ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದವರ ಸುಳಿವು ಪತ್ತೆ

Priyanka Upendra: ಉಪೇಂದ್ರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿದ್ದ ದುರುಳರು 1.65 ಲಕ್ಷ ರೂಪಾಯಿ ಹಣವನ್ನು ಕಳುವು ಮಾಡಿದ್ದರು. ಘಟನೆ ನಡೆದ ಹತ್ತು ದಿನದ ಬಳಿಕ ಪೊಲೀಸರು ಹ್ಯಾಕರ್​​ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಹ್ಯಾಕರ್​​ಗಳನ್ನು ಬಂಧಿಸಲು ವಿಶೇಷ ತಂಡವನ್ನು ಬಿಹಾರಕ್ಕೆ ಕಳುಹಿಸುತ್ತಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದವರ ಸುಳಿವು ಪತ್ತೆ
Priyanka Upendra

Updated on: Sep 26, 2025 | 11:15 AM

ಡಿಜಿಟಲ್ ಅರೆಸ್ಟ್, ಮೊಬೈಲ್ ಹ್ಯಾಕಿಂಗ್ ಇನ್ನಿತರೆಗಳಿಂದ ವರ್ಷಕ್ಕೆ ಸಾವಿರಾರು ಕೋಟಿ ಹಣವನ್ನು ಜನ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರೇ ಈ ಡಿಜಿಟಲ್ ಮೋಸಕ್ಕೆ ಬಲಿ ಆಗುತ್ತಿರುವುದು ಹೆಚ್ಚು. ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಅನ್ನೇ ಕೆಲ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು. ಇದರಿಂದಾಗಿ 1.65 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಘಟನೆ ಕುರಿತು ಪ್ರಿಯಾಂಕಾ ಉಪೇಂದ್ರ ಮತ್ತು ಉಪೇಂದ್ರ ದೂರು ನೀಡಿದ್ದಲ್ಲದೆ, ಜಾಗೃತಿ ಮೂಡಿಸುವ ದೃಷ್ಟಿಯಿಂದಾಗಿ ಘಟನೆ ಬಗ್ಗೆ ಮಾಧ್ಯಮಗಳ ಬಳಿಯೂ ಮಾಹಿತಿ ನೀಡಿದ್ದರು. ಇದೀಗ ಬೆಂಗಳೂರು ಪೊಲೀಸರಿಗೆ ಹ್ಯಾಕರ್​​ಗಳ ಸುಳಿವು ದೊರೆತಿದೆ.

ಬಿಹಾರ ಮೂಲದ ಕೆಲವರು ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿರುವುದು ಗೊತ್ತಾಗಿದ್ದು, ಹ್ಯಾಕ್ ಮಾಡಿ ಕದ್ದ 1.65 ಲಕ್ಷ ರೂಪಾಯಿ ಹಣವನ್ನು ಹ್ಯಾಕರ್​​ಗಳು ಮೊದಲಿಗೆ ನಾಲ್ಕು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆ ನಂತರ ಆ ಹಣವನ್ನು ನಳಂದಾದ ಬ್ಯಾಂಕ್ ಖಾತೆ ಒಂದಕ್ಕೆ ವರ್ಗಾವಣೆ ಮಾಡಿದ್ದಾರೆ. ಇದೀಗ ಬೆಂಗಳೂರು ಪೊಲೀಸರು ಎಲ್ಲ ಬ್ಯಾಂಕ್ ಖಾತೆಗಳ ವಿವರಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಪಾದಿಸಿರುವ ಪೊಲೀಸರು ಇದೀಗ ಬಿಹಾರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಡಿಸಿಪಿ ಅಕ್ಷಯ್ ಮಚೀಂದ್ರ ಅವರು ನೀಡಿರುವ ಮಾಹಿತಿಯನ್ನು ಬಿಹಾರಕ್ಕೆ ತೆರಳಲು ವಿಶೇಷ ಪೊಲೀಸ್ ತಂಡವನ್ನು ರೆಡಿ ಮಾಡಲಾಗಿದ್ದು, ಶೀಘ್ರವೇ ತಂಡ ಬಿಹಾರಕ್ಕೆ ತೆರಳಲಿದೆ.

ಇದನ್ನೂ ಓದಿ:ಪ್ರಿಯಾಂಕಾ ಉಪೇಂದ್ರ ಐಫೋನ್ ಬಳಸಿದರೂ ಹ್ಯಾಕ್ ಆಗೋದು ತಪ್ಪಲಿಲ್ಲ: ಕಾರಣ ಏನು?

ಡಿಸಿಪಿ ಅಕ್ಷಯ್ ಮಚೀಂದ್ರ ಅವರು ನೀಡಿರುವ ಮಾಹಿತಿಯಂತೆ *121*9279295167# ಸಂಖ್ಯೆ ಬಳಸಿ ಬ್ಯಾಂಕ್ ಖಾತೆಯನ್ನು ಆರೋಪಿಗಳು ಹ್ಯಾಕ್ ಮಾಡಿದ್ದಾರೆ. ಇದೇ ರೀತಿಯ ಪ್ಯಾಟರ್ನ್ ಸಂಖ್ಯೆ ಬಳಸಿ ಆಂಧ್ರ ಪ್ರದೇಶ, ತೆಲಂಗಾಣ ಇತರೆ ಕೆಲವೆಡೆಯೂ ಮೊಬೈಲ್​​ಗಳನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಆರೋಪಿಗಳು ಮಾಡಿರುವುದು ಬೆಂಗಳೂರು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಪಾರ್ಸಲ್ ಬಂದಿದೆ ಎಂದು ಪ್ರಿಯಾಂಕಾ ಉಪೇಂದ್ರ ಅವರನ್ನು ನಂಬಿಸಿ ಅವರಿಂದ ಕೆಲ ಸಂಖ್ಯೆಗಳನ್ನು ಡಯಲ್ ಮಾಡಿಸಿರುವ ಹ್ಯಾಕರ್​​ಗಳು ಬಳಿಕ ಪ್ರಿಯಾಂಕಾ ಅವರ ಮೊಬೈಲ್​​​ನ ಕಂಟ್ರೋಲ್ ತೆಗೆದುಕೊಂಡು, ಪ್ರಿಯಾಂಕಾ ಅವರ ಮಗ ಮತ್ತು ಸಂಬಂಧಿಗೆ ಪ್ರಿಯಾಂಕಾ ಅವರ ಮೊಬೈಲ್ ನಂಬರ್ ಬಳಸಿ ಮೆಸೇಜ್ ಮಾಡಿದ್ದಾರೆ. ಅವರಿಗೆ ಹಣ ಹಾಕುವಂತೆ ಹೇಳಿದ್ದಾರೆ. ಅದರಂತೆ ಪ್ರಿಯಾಂಕಾ ಅವರ ಮಗ ಹಾಗೂ ಅವರ ಸಂಬಂಧಿ 1.65 ಲಕ್ಷ ರೂಪಾಯಿ ಹಣವನ್ನು ಹ್ಯಾಕರ್​​ಗಳು ಹೇಳಿದ ಖಾತೆಗೆ ಹಾಕಿದ್ದಾರೆ. ಆದರೆ ಅಷ್ಟರಲ್ಲೆ ಎಚ್ಚೆತ್ತ ಪ್ರಿಯಾಂಕಾ ಉಪೇಂದ್ರ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ. ಇನ್ನು ಕೇವಲ ಹತ್ತು ನಿಮಿಷ ತಡವಾಗಿದ್ದರೂ ಸಹ 10 ಲಕ್ಷ ರೂಪಾಯಿ ಹಣವನ್ನು ಕಳೆದುಕೊಳ್ಳಬೇಕಿತ್ತು. ಬಳಿಕ ಪ್ರಿಯಾಂಕಾ ಉಪೇಂದ್ರ ಮತ್ತು ಉಪೇಂದ್ರ ಅವರುಗಳು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಹ್ಯಾಕರ್​​ಗಳ ಬಗ್ಗೆ ಸುಳಿವು ಪೊಲೀಸರಿಗೆ ದೊರೆತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ