ಅಭಿಮಾನಿಗಳ ಎರಡು ಮುಖ ಮತ್ತು ಅಂಕುಶ ಕಳೆದುಕೊಂಡ ಸ್ಟಾರ್ ನಟರು
ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೊಮ್ಮೆ ಅಭಿಮಾನಿಗಳ ಬಗ್ಗೆ ಅಭಿಮಾನಿ ಸಂಘಗಳ ಬಗ್ಗೆ ವಿಮರ್ಶೆ ಆರಂಭವಾಗಿದೆ. ಚಿತ್ರರಂಗದೊಂದಿಗೆ ದಶಕಗಳ ನಂಟು ಹೊಂದಿರುವ ಅಭಿಮಾನಿ ಸಂಘಗಳು ಸ್ಟಾರ್ ನಟರಿಗೆ ಬಗಲ ಮುಳ್ಳಾಗಿವೆಯೇ? ಈ ಅಭಿಮಾನಿ ಸಂಘಗಳ ಇತಿಹಾಸವೇನು? ಅಭಿಮಾನಿಗಳ ಅತಿರೇಕದ ವರ್ತನೆಗೆ ಕಾರಣವೇನು? ವಿಶ್ಲೇಷಣೆ ಇಲ್ಲಿದೆ.

ಕೋವಿಡ್ ಸಂದರ್ಭದಲ್ಲಿ ಪ್ರವಾಸಿತಾಣಗಳು ಜನರಿಲ್ಲದೆ ಬಣಗುಡುತ್ತಿದ್ದವು, ಜನರಿಲ್ಲದೆ, ಅವರು ನೀಡುವ ಟಿಕೆಟ್ ಹಣವಿಲ್ಲದೆ ಮೃಗಾಲಯಗಳಲ್ಲಿನ ಪ್ರಾಣಿಗಳ ಪಾಲನೆ ಕಷ್ಟವಾಗಿತ್ತು. ಆಗ ನಟ, ದರ್ಶನ್ ಮೃಗಾಲಯದ ಪ್ರಾಣಿಗಳ ದತ್ತು ಪಡೆಯಿರಿ ಎಂದು ಕರೆ ನೀಡಿದರು. ಅಷ್ಟೆ ಅವರ ಹಲವು ಅಭಿಮಾನಿ ಸಂಘಗಳು ರಾಜ್ಯದ ಬೇರೆ ಬೇರೆ ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಪಾಲನೆಗೆ ಸಹಾಯ ಮಾಡಿದರು. ದರ್ಶನ್ರ ಅಭಿಮಾನಿಗಳ ಕೆಲಸದಿಂದ ಮೃಗಾಲಯಗಳ ಪ್ರಾಣಿಗಳ ಹಸಿವು ನೀಗಿತ್ತು. ಡಾ ರಾಜ್ಕುಮಾರ್ ಅಭಿಮಾನಿಗಳು, ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಮಾಡಿದ ನೇತ್ರದಾನ ವಿಶ್ವ ಮಟ್ಟದಲ್ಲಿ ದಾಖಲೆಯೇ ಆಗಿಬಿಟ್ಟಿತು. ಕಿಚ್ಚನ ಅಭಿಮಾನಿಗಳು ಕೋವಿಡ್ ಸಮಯದಲ್ಲಿ ಮಾಡಿದ ಸಹಾಯ, ವಿದ್ಯಾರ್ಥಿಗಳಿಗೆ ನೀಡಿದ ಸ್ಕಾಲರ್ಶಿಪ್ ಹಣದ ವರದಿಗಳು ಪತ್ರಿಕೆಗಳಲ್ಲಿ, ವೆಬ್ ಪತ್ರಿಕೆಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿತ್ತು. ಇಂಥಹಾ ಘನ ಸಮಾಜ ಮುಖಿ ಕಾರ್ಯ ಮಾಡಿದ್ದ ಅದೇ ಅಭಿಮಾನಿಗಳು ತಮ್ಮ ಇನ್ನೊಂದು ಮುಖವನ್ನು ಆಗಾಗ್ಗೆ ತೋರಿಸುತ್ತಲೇ ಬಂದಿದ್ದಾರೆ. ಜಗ್ಗೇಶ್ ಅಂಥಹಾ ಹಿರಿಯ ನಟನ ಮೇಲೆರಗಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ದರ್ಶನ್ ಅಭಿಮಾನಿಗಳು. ಇತರೆ ನಟ-ನಟಿಯರ ಬಗ್ಗೆ ಕೀಳಾಗಿ ಕಮೆಂಟ್ ಮಾಡಿದರು. ದರ್ಶನ್ರ ಟೀಕಿಸಿದ ಒಬ್ಬ ಯುವಕನ ಕೈ ಮೇಲೆ ಕರ್ಪೂರ ಹಚ್ಚಿ ವಿಡಿಯೋ ಮಾಡಿದ್ದರು. ಸುದೀಪ್ರನ್ನು ಟೀಕಿಸಿದ ಅಹೋರಾತ್ರರ ಮನೆಗೆ ನುಗ್ಗಿ ಸುದೀಪ್ ಅಭಿಮಾನಿಗಳು ದಾಂಧಲೆ ಎಬ್ಬಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಟೀಕೆಗೆ ಗುರಿಯಾಯ್ತು. ಹೊಸಪೇಟೆಗೆ ಸಿನಿಮಾ ಪ್ರಚಾರಕ್ಕೆ ಬಂದಿದ್ದ ನಟ ದರ್ಶನ್ ಮೇಲೆ ಪುನೀತ್ ಅಭಿಮಾನಿಗಳು ಚಪ್ಪಲಿ ಎಸೆದರು ಎಂಬ ಆರೋಪ ಕೇಳಿ ಬಂತು. ಒಬ್ಬ ವ್ಯಕ್ತಿಯನ್ನು ಅತಿಯಾಗಿ ಪ್ರೀತಿಸುವ ಅಭಿಮಾನಿಗಳು ಇತರರ...




