ಉತ್ತರ ಕರ್ನಾಟಕದ ‘ಉಡಾಳ’ ಟ್ರೇಲರ್: ಇದು ಪಕ್ಕಾ ಜವಾರಿ ಸಿನಿಮಾ

ಉತ್ತರ ಕರ್ನಾಟದಲ್ಲೇ ಪೂರ್ತಿ ಚಿತ್ರೀಕರಣ ಮಾಡಿರುವ ‘ಉಡಾಳ’ ಸಿನಿಮಾ ನವೆಂಬರ್ 14ಕ್ಕೆ ತೆರೆಕಾಣಲಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಪೃಥ್ವಿ ಶಾಮನೂರು ಮತ್ತು ಹೃತಿಕಾ ಶ್ರೀನಿವಾಸ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಉತ್ತರ ಕರ್ನಾಟಕದ ‘ಉಡಾಳ’ ಟ್ರೇಲರ್: ಇದು ಪಕ್ಕಾ ಜವಾರಿ ಸಿನಿಮಾ
Udaala Movie Trailer Launch Event

Updated on: Nov 09, 2025 | 10:48 AM

ಟ್ರೇಲರ್ ಮೂಲಕ ‘ಉಡಾಳ’ ಸಿನಿಮಾ (Udaala Movie) ಕುತೂಹಲ ಮೂಡಿಸಿದೆ. ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ (Yogaraj Bhat) ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ಅಮೋಲ್ ಪಾಟೀಲ್ ಅವರು ನಿರ್ದೇಶನ ಮಾಡಿದ್ದಾರೆ. ‘ಪದವಿ ಪೂರ್ವ’ ಖ್ಯಾತಿಯ ನಟ ಪೃಥ್ವಿ ಶಾಮನೂರು ಅವರು ಹೀರೋ ಆಗಿ ‘ಉಡಾಳ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ (Udaala Movie Trailer) ಬಿಡುಗಡೆ ಮಾಡಲಾಯಿತು. ನವೀನ್ ಶಂಕರ್ ಮತ್ತು ನಿಶ್ವಿಕಾ ನಾಯ್ಡು ಅವರು ಟ್ರೇಲರ್ ಅನಾವರಣ ಮಾಡಿದರು. ಮಾಜಿ ಸಚಿವರಾದ ಆಂಜನೇಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನವೆಂಬರ್ 14ರಂದು ಈ ಸಿನಿಮಾ ರಿಲೀಸ್ ಆಗಲಿದೆ.

‘ಉಡಾಳ’ ಸಿನಿಮಾ ಟ್ರೇಲರ್ ಬಿಡುಗಡೆ ಬಳಿಕ ಚಿತ್ರತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿರ್ಮಾಪಕ ಯೋಗರಾಜ್ ಭಟ್ ಮಾತನಾಡಿ, ‘ನಗಿಸುವುದು ಅಷ್ಟು ಸುಲಭವಲ್ಲ. ನಗು ಬರುವುದು ಅಷ್ಟು ಸುಲಭವಲ್ಲ. ಆದರೆ ನಿರ್ದೇಶಕ ಅಮೋಲ್ ಪಾಟೀಲ್, ನಾಯಕ ಪೃಥ್ವಿ ಶಾಮನೂರು ಸೇರಿದಂತೆ 20 ಜನ ಕಲಾವಿದರ ತಂಡವನ್ನಿಟ್ಟುಕೊಂಡು ಈ ಸಿನಿಮಾ ಮೂಲಕ ನಗುವಿನ ರಸದೌತಣವನ್ನೇ ಬಡಿಸಿದ್ದಾರೆ. ಪೃಥ್ವಿ ಸ್ವಲ್ಪ ದಿನಗಳಲ್ಲಿ ಸ್ಟಾರ್ ನಟ ಆಗುತ್ತಾನೆ’ ಎಂದರು.

‘ಪದವಿ ಪೂರ್ವ’ ನಂತರ ರವಿ ಶಾಮನೂರು ಮತ್ತು ಯೋಗರಾಜ್ ಭಟ್ ಅವರು ಜೊತೆಗೂಡಿ ನಿರ್ಮಾಣ ಮಾಡುತ್ತಿರುವ 2ನೇ ಸಿನಿಮಾ ಇದು. ‘ನಿರ್ಮಾಪಕನಿಗೆ ಒಂದೊಳ್ಳೆ ತಂಡ ಸಿಗುವುಕ್ಕಿಂತ ಮತ್ತೇನು ಬೇಕು? ನನಗೆ ಅಂತಹ ಒಳ್ಳೆಯ ಟೀಮ್ ಸಿಕ್ಕಿದೆ. ಸಿನಿಮಾ ಕೂಡ ಅಂದುಕೊಂಡ ರೀತಿಯಲ್ಲೇ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದು ನಿರ್ಮಾಪಕ ರವಿ ಶಾಮನೂರು ಅವರು ಹೇಳಿದರು.

‘ಉಡಾಳ’ ಸಿನಿಮಾದ ಟ್ರೇಲರ್

ಇಡೀ ಸಿನಿಮಾದ ಕಥೆ ಬಿಜಾಪುರದಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದ ಲೊಕೇಷನ್​​ಗಳಲ್ಲಿ ಶೂಟಿಂಗ್ ಮಾಡಲಾಗಿದೆ. ‘ಇದುವರೆಗೂ ಉತ್ತರ ಕರ್ನಾಟಕದ ಸೊಗಡನ್ನು ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ ಮಾತ್ರ ಕೆಲವು ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿತ್ತು. ಆದರೆ ನಮ್ಮದು ಫುಲ್ ಮೀಲ್ಸ್ ರೀತಿ ಇರುವ ಉತ್ತರ ಕರ್ನಾಟಕದ ಸಿನಿಮಾ’ ಎಂದು ನಿರ್ದೇಶಕ ಅಮೋಲ್ ಪಾಟೀಲ್ ಹೇಳಿದರು.

ಇದನ್ನೂ ಓದಿ: ನಿರ್ದೇಶಕ ಯೋಗರಾಜ್ ಭಟ್ ಜತೆ ಭುವನ್ ಪೊನ್ನಣ್ಣ ಹೊಸ ಸಿನಿಮಾ ‘ಹಲೋ 123’

ಚೇತನ್ ಡ್ಯಾವಿ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಮಾಡಿದ್ದಾರೆ. ಮಧು ತುಂಬಕೆರೆ ಅವರ ಸಂಕಲನ ಈ ಸಿನಿಮಾಗಿದೆ. ಗಾಯಕಿ ಸೃಷ್ಟಿ ಶಾಮನೂರು, ನಟರಾದ ಬಲ ರಾಜವಾಡಿ, ಬಿರಾದಾರ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಟೀಸರ್ ಮತ್ತು ಹಾಡುಗಳು ಈಗಾಗಲೇ ಗಮನ ಸೆಳೆದಿದೆ. ‘ಹೋದಲ್ಲೆಲ್ಲ ನನ್ನನ್ನು ಉಡಾಳ ಎಂದೇ ಗುರುತಿಸುತ್ತಿದ್ದಾರೆ’ ಎಂದು ನಾಯಕ ನಟ ಪೃಥ್ವಿ ಶಾಮನೂರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.