AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Film Chamber: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ವಿಳಂಬ ಆಗಿದ್ದಕ್ಕೆ ಪ್ರತಿಭಟನೆ; ಭಾ.ಮ. ಹರೀಶ್​ ಹೇಳೋದೇನು?

2022ರ ಮೇ ತಿಂಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆದಿತ್ತು. ಭಾ.ಮ. ಹರೀಶ್​ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅಧಿಕಾರದ ಅವಧಿ 2023ರ ಮೇ 28ಕ್ಕೆ ಅಂತ್ಯವಾಗಿದೆ.

Film Chamber: ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ವಿಳಂಬ ಆಗಿದ್ದಕ್ಕೆ ಪ್ರತಿಭಟನೆ; ಭಾ.ಮ. ಹರೀಶ್​ ಹೇಳೋದೇನು?
ವಾಣಿಜ್ಯ ಮಂಡಳಿ, ಭಾ.ಮ. ಹರೀಶ್​
ಮದನ್​ ಕುಮಾರ್​
|

Updated on: Jun 06, 2023 | 4:44 PM

Share

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber of Commerce) ಅಧ್ಯಕ್ಷ ಸ್ಥಾನಕ್ಕೆ ಪ್ರತಿ ಬಾರಿಯೂ ಪೈಪೋಟಿ ಇರುತ್ತದೆ. ಪ್ರಸ್ತುತ ಭಾ.ಮ. ಹರೀಶ್​ ( Bha Ma Harish) ಅವರು ಫಿಲ್ಮ್​ ಚೇಂಬರ್​ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಅಧಿಕಾರ ಅವಧಿ ಮುಗಿದಿದ್ದು, ಚುನಾವಣೆ (Film Chamber Election) ನಡೆಸಬೇಕು ಎಂಬ ಒತ್ತಡ ಶುರುವಾಗಿದೆ. ಈ ಸಂಬಂಧ ವಾಣಿಜ್ಯ ಮಂಡಳಿ ಕಟ್ಟಡದ ಎದುರು ಕೆಲವರು ಪ್ರತಿಭಟನೆ ಮಾಡಿದ್ದಾರೆ. ‘ಕೂಡಲೇ ಚುನಾವಣೆ ನಡೆಯಬೇಕು. ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಆಗಬೇಕು’ ಅಂತ ಒತ್ತಾಯಿಸಿ ಪ್ರತಿಭಟನೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕೆಲವು ನಿರ್ಮಾಪಕರು ಈ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾರೆ.

2022ರ ಮೇ ತಿಂಗಳಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಭಾ.ಮ. ಹರೀಶ್​ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅಧಿಕಾರದ ಅವಧಿ 2023ರ ಮೇ 28ಕ್ಕೆ ಅಂತ್ಯವಾಗಿದೆ. ಹಾಗಿದ್ದರೂ ಕೂಡ ಚುನಾವಣೆ ನಡೆಸಿಲ್ಲ. ಈ ಕುರಿತಂತೆ ಕೆಲವರು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗೆ ಪತ್ರದ ಮೂಲಕ ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳಿಂದ ವಾಣಿಜ್ಯ ಮಂಡಳಿಗೆ ಸೂಚನೆ ಕೂಡ ನೀಡಲಾಗಿದೆ. ನಿಮಯಗಳ ಅನುಸಾರ ಚುನಾವಣೆಯನ್ನು ನಡೆಸಲು ಸೂಚಿಸಲಾಗಿದೆ. ವಾಣಿಜ್ಯ ಮಂಡಳಿ ಎದುರು ನಡೆದ ಪ್ರತಿಭಟನೆಯಲ್ಲಿ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್, ಪ್ರಿಯಾ ಹಾಸನ್, ಎನ್.ಎಂ. ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಭಾ.ಮ. ಹರೀಶ್​ ಪ್ರತಿಕ್ರಿಯೆ ಏನು?

ಈ ಎಲ್ಲ ಘಟನೆಗಳ ಕುರಿತಂತೆ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಚುನಾವಣೆಯ ವಿಚಾರಕ್ಕೆ‌ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ. ಜೂನ್ 12ಕ್ಕೆ ಕೇಸ್ ಏನು ಆಗುತ್ತೆ ಅಂತ ನೋಡಿಕೊಂಡು ಸಭೆ ಕರೆದು ತೀರ್ಮಾನ ಮಾಡುತ್ತೇವೆ. ಕಳೆದ ಬಾರಿ ಎಲೆಕ್ಷನ್ ವಿಚಾರದಲ್ಲೂ ಸಮಸ್ಯೆ ಆಗಿತ್ತು. ಆಡಿಟಿಂಗ್ ಎಲ್ಲಾ‌ ಪೂರ್ಣಗೊಳಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಬಳಿಕ ತೀರ್ಮಾನ ಮಾಡುತ್ತೇವೆ’ ಎಂದು ಭಾ.ಮ. ಹರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: KFCC delegation meets CM: ಸಿದ್ದರಾಮಯ್ಯ ಭೇಟಿಗೆ ಬಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ

ಇತ್ತೀಚೆಗೆ ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘವು ವೇತನ ಹೆಚ್ಚಳ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್ 5ರಿಂದ ಚಿತ್ರೀಕರಣಕ್ಕೆ ಬಹಿಷ್ಕಾರ ಹೇಳಿತ್ತು. ಆದರೆ ಫಿಲಂ ಚೇಂಬರ್ ಹಾಗೂ ನಿರ್ಮಾಪಕರ ಸಂಘವು ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘದೊಟ್ಟಿಗೆ ಮಾತುಕತೆ ನಡೆಸಿದ್ದು ಬೇಡಿಕೆಗಳ ಈಡೇರಿಕೆಗೆ ಹದಿನೈದು ದಿನಗಳ ಗಡುವನ್ನು ಪಡೆದುಕೊಂಡಿವೆ. ಈ ಬಗ್ಗೆ ಇತ್ತೀಚೆಗೆ ಭಾ.ಮ. ಹರೀಶ್ ಮಾತನಾಡಿದ್ದರು. ‘ಶೂಟಿಂಗ್ ಬಂದ್ ಮಾಡುವ ಬಗ್ಗೆ ಕೆಲವರು ಹೇಳಿದ್ದರು. ಆದರೆ ಹಾಗಾಗಲು ಬಿಟ್ಟಿಲ್ಲ. ಅವರನ್ನು ಕಚೇರಿಗೆ ಕರೆಸಿ ಮಾತನಾಡಿದ್ದೇವೆ. ನಮ್ಮ ಕಾರ್ಯದರ್ಶಿಗಳು ಅವರೊಟ್ಟಿಗೆ ಮಾತನಾಡಿಸಿ ಸಂಧಾನ ಮಾಡಿದ್ದಾರೆ. ಎಂದಿನಂತೆ ಸರಾಗವಾಗಿ ಶೂಟಿಂಗ್ ನಡೆಯಲಿದೆ’ ಎಂದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.