ಶಿವರಾಜ್ ಕುಮಾರ್ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ
ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ‘45’ ಪೋಸ್ಟರ್ ಟೀಸರ್ ಅನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಇದು ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಸಹ ಇದ್ದಾರೆ.
ಇಂದು (ಜುಲೈ 12) ಶಿವರಾಜ್ ಕುಮಾರ್ ಹುಟ್ಟುಹಬ್ಬ. ಈ ಬಾರಿ ತಾವು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿಯೂ ಅಭಿಮಾನಿಗಳಿಗೆ ಸಿಗಲಾಗುವುದಿಲ್ಲ ಎಂದು ಶಿವಣ್ಣ ಈಗಾಗಲೇ ಘೊಷಣೆ ಮಾಡಿದ್ದಾರೆ. ಆದರೆ ಶಿವಣ್ಣ ನಟಿಸುತ್ತಿರುವ ಸಾಲು-ಸಾಲು ಸಿನಿಮಾಗಳ ಚಿತ್ರತಂಡದವರು ತಮ್ಮ-ತಮ್ಮ ಸಿನಿಮಾಗಳ ಶಿವಣ್ಣನ ಪೋಸ್ಟರ್, ಟೀಸರ್, ಟ್ರೈಲರ್ಗಳನ್ನು ಬಿಡುಗಡೆ ಮಾಡುವ ಮೂಲಕ ಶಿವಣ್ಣನ ಹುಟ್ಟುಹಬ್ಬಕ್ಕೆ ಹೊಸ ಕಳೆತಂದಿದ್ದಾರೆ. ‘ಭೈರತಿ ರಣಗಲ್’, ‘ಘೋಸ್ಟ್ 2’ ಇನ್ನೂ ಕೆಲವು ಸಿನಿಮಾಗಳ ಪೋಸ್ಟರ್ಗಳನ್ನು ಹಂಚಿಕೊಂಡಿದ್ದಾರೆ.
ಶಿವಣ್ಣ ನಟಿಸಿರುವ ನಾಲ್ಕು ಸಿನಿಮಾಗಳ ಪೋಸ್ಟರ್ ಹಾಗೂ ಒಂದು ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಇದೀಗ ನಟ, ನಿರ್ದೇಶಕ ರಿಷಬ್ ಶೆಟ್ಟಿ ಶಿವಣ್ಣ ನಟನೆಯ ‘45’ ಸಿನಿಮಾದ ಪೋಸ್ಟರ್ ಟೀಸರ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಓಜಿ (ಒರಿಜಿನಲ್ ಗ್ಯಾಂಗ್ಸ್ಟರ್) ಅನ್ನು ಮತ್ತೆ ಪರಿಚಯಿಸುತ್ತಿದ್ದೇವೆ’ ಎಂಬ ಅಡಿಬರಹದೊಂದಿಗೆ ಟೀಸರ್ ವಿಡಿಯೋ ಅನ್ನು ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ಶಿವಣ್ಣ ಪ್ರತಿ ಸಿನಿಮಾದಂತೆ ಈ ಸಿನಿಮಾದಲ್ಲಿಯೂ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ‘45’ ಶಿವಣ್ಣನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ಶಿವಣ್ಣನ ಜೊತೆಗೆ ಉಪೇಂದ್ರ ಸಹ ನಟಿಸುತ್ತಿದ್ದಾರೆ ಮಾತ್ರವಲ್ಲ ರಾಜ್ ಬಿ ಶೆಟ್ಟಿಯೂ ಇದ್ದಾರೆ. ಉಪೇಂದ್ರ ಮತ್ತು ಶಿವಣ್ಣ ಒಟ್ಟಿಗೆ ನಟಿಸಿ ವರ್ಷಗಳೇ ಆಗಿದ್ದವು ಈ ಸಿನಿಮಾ ಮೂಲಕ ಈ ಹಳೆ ಜೋಡಿ ಮತ್ತೆ ಒಂದಾಗುತ್ತಿದೆ. ಜೊತೆಗೆ ಪ್ರತಿಭಾವಂತ ನಟ ರಾಜ್ ಬಿ ಶೆಟ್ಟಿ ಸಹ ಸೇರಿಕೊಂಡಿದ್ದಾರೆ. ಸಿನಿಮಾವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಗಳಿವೆ. ಇದು ಗ್ಯಾಂಗ್ಸ್ಟರ್ ಸಿನಿಮಾ ಆಗಿದೆ.
ಇದನ್ನೂ ಓದಿ:ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
ಶಿವರಾಜ್ ಕುಮಾರ್ ನಟಿಸುತ್ತಿರುವ ‘ಭೈರತಿ ರಣಗಲ್’ ಸಿನಿಮಾದ ಟೀಸರ್ ಇಂದೇ ಬಿಡುಗಡೆ ಆಗಿದೆ. ಇದು ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್, ನರ್ತನ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಹೇಮಂತ್ ರಾವ್ ನಿರ್ದೇಶನ ಮಾಡುತ್ತಿರುವ ‘ಭೈರವನ ಕೊನೆ ಪಾಠ’ ಸಿನಿಮಾದಲ್ಲಿಯೂ ಶಿವಣ್ಣ ನಟಿಸುತ್ತಿದ್ದು ಆ ಸಿನಿಮಾದ ಪೋಸ್ಟರ್ ಎರಡು ದಿನದ ಹಿಂದೆ ಬಿಡುಗಡೆ ಆಗಿದೆ. ತೆಲುಗಿನ ಸೂಪರ್ ಸ್ಟಾರ್ ರಾಮ್ ಚರಣ್ ಜೊತೆಗೂ ಶಿವಣ್ಣ ನಟಿಸುತ್ತಿದ್ದು ಬುಚ್ಚಿ ಬಾಬು ಸನಾ ನಿರ್ದೇಶನದ ಆ ಸಿನಿಮಾದ ಪೋಸ್ಟರ್ ಸಹ ಇಂದು ಬಿಡುಗಡೆ ಆಗಿದೆ. ಇದೆಲ್ಲರ ಜೊತೆಗೆ ‘ದಳವಾಯಿ’ ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ. ‘ಉತ್ತರಕಾಂಡ’ ಸಿನಿಮಾದ ಪೋಸ್ಟರ್ ಕೆಲ ದಿನದ ಹಿಂದೆ ಬಿಡುಗಡೆ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ