ಹರೀಶ್ ಸೀನಪ್ಪ-ಪಾಯಲ್ ಚಂಗಪ್ಪ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್

ಸಾಲ ಮಾಡಿಕೊಂಡ ಹುಡುಗನ ಕಹಾನಿ ಇರುವ ‘ಕ್ರೆಡಿಟ್ ಕುಮಾರ’ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಧ್ರುವ ಸರ್ಜಾ ಅವರು ಅತಿಥಿಯಾಗಿ ಬಂದು ಚಿತ್ರಕ್ಕೆ ಶುಭ ಕೋರಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭ ಆಗಲಿದೆ. ಹರೀಶ್ ಸೀನಪ್ಪ ಮತ್ತು ಪಾಯಲ್​ ಚಂಗಪ್ಪ ಅವರು ಜೋಡಿಯಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಂಡದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..

ಹರೀಶ್ ಸೀನಪ್ಪ-ಪಾಯಲ್ ಚಂಗಪ್ಪ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್
‘ಕ್ರೆಡಿಟ್​ ಕುಮಾರ’ ಸಿನಿಮಾದ ಮುಹೂರ್ತ ಸಮಾರಂಭ
Follow us
|

Updated on: Aug 14, 2024 | 6:35 PM

ಚಂದನವನದ ಹೊಸ ಹೀರೋಗಳ ಸಾಲಿಗೆ ಹರೀಶ್ ಸೀನಪ್ಪ ಸೇರ್ಪಡೆ ಆಗಿದ್ದಾರೆ. ಪತ್ರಕರ್ತನಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅವರು ಈಗ ಹೀರೋ ಆಗಿ ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರ ಮೊದಲ ಸಿನಿಮಾಗೆ ‘ಕ್ರೆಡಿಟ್ ಕುಮಾರ’ ಎಂದು ಶೀರ್ಷಿಕೆ ಇಡಲಾಗಿದೆ. ‘ಬಾಂಡ್ ರವಿ’ ಸಿನಿಮಾ ಖ್ಯಾತಿಯ ಡೈರೆಕ್ಟರ್​ ಪ್ರಜ್ವಲ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ ಆಗಿದ್ದು, ಇಂದು (ಆಗಸ್ಟ್​ 14) ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಸಮಾರಂಭ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಅವರು ಆಗಮಿಸಿ ಚಿತ್ರತಂಡಕ್ಕೆ ವಿಶ್​ ಮಾಡಿದ್ದಾರೆ.

‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಮಾತ್ರವಲ್ಲದೇ ಹಿರಿಯ ನಿರ್ದೇಶಕ ಎಸ್. ಮಹೇಂದರ್, ನಟ ಪ್ರಮೋದ್, ‘ಮಾರ್ಟಿನ್’ ನಿರ್ಮಾಪಕ ಉದಯ್ ಮೆಹ್ತಾ, ನಿರ್ಮಾಪಕ ನರಸಿಂಹ, ಸೆಲೆಬ್ರಿಟಿ ಜಿಮ್ ಟ್ರೇನರ್ ಪಾನಿಪುರಿ ಕಿಟ್ಟಿ, ಸಂಭಾಷಣೆಕಾರ ಮಾಸ್ತಿ, ಅಣಜಿ ನಾಗರಾಜ್ ಮುಂತಾದ ಗಣ್ಯರು ಆಗಮಿಸಿ ‘ಕ್ರಿಡಿಟ್​ ಕುಮಾರ’ ಸಿನಿಮಾಗೆ ಶುಭ ಹಾರೈಸಿದ್ದಾರೆ. ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಧ್ರುವ ಸರ್ಜಾ ಚಾಲನೆ ನೀಡಿದರು. ಅಲ್ಲದೇ ‘ಹರೀಶ್ ಅವರಿಗೆ ಒಳ್ಳೆಯದಾಗಬೇಕು’ ಎಂದು ಹಾರೈಸಿದರು. ನಟ ಪ್ರಮೋದ್, ನಿರ್ದೇಶಕ ಎಸ್. ಮಹೆಂದರ್ ಅವರು ಕೂಡ ಚಿತ್ರತಂಡದ ಬೆನ್ನು ತಟ್ಟಿದರು.

ಈ ಸಿನಿಮಾದಲ್ಲಿ ಹರೀಶ್​ ಸೀನಪ್ಪ ಅವರಿಗೆ ಜೋಡಿಯಾಗಿ ಪಾಯಲ್​ ಚಂಗಪ್ಪ ಅವರು ನಟಿಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ಕಿರುಚಿತ್ರಗಳ ಮೂಲಕ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ಪಾಯಲ್​ ಅವರು ‘ಕ್ರಿಡಿಟ್​ ಕುಮಾರ’ ಸಿನಿಮಾ ಮೂಲಕ ನಾಯಕಿ ಆಗುತ್ತಿದ್ದಾರೆ. ಭೂಮಿ ಎಂಬ ಪಾತ್ರವನ್ನು ಅವರು ಈ ಸಿನಿಮಾದಲ್ಲಿ ಮಾಡುತ್ತಿದ್ದಾರೆ. ‘ಶಾರ್ಟ್ ಸಿನಿಮಾ ಮಾಡಿದ್ದೇನೆ. ಜನರಿಂದ ತುಂಬಾ ಪ್ರೀತಿ ಸಿಕ್ಕಿದೆ. ಈಗ ನಾಯಕಿಯಾಗಿ ನಟಿಸುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗಿಯಾಗಿ ಬ್ಯೂಟಿಶಿಯನ್ ಪಾತ್ರ ಮಾಡುತ್ತಿದ್ದೇನೆ’ ಎಂದು ಪಾಯಲ್​ ಹೇಳಿದ್ದಾರೆ.

ಹೀರೋ ಆಗಬೇಕು ಎಂಬುದು ನಾಯಕ ಹರೀಶ್ ಅವರ ಬಹುವರ್ಷಗಳ ಕನಸು. ‘ಇಡೀ ಚತ್ರರಂಗ ನನಗೆ ಸಹಾಯ ಮಾಡಿದೆ. ಇದು ನನ್ನ ಮೊದಲ ಹೆಜ್ಜೆ. 2009ರಲ್ಲಿ ಮೊದಲು ಕೇಬಲ್ ಚಾನಲ್​ನಲ್ಲಿ ನಾನು ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು. ಆಗಲೇ ಕಲಾವಿದನಾಗಬೇಕು ಅಂತ ಅಂದುಕೊಂಡಿದ್ದೆ. ಆ ಕನಸು ಈಗ ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು. ಇದು ಇಲ್ಲದೇ ಜೀವನ ಅಪೂರ್ಣ ಆಗುತ್ತಿತ್ತು’ ಎಂದು ಹರೀಶ್​ ಹೇಳಿದ್ದಾರೆ.

ಇದನ್ನೂ ಓದಿ: ಕಲಾವಿದರ ಸಂಘದಲ್ಲಿ ಪೂಜೆ, ಹೋಮ: ಪ್ರಮುಖ ನಟರೇ ಬಂದಿಲ್ಲ ಎಂದಿದ್ದಕೆ ಸುಮಲತಾ ಏನಂದ್ರು?

ಈ ಸಿನಿಮಾದ ಮೂಲಕ ವಾಗೀಶ್ ಮುತ್ತಿಗೆ ಅವರು ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದಾರೆ. ‘ಎರಡು ತಿಂಗಳ ಹಿಂದಷ್ಟೇ ಬ್ಯಾನರ್ ನೋಂದಣಿ ಮಾಡಿಸಿದ್ದೆ. ಉತ್ತಮ ಸಿನಿಮಗಾಗಿ ಕಾಯುತ್ತಿದ್ದೆ. ‘ಕ್ರೆಡಿಟ್ ಕುಮಾರ’ ಸಿನಿಮಾ ಸಿಕ್ಕಿದೆ. ಉತ್ತಮ ಕಥೆ ಇರುವ ಸಿನಿಮಾ ಇದು. ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ’ ಎಂದು ಅವರು ಹೇಳಿದರು. ‘ಸಾಲ ಮಾಡಿಕೊಂಡು ಬದುಕುವ ಒಬ್ಬ ಯುವಕನ ಕಥೆ ಈ ಸಿನಿಮಾದಲ್ಲಿ ಇರಲಿದೆ. ಹರೀಶ್ ಅವರಿಗಾಗಿಯೇ ಈ ಕಥೆ ಬರೆದಿದ್ದು’ ಎಂದು ನಿರ್ದೇಶಕ ಪ್ರಜ್ವಲ್ ಹೇಳಿದ್ದಾರೆ. ಈ ಚಿತ್ರಕ್ಕೆ ಧರ್ಮ ವಿಶ್ ಅವರ ಸಂಗೀತ ನಿರ್ದೇಶನ ಇರಲಿದೆ. ಮೂರು ಹಾಡುಗಳು ಇರಲಿವೆ. ವಿ. ನಾಗೇಂದ್ರ ಪ್ರಸಾದ್, ಭರ್ಜರಿ ಚೇತನ್, ಪ್ರಮೋದ್ ಮರುವಂತೆ ಸಾಹಿತ್ಯ ಬರೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.