ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ, ರಾಜ್ಕುಮಾರ್ ಮೆಚ್ಚಿನ ರಾಜಕಾರಣಿಯ ನೆನೆದ ಚಿನ್ನೇಗೌಡ್ರು
Dr Rajkumar: ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ, ದೊಡ್ಮನೆಯ ಆಪ್ತ ಬಂಧು ಚಿನ್ನೇಗೌಡ್ರು, ರಾಜ್ಕುಮಾರ್ ಅವರ ಮೆಚ್ಚಿನ ರಾಜಕಾರಣಿ ಯಾರಾಗಿದ್ದರು ಎಂಬುದನ್ನು ತಿಳಿಸಿದ್ದಾರೆ.
ಶಿವರಾಜ್ ಕುಮಾರ್ (Shiva Rajkumar) ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮಾಜಿ ಸಿಎಂ, ದಿವಂಗತ ಎಸ್.ಬಂಗಾರಪ್ಪ (S Bangarappa) ಅವರ ಪುತ್ರಿಯಾದ ಗೀತಾ ಶಿವರಾಜ್ಕುಮಾರ್ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು, ಜೆಡಿಎಸ್ನಿಂದ ಚುನಾವಣೆ ಸ್ಪರ್ಧಿಸಿ ಸೋತಿದ್ದರು ಸಹ. ಇದೀಗ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದು, ತಮ್ಮ ಸಹೋದರ ಮಧು ಬಂಗಾರಪ್ಪ (Madhu Bangarappa) ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ ಬಗ್ಗೆ ದೊಡ್ಮನೆಯ ಸಂಬಂಧಿಯಾದ, ಪಾರ್ವತಮ್ಮ ರಾಜ್ಕುಮಾರ್ ಸಹೋದರ ಚಿನ್ನೇಗೌಡ್ರು ಪ್ರತಿಕ್ರಿಯಿಸಿದ್ದು, ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.
”ಗೀತಮ್ಮ, ಬಂಗಾರಪ್ಪನವರ ಮಗಳು ಅವರ ರಕ್ತದಲ್ಲೇ ರಾಜಕೀಯ ಇದೇ ಅವ್ರಿಗೆ ಒಳ್ಳೆದಾಗಲಿ. ನಮ್ಮ ಬೆಂಬಲ ಹಾಗು ಆಶೀರ್ವಾದ ಇದ್ದೇ ಇರುತ್ತೆ. ಇಂದು ಬೆಳಿಗ್ಗೆ ಅವರಿಗೆ ಕರೆ ಮಾಡಿ ಶುಭಾಷಯ ತಿಳಿಸಿದೆ” ಎಂದಿದ್ದಾರೆ. ಮುಂದುವರೆದು, ”ಬಂಗಾರಪ್ಪನವರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದವರು, ಅದರ ಮೂಲಕ ರಾಜಕೀಯಕ್ಕೆ ಬಂದು ಹಲವು ಹುದ್ದೆಗಳನ್ನು ಅನುಭವಿಸಿ, ಸಿಎಂ ಸಹ ಆಗಿ ಹಲವು ಒಳಿತಾದ ಕಾರ್ಯಗಳನ್ನು ಮಾಡಿದ್ದಾರೆ” ಎಂದರು.
ರಾಜ್ಕುಮಾರ್ ಹಾಗೂ ಅವರಿಗೆ ರಾಜಕೀಯದ ಬಗ್ಗೆ ಇದ್ದ ಅಭಿಪ್ರಾಯದ ಬಗ್ಗೆ ಮಾತು ಹೊರಳಿಸಿದ ಚಿನ್ನೇಗೌಡ್ರು, ರಾಜಕೀಯವೆಂದರೆ ರಾಜ್ಕುಮಾರ್ ಅವರಿಗೆ ಇಷ್ಟವಿರಲಿಲ್ಲ. ಅದರಿಂದ ದೂರವೇ ಇರುತ್ತಿದ್ದರು, ರಾಜಕಾರಣಿಗಳನ್ನು ಆಪ್ತರನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಇಂದಿರಾಗಾಂಧಿ ಮಂಗಳೂರಿನಲ್ಲಿ ಸ್ಪರ್ಧೆ ಮಾಡಿದಾಗ ರಾಜ್ಕುಮಾರ್ ಅವರನ್ನು ಚುನಾವಣೆಗೆ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನಗಳು ನಡೆದವು ಆದರೆ ರಾಜ್ಕುಮಾರ್ ಸುತಾರಾಂ ಒಪ್ಪಿರಲಿಲ್ಲ. ದೆಹಲಿಯಿಂದ ಜಾರ್ಜ್ ಫರ್ನಾಂಡೀಸ್ ಸೇರಿದಂತೆ ಹಲವರು ಕರೆ ಮಾಡುತ್ತಿದ್ದರು ಆದರೆ ಅವರು ಇಲ್ಲ ಎಂದು ನಾವು ಹೇಳುತ್ತಿದ್ದೆವು. ಭಾವ ಬೆಳಿಗ್ಗೆ ಕಾರು ತೆಗೆದುಕೊಂಡು ಹೋಗಿ ಶೂಟಿಂಗ್ ಮುಗಿಸಿ ಯಾವುದೋ ಹೋಟೆಲ್ನಲ್ಲಿ ಇದ್ದುಬಿಡುತ್ತಿದ್ದರು, ಇಂದಿರಾ ಗಾಂಧಿ ಎದುರು ವೀರೇಂದ್ರ ಪಾಟೀಲರ ಹೆಸರು ಘೋಷಣೆ ಆದ ಬಳಿಕವಷ್ಟೆ ಅವರು ಹೊರಗೆ ಬಂದಿದ್ದು ಎಂದು ನೆನಪು ಮಾಡಿಕೊಂಡರು ಚಿನ್ನೇಗೌಡರು.
ಇದನ್ನೂ ಓದಿ:Geetha Shivaraj Kumar: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ‘ದೊಡ್ಮನೆ ಸೊಸೆ’ ಗೀತಾ ಶಿವರಾಜ್ ಕುಮಾರ್
ಆದರೆ ಪ್ರತಿ ಚುನಾವಣೆಯಲ್ಲಿ ತಪ್ಪದೆ ಮತಹಾಕುತ್ತಿದ್ದ ರಾಜ್ಕುಮಾರ್ ಅವರಿಗೆ ನೆಹರು ಅವರ ಬಗ್ಗೆ ವಿಶೇಷ ಪ್ರೀತಿ ಇತ್ತು. ಯಾರಾದರೂ ಛೇಡಿಸಲು ನಿಮ್ಮ ಮತ ಯಾರಿಗೆ ಎಂದು ಕೇಳಿದರೆ ಅಂಗೈ ತೋರಿಸುತ್ತಿದ್ದರು. ನಮ್ಮ ತಂದೆಯವರು ಕಾಂಗ್ರೆಸ್ಸಿಗರು ಚಳವಳಿಗಳಲ್ಲಿ ಭಾಗವಹಿಸಿದವರು ಹಾಗಾಗಿ ಆ ಪಕ್ಷದ ಮೇಲೆ ತುಸು ಒಲವು ಎಂದು ಹೇಳುತ್ತಿದ್ದರು ಎಂದು ಚಿನ್ನೇಗೌಡರು ಹೇಳಿದ್ದಾರೆ. ಇದೀಗ ರಾಜ್ಕುಮಾರ್ ಅವರ ಸೊಸೆ ಗೀತಾ ಶಿವರಾಜ್ ಕುಮಾರ್ ಸಹ ಕಾಂಗ್ರೆಸ್ ಪಕ್ಷವನ್ನೇ ಸೇರಿದ್ದಾರೆ. ಅವರ ತಂದೆ ಎಸ್.ಬಂಗಾರಪ್ಪನವರು ಅದೇ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಚಿವರಾಗಿದ್ದವರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದರು ಆ ಬಳಿಕ ಸಿಎಂ ಸಹ ಆದರು. ಇದೀಗ ಅವರ ಮಕ್ಕಳಾದ ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಅವರುಗಳು ಕಾಂಗ್ರೆಸ್ ಪಕ್ಷದಲ್ಲಿದ್ದರೆ, ಅವರ ಇನ್ನೊಬ್ಬ ಮಗ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರು ಮಧು ಬಂಗಾರಪ್ಪ ಪರವಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ, ಶಿವರಾಜ್ ಕುಮಾರ್ ಸಹ ಮಧು ಬಂಗಾರಪ್ಪ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ