷ್ಟಿವೆ. ಇದೀಗ ಇದೇ ರೀತಿಯ ಜಾನರ್ನ, ಒಂದು ಪುಟ್ಟ ಊರು, ಆ ಊರಿನ ಪೊಲೀಸ್ ಠಾಣೆ, ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗಳು, ಅವರ ಸುತ್ತ ನಡೆಯುವ ಘಟನೆಗಳು ಇಂಥಹಾ ಸರಳ ಕತೆಯನ್ನು ಹೊಂದಿರುವ ಸಿನಿಮಾ ಒಂದು ಕನ್ನಡದಲ್ಲಿ ತೆರೆಗೆ ಬರಲು ಸಜ್ಜಾಗಿದೆ ಅದುವೇ ‘ಲಾಫಿಂಗ್ ಬುದ್ಧ’
ರಿಷಬ್ ಶೆಟ್ಟಿ ನಿರ್ಮಾಣ ಮಾಡಿ, ಗೆಳೆಯ ಪ್ರಮೋದ್ ಶೆಟ್ಟಿ ನಟಿಸಿರುವ ಕಾಮಿಡಿ, ಥ್ರಿಲ್ಲರ್ ಕತೆಯುಳ್ಳ ‘ಲಾಫಿಂಗ್ ಬುದ್ಧ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಮಾತ್ರವಲ್ಲದೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ‘ಲಾಫಿಂಗ್ ಬುದ್ಧ’ ಸಿನಿಮಾ ಒಂದು ಸರಳವಾದ ಕತೆಯನ್ನು ಹೊಂದಿರುವ ಸಿನಿಮಾ. ದೊಡ್ಡ ದೇಹಾಕಾರದ ಆದರೆ ಸದಾ ಹಸನ್ಮುಖಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬರ ವೈಯಕ್ತಿಕ ಜೀವನ, ವೃತ್ತಿ ಜೀವನದಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ
ಸಿನಿಮಾದಲ್ಲಿ ಠೊಣಪ ಪೊಲೀಸ್ ಕಾನ್ಸ್ಟೆಬಲ್ ಆಗಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ತಮ್ಮ ದಢೂತಿ ದೇಹದಿಂದ ತಮಾಷೆಗೆ ಒಳಪಡುವ ಮಾತ್ರವಲ್ಲದೆ, ಹಿರಿಯ ಅಧಿಕಾರಿಗಳಿಂದ ಟೀಕೆ, ನಿಂದನೆಗೆ ಗುರಿಯಾಗುವ ಕಾನ್ಸ್ಟೆಬಲ್ ಆ ಬಳಿಕ ತನ್ನ ದೇಹ ಕರಗಿಸಲು ನಡೆಸುವ ಹೋರಾಟ ಅದರ ಮಧ್ಯೆ ಠಾಣೆಯಲ್ಲಿ ನಡೆಯುವ ಒಂದು ಭೀಕರ ಘಟನೆ ಅದರಿಂದ ಇಡೀ ಪೊಲೀಸ್ ಠಾಣೆಯ ಸಿಬ್ಬಂದಿಯ ಮೇಲಾಗುವ ಪರಿಣಾಮ ಆ ಸಮಸ್ಯೆಯಿಂದ ಹೊರಬರಲು ಪ್ರಮೋದ್ ಶೆಟ್ಟರ ಪಾತ್ರ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಮಾಡುವ ಪ್ರಯತ್ನಗಳು ಇವನ್ನೆಲ್ಲ ತಮಾಷೆಯ ಲೇಪನದೊಂದಿಗೆ ಸಿನಿಮಾದಲ್ಲಿ ಹೇಳಲಾಗಿರುವುದು ಟ್ರೈಲರ್ನಿಂದ ಗೊತ್ತಾಗುತ್ತಿದೆ.
ಪ್ರಮೋದ್ ಶೆಟ್ಟಿ ನಾಯಕ ನಟರಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದು. ಭರತ್ ರಾಜ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ವಿಷ್ಣು ವಿಜಯ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಜೊತೆಗೆ ತೇಜು ಬೆಳವಾಡಿ, ಸುಂದರ್ ರಾಜ್ ಇನ್ನಿತರರು ನಟಿಸಿದ್ದಾರೆ. ಸಿನಿಮಾದಲ್ಲಿ ನಟ ದಿಗಂತ್ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಸಿನಿಮಾಕ್ಕೆ ಟ್ವಿಸ್ಟ್ ಕೊಡುವುದು ಇವರದ್ದೇ ಪಾತ್ರ. ಸಿನಿಮಾ ಆಗಸ್ಟ್ 30ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ