‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ನಾಯಕಿ ಆದ ಪ್ರಿಯಾಂಕಾ‌ ಮೋಹನ್

Priyanka Mohan in Kannada: ‘ಸರಿಪೋದ ಶನಿವಾರಂ', ‘ಗ್ಯಾಂಗ್‌ಲೀಡರ್', ತಮಿಳಿನ ‘ಡಾಕ್ಟರ್', ‘ಟಿಕ್‌ಟಾಕ್', ‘ಕ್ಯಾಪ್ಟನ್ ಮಿಲ್ಲರ್', ‘ಬ್ರದರ್' ಇನ್ನೂ ಹಲವು ಪರಭಾಷೆ ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ನಟಿ ಎನಿಸಿಕೊಂಡಿರುವ ಪ್ರಿಯಾಂಕಾ ಮೋಹನ್ ಅವರು ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರಕ್ಕೆ ನಾಯಕಿ ಆದ ಪ್ರಿಯಾಂಕಾ‌ ಮೋಹನ್
Operation Dream Theater
Updated By: ಮಂಜುನಾಥ ಸಿ.

Updated on: Nov 20, 2025 | 1:15 PM

‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ (Operation dream theater) ಸಿನಿಮಾ ಪೋಸ್ಟರ್‌ ಹಾಗೂ ಫಸ್ಟ್‌ ಲುಕ್‌ ಮೂಲಕ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇವರು ಮೂಲತಃ ಕನ್ನಡದವರು. ಇಷ್ಟು ದಿನ ಪರಭಾಷೆಯಲ್ಲಿ ಬ್ಯುಸಿ ಇದ್ದ ಅವರಿಗೆ ಕನ್ನಡದಲ್ಲಿ ಸಿನಿಮಾ ಮಾಡೋ ಅವಕಾಶ ಸಿಕ್ಕಿದೆ.

ಪ್ರಿಯಾಂಕಾ ಮೋಹನ್ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್, ನಾನಿ, ತಮಿಳಿನಲ್ಲಿ ಧನುಶ್ ಹಾಗೂ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವು ಸೃಷ್ಟಿ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈಗ ಅವರು 80ರ ದಶಕದ ಬಾಂಡ್- ಸ್ಪೈ ಕಥೆ ಹೊಂದಿರುವ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಚಿತ್ರಕ್ಕೆ ನಾಯಕಿ.

ಪ್ರಿಯಾಂಕಾ ನಟಿಸಿದ ಸಿನಿಮಾಗಳು

ಪ್ರಿಯಾಂಕಾ ಅವರು ‘ಸರಿಪೋದ ಶನಿವಾರಂ’, ‘ಗ್ಯಾಂಗ್‌ಲೀಡರ್’, ತಮಿಳಿನ ‘ಡಾಕ್ಟರ್’, ‘ಟಿಕ್‌ಟಾಕ್’, ‘ಕ್ಯಾಪ್ಟನ್ ಮಿಲ್ಲರ್’, ‘ಬ್ರದರ್’ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ‘ಒಂದು ಕಥೆ ಹೇಳ್ಳಾ’ ಹೆಸರಿನ ಕನ್ನಡ ಸಿನಿಮಾ ಮಾಡಿದ್ದರು. ಇದು ಅವರ ಮೊದಲ ಸಿನಿಮಾ. ಆ ಬಳಿಕ ಪರಭಾಷೆಯಲ್ಲಿ ಬ್ಯುಸಿ ಆದರು. ಅವರು ಈಗ ಮತ್ತೆ ಕನ್ನಡಕ್ಕೆ ಮರಳಿದ್ದಾರೆ.

‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ನಟಿಸೋ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮೋಹನ್, ‘ಶಿವರಾಜ್​ಕುಮಾರ್ ಸಿನಿಮಾ ನೋಡಿ ಬೆಳೆದವನು. ಧನಂಜಯ್ ಹಾಗೂ ಶಿವರಾಜ್​ಕುಮಾರ್ ಜೊತೆ ನಟಿಸೋ ಬಗ್ಗೆ ಖುಷಿ ಇದೆ’ ಎಂದಿದ್ದಾರೆ.

ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹೇಮಂತ್ ಎಂ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಶೂಟಿಂಗ್ ಆರಂಭಿಸಲಿದೆ.

ಶಿವಣ್ಣ ಹಾಗೂ ಧನಂಜಯ್‌ರ ರೆಟ್ರೋ ಲುಕ್‌ ಅಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಡಾ. ರಾಜ್‌ಕುಮಾರ್‌ ಅವರ ಸ್ಪೈ ಸಿನಿಮಾಗಳನ್ನು ನೆನಪಿಸಿವೆ ಎಂದರೂ ತಪ್ಪಾಗಲಾರದು. ಶಿವಣ್ಣ ಅವರು ಒಂದು ಹಂತದಲ್ಲಿ ರಾಜ್​ಕುಮಾರ್ ರೀತಿಯೇ ಕಾಣಿಸುತ್ತಾರೆ. ಚರಣ್‌ ರಾಜ್‌ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಅದ್ವೈತ ಗುರುಮೂರ್ತಿ ಛಾಯಾಗ್ರಾಹಣ ಇದೆ. ಹಿರಿಯ ಮೇಕಪ್‌ಮನ್‌ ಎನ್‌ ಕೆ ಉಮಾ ಮಹೇಶ್ವರ ಹಾಗೂ ಕಾಸ್ಟ್ಯೂಮ್‌ ಡಿಸೈನರ್‌ ಇಂಚರಾ ಸುರೇಶ್‌ ಈ ರೆಟ್ರೋ ಜಗತ್ತನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:13 pm, Thu, 20 November 25