ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಅಭಿಮಾನಿಗಳು ಹಲವು ರೀತಿಯಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಫಿಟ್ನೆಸ್ ಬಗ್ಗೆ ಅಷ್ಟೆಲ್ಲ ಕಾಳಜಿ ವಹಿಸುತ್ತಿದ್ದ ನಟ ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಅವರ ಅಭಿಮಾನಿಗಳು ಬೇರೆ ಬೇರೆ ಬಗೆಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಶೇಷ ಏನೆಂದರೆ, ಅನೇಕರು ಪುನೀತ್ ರಾಜ್ಕುಮಾರ್ ಅವರ ಭಾವ ಚಿತ್ರವನ್ನು ಹಿಡಿದುಕೊಂಡು ಶಬರಿಮಲೆ ಯಾತ್ರೆ ( Sabarimala Yathra) ಮಾಡುತ್ತಿದ್ದಾರೆ. ಆ ಮೂಲಕ ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಯ್ಯಪ್ಪ ಸ್ವಾಮಿ (Ayyappa Swamy) ಬಳಿ ಬೇಡಿಕೊಳ್ಳುತ್ತಿದ್ದಾರೆ. ಜನರು ತೋರಿಸುವ ಈ ಪರಿ ಅಭಿಮಾನ ಕಂಡಾಗಲೆಲ್ಲ ಪುನೀತ್ ನೆನಪು ಮತ್ತೆ ಮತ್ತೆ ಕಾಡುತ್ತದೆ.
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕೃಷ್ಣಪುರ ಗ್ರಾಮದ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಯಾತ್ರೆಗೆ ತೆರಳಿದ್ದಾರೆ. ಈ ವೇಳೆ ಇರುಮುಡಿಯ ಜತೆ ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ಹಿಡಿದು ಸಾಗಿದ್ದಾರೆ. ಒಟ್ಟು 49 ಮಂದಿ ಅಯ್ಯಪ್ಪ ಭಕ್ತರು ಯಾತ್ರೆಗೆ ತೆರಳಿದ್ದು, ತಾವು ಪ್ರಯಾಣಿಸುವ ಮಿನಿ ಬಸ್ಗೂ ಅಪ್ಪು ಭಾವ ಚಿತ್ರ ಕಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ತಲೆ ಮೇಲೆ ಭಕ್ತಿಭಾವದಿಂದ ಹೊತ್ತುಕೊಂಡು ಪಂಪಾದಿಂದ ಯಾತ್ರೆ ಮಾಡಿದ್ದಾರೆ. 18 ಮೆಟ್ಟಿಲುಗಳನ್ನು ಹತ್ತುವಾಗಲು ಇರುಮುಡಿ ಜೊತೆ ಅಪ್ಪು ಭಾವಚಿತ್ರವನ್ನು ಹಿಡಿದುಕೊಂಡಿದ್ದಾರೆ.
ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು ಅಯ್ಯಪ್ಪ ಸ್ವಾಮಿಯ ಪರಮಭಕ್ತರು. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದಿದೆ. ಪುನೀತ್ ರಾಜ್ಕುಮಾರ್ ಅವರು ಸಹ ಮಾಲೆ ಧರಿಸಿ ಅನೇಕ ಬಾರಿ ಶಬರಿಮಲೆಗೆ ತೆರಳಿದ್ದರು. ಈಗ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋ ತೆಗೆದುಕೊಂಡು ಹೋಗಿ ದೇವರ ದರ್ಶನ ಮಾಡಿಬರುತ್ತಿರುವುದು ವಿಶೇಷ.
ಇದನ್ನೂ ಓದಿ:
‘ನನ್ನ ಉಸಿರು ಇರೋವರೆಗೆ ಪುನೀತ್ ಫೋನ್ ನಂಬರ್ ಡಿಲೀಟ್ ಮಾಡಲ್ಲ’: ಜೋಗಿ ಪ್ರೇಮ್ ಭಾವುಕ ಮಾತು
ಯಾವ ಸ್ಥಿತಿಯಲ್ಲಿದೆ ನೋಡಿ ಡಾ. ರಾಜ್ ಬೆಳೆದ ಮನೆ; ಇದರ ಬಗ್ಗೆ ಪುನೀತ್ ಕಂಡಿದ್ದರು ಕನಸು
Published On - 8:16 am, Mon, 13 December 21