
ನಟ ಪುನೀತ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಪುನೀತ್ ನಿಧನಕ್ಕೆ ನಾಡು ಕಂಬನಿ ಮಿಡಿದಿತ್ತು. ನಿನ್ನೆ (ಅಕ್ಟೋಬರ್ 30) ಅಭಿಮಾನಿಗಳಿಗೆ ದರ್ಶನಕ್ಕೆಂದು ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಖ್ಯಾತ ತಾರೆಯರು, ವಿವಿಧ ರಂಗದ ಗಣ್ಯರು ಸೇರಿದಂತೆ ಅಪಾರ ಅಭಿಮಾನಿ ಬಳಗ ಪುನೀತ್ ದರ್ಶನ ಪಡೆದು ನಮನ ಸಲ್ಲಿಸಿದರು. ಇಂದು (ಭಾನುವಾರ) ಮುಂಜಾನೆ 4ಕ್ಕೆ ಸಾರ್ವಜನಿಕರಿಗೆ ದರ್ಶನವನ್ನು ಅಂತ್ಯಗೊಳಿಸಲಾಯಿತು. ಕೊನೆಯದಾಗಿ ಭದ್ರತಾ ಪಡೆಗಳು ನಟನ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಹಣೆಗೆ ಮುತ್ತಿಟ್ಟು, ಅಂತಿಮ ನಮನ ಸಲ್ಲಿಸಿದರು. ಅಲ್ಲಿಂದ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಕರೆತರಲಾಯಿತು. ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನೆರವೇರಿದವು.
ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ.ಅಶ್ವತ್ಥ್, ಆರ್.ಅಶೋಕ್, ಸುಧಾಕರ್, ಗೋಪಾಲಯ್ಯ, ಮುನಿರತ್ನ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರು ಭಾಗಿಯಾಗಿದ್ದರು. ಸ್ಯಾಂಡಲ್‌ವುಡ್ ನಟರಾದ ರವಿಚಂದ್ರನ್, ಸುದೀಪ್, ಯಶ್, ಜಗ್ಗೇಶ್, ದುನಿಯಾ ವಿಜಯ್, ಉಪೇಂದ್ರ, ಗಣೇಶ್, ಸಾಧು ಕೋಕಿಲ, ನಟಿಯರಾದ ಉಮಾಶ್ರೀ, ಶ್ರುತಿ, ತಾರಾ, ರಚಿತಾ ರಾಮ್, ಸುಧಾರಾಣಿ, ರಶ್ಮಿಕಾ ಮಂದಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿ ಹಲವರು ಭಾಗಿಯಾಗಿ ಪುನೀತ್ಗೆ ಅಂತಿಮ ನಮನ ಸಲ್ಲಿಸಿದ್ದಾರೆ.
‘‘ಎಲ್ಲರ ಸಹಕಾರದಿಂದ ಅಂತ್ಯಕ್ರಿಯೆ ಶಾಂತಿಯುತವಾಗಿ ನೆರವೇರಿದೆ. ಸರ್ಕಾರ, ಅಭಿಮಾನಿಗಳು ಸೇರಿ ಎಲ್ಲರಿಗೂ ಧನ್ಯವಾದಗಳು. ಪುನೀತ್ ಇಲ್ಲದ ಕೊರಗು ಕೊನೆಯವರೆಗೂ ಇರುತ್ತದೆ. ಮಂಗಳವಾರ ಹಾಲು-ತುಪ್ಪ ಕಾರ್ಯ ನೆರವೇರಿಸುತ್ತೇವೆ’’ ಎಂದು ರಾಘವೇಂದ್ರ ರಾಜ್‌ಕುಮಾರ್ ನುಡಿದಿದ್ದಾರೆ. ಶಿವರಾಜ್ ಕುಮಾರ್ ಕೂಡ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದು,‘‘ಸರ್ಕಾರ ಉತ್ತಮವಾದ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು. ಅಚ್ಚುಕಟ್ಟಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು’’ ಎಂದಿದ್ದಾರೆ. ಅಪ್ಪು ಅಭಿಮಾನಿಗಳ ಆತ್ಮಹತ್ಯೆ ವಿಚಾರಕ್ಕೆ ಶಿವಣ್ಣ, ದಯವಿಟ್ಟು ಆ ರೀತಿ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಪ್ಪು ಇದ್ದಿದ್ದರೆ ಇದನ್ನು ಇಷ್ಟಪಡುತ್ತಿರಲಿಲ್ಲ. ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ನಿಮ್ಮ ಸಹಾಯ ನಿಮ್ಮ ಕುಟುಂಬಕ್ಕೆ ಬೇಕಾಗಿದೆ. ನೋವನ್ನು ನುಂಗಿ ಬದುಕಬೇಕು. ನಾವು ಸಹಾ ಅದನ್ನೇ ಮಾಡುತ್ತಿದ್ದೇವೆ. ಕುಟುಂಬದ ಜೊತೆ ಇರಬೇಕಾದದ್ದು ನಮ್ಮ ಜವಾಬ್ದಾರಿ. ಬೇರೆ ರೀತಿ ಕೋಪ ತೋರಿಸಬೇಡಿ. ಅಪ್ಪು ಅಪ್ಪಾಜಿ ಸಹಾ ಇದನ್ನೇ ಹೇಳುತ್ತಿದ್ದರು. ಏನೇ ಆದರೂ ಜೀವನ ನಡೆಯಬೇಕು. ಶೋ ಮಸ್ಟ್ ಗೋ ಆನ್’’ ಎಂದು ಶಿವರಾಜ್ ಕುಮಾರ್ ಸದಾಶಿವನಗರ ನಿವಾಸದ ಬಳಿ ನುಡಿದಿದ್ದಾರೆ.
ತಂದೆ ರಾಜ್‌ಕುಮಾರ್ ಹಾದಿಯಲ್ಲೇ ಸಾಗಿದ ಪುನೀತ್ ರಾಜ್‌ಕುಮಾರ್, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಪುನೀತ್ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಅಳವಡಿಸಲಾಗಿದೆ. ನಿನ್ನೆ ಒಬ್ಬರಿಗೆ ಆಪರೇಷನ್ ಮಾಡಲಾಗಿದ್ದು, ಇಂದು ಮತ್ತೊಬ್ಬರಿಗೆ ಆಪರೇಷನ್ ಮಾಡಿದ್ದಾರೆ. ಈ ಕುರಿತು ನಾರಾಯಣ ನೇತ್ರಾಲಯ ವೈದ್ಯರು ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ತಂದೆ ರಾಜ್‌ಕುಮಾರ್ ಹಾದಿಯಲ್ಲೇ ಸಾಗಿದ ಪುನೀತ್ ರಾಜ್‌ಕುಮಾರ್, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಪುನೀತ್ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಅಳವಡಿಸಲಾಗಿದೆ. ನಿನ್ನೆ ಒಬ್ಬರಿಗೆ ಆಪರೇಷನ್ ಮಾಡಲಾಗಿದ್ದು, ಇಂದು ಮತ್ತೊಬ್ಬರಿಗೆ ಆಪರೇಷನ್ ಮಾಡಿದ್ದಾರೆ. ಈ ಕುರಿತು ನಾರಾಯಣ ನೇತ್ರಾಲಯ ವೈದ್ಯರು ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಕ್ರಿಯೆ ನಡೆದಿರುವ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಸುತ್ತಮುತ್ತ 11 ದಿನ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಭದ್ರತೆಗಾಗಿ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಗುಂಪು ಸೇರದಂತೆ ಜನರನ್ನು ಪೊಲೀಸರು ಕಳುಹಿಸುತ್ತಿದ್ದು, ಬೆಂಗಳೂರಿನ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪುನೀತ್ ನಿಧನದಿಂದ ಮುಳ್ಳಯ್ಯನಗಿರಿ ಪ್ರದೇಶದ ಅತ್ತಿಗುಂಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಅತ್ತಿಗುಂಡಿ ಗ್ರಾಮದಲ್ಲಿ ಬೆಟ್ಟದ ಹೂವು ಸಿನಿಮಾ ಚಿತ್ರೀಕರಣವಾಗಿತ್ತು. ಆ ಚಿತ್ರಕ್ಕೆ ಪುನೀತ್ಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಕಳೆದ ಎರಡು ವರ್ಷದ ಹಿಂದೆ ಅತ್ತಿಗುಂಡಿ ಗ್ರಾಮಕ್ಕೆ ಪುನೀತ್ ಭೇಟಿ ನೀಡಿದ್ದರು. ಜನರ ಜೊತೆ ಬೆರತು ಬೆಟ್ಟದ ಹೂವು ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದರು. ಈ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದರು. ಬೆಟ್ಟದ ಹೂವು ಚಿತ್ರದ ಶೂಟಿಂಗ್ ನಮಗೆ ಇನ್ನೂ ನೆನಪಿದೆ. ನಾವು ಕೂಡ ಪುನೀತ್ ಜೊತೆ ಚಿತ್ರದಲ್ಲಿ ನಟಿಸಿದ್ವಿ, ಆಟವಾಡಿದ್ದೀವಿ ಎಂದು ಟಿವಿ9ಗೆ ಮೊಹಿದ್ದೀನ್, ದ್ರಾಕ್ಷಾಯಿಣಿ ಹಳೆಯ ನೆನಪನ್ನು ಬಿಚ್ಚಿಟ್ಟಿದ್ದಾರೆ.
ತಮಿಳುನಾಡು ಸೇರಿದಂತೆ ಹಲವು ಕಡೆಯಿಂದ ಪುನೀತ್ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ದರ್ಶನಕ್ಕೆ ಆಗಮಿಸಿದ್ದಾರೆ. ಆದರೆ ಒಳಗೆ ಪ್ರವೇಶವಿಲ್ಲ ಎಂದ ಪೊಲೀಸರು ಎಲ್ಲರನ್ನೂ ಕಳುಹಿಸುತ್ತಿದ್ದಾರೆ. ಸದ್ಯ ಅವಕಾಶ ಇಲ್ಲದ ಹಿನ್ನಲೆ ಮತ್ತೆ ಅವಕಾಶ ಕೊಟ್ಟಾಗ ಬರೋದಾಗಿ ಅಭಿಮಾನಿಗಳು ಹೊರಟಿದ್ದಾರೆ.
ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು, ವೀಣೆ ಅಲುಗಾಡಿದ್ದಕ್ಕೂ, ಅವರ ಸಾವಿಗೂ ಸಂಬಂಧವಿಲ್ಲ. ಅದು ಆಕಸ್ಮಿಕವಾಗಿ ಆಗಿರುವ ಘಟನೆ ಎಂದು ಟಿವಿ9 ಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಹೇಳಿಕೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮಂತ್ರಾಲಯದ ರಾಯರ ಪರಮ ಭಕ್ತರಾಗಿದ್ದರು. ಅಣ್ಣ ತಮ್ಮಂದಿರು ಬಂದು ಸಂಗೀತ ಸೇವೆ ಮಾಡೋದಾಗಿ ಹೇಳಿದ್ದರು. ಅವರು ರಾಯರ ಅನುಗ್ರಹದಿಂದಲೇ ಜನಿಸಿದ್ದಾರೆ ಎಂದು ಅವರ ತಂದೆ ಹೇಳಿದ್ದರು. ತಮ್ಮ ನೆಚ್ಚಿನ ಗುರುಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಾಗ ಹಾಡು ಹಾಡಿದ್ದರು. ಯಾರೂ ಕೂಡಾ ಅನ್ಯತಾ ಭಾವಿಸವಾರದು, ಇದೊಂದು ಕಾಕತಾಳೀಯ, ಸಾವಿಗೆ ಇದಕ್ಕೂ ಸಂಬಂಧ ಇಲ್ಲ ಎಂದು ಶ್ರೀಗಳು ನುಡಿದಿದ್ದಾರೆ.
ಪುನೀತ್ ಅಂತಿಮ ದರ್ಶನ, ಅಂತ್ಯಕ್ರಿಯೆಯನ್ನು ಸಣ್ಣ ಪ್ರಮಾದವೂ ಆಗದಂತೆ ಪೊಲೀಸರು, ಕಂದಾಯ ಇಲಾಖೆಯ ಅಧಿಕಾರಿಗಳು, ಬಿಬಿಎಂಪಿಯವರು ಶ್ರದ್ಧಾಪೂರ್ವಕವಾಗಿ ನಿರ್ವಹಿಸಿದ್ದಾರೆ. ಸಹಕಾರ ಕೊಟ್ಟಿರುವ ಎಲ್ಲರಿಗೂ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದಿದ್ದಾರೆ. ಡಾ.ರಾಜ್ ಕುಟುಂಬಸ್ಥರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ.
ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಕುಟುಂಬದವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಕರುನಾಡಿನ ಜನರು ಶಾಂತಿಯುತವಾಗಿ ಸಹಕರಿಸಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯ ಉತ್ತಮವಾಗಿ ನಿಭಾಯಿಸಿದ್ದಾರೆ. ಅದಕ್ಕೆ ಶಿವರಾಜ್‌ಕುಮಾರ್ ಧನ್ಯವಾದಗಳನ್ನು ಹೇಳಿದ್ದಾರೆ. ಇದು ಅವರ ಹಾಗೂ ದೊಡ್ಮನೆ ದೊಡ್ಡಗುಣ ತೋರಿಸುತ್ತದೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಟ ಪುನೀತ್ ರಾಜಕುಮಾರ್ಗೆ ನಾಡಿನಾದ್ಯಂತ ಶ್ರದ್ಧಾಂಜಲಿ ಕೋರಲಾಗುತ್ತಿದೆ. ಚಿತ್ರದುರ್ಗದ ರಾಜಬೀದಿಯಲ್ಲಿ ಪುನೀತ್ ಭಾವಚಿತ್ರ ಮೆರವಣಿಗೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ರಾಯಚೂರು ಹಾಗೂ ಕೊಪ್ಪಳದ ಗಂಗಾವತಿಯಲ್ಲಿ ಸಸಿ ನೆಟ್ಟು ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮೈಸೂರಿನ ಶಕ್ತಿಧಾಮದಲ್ಲಿ ಮಕ್ಕಳು ಬೊಂಬೆ ಹೇಳುತೈತೆ ಹಾಡನ್ನ ಹೇಳಿ ಗಾನ ನಮನ ಸಲ್ಲಿಸಿದ್ದಾರೆ. ಧಾರವಾಡದಲ್ಲಿ ಕಲಾವಿದ ಮಂಜುನಾಥ ಹಿರೇಮಠ ಅವರು ತಯಾರಿಸಿದ ಪುನೀತ್ ಮಣ್ಣಿನ ಪ್ರತಿಮೆಗೆ, ವಿದ್ಯಾರ್ಥಿಗಳು, ಕಲಾವಿದರು, ಕನ್ನಡ ಹೋರಾಟಗಾರರು, ವಿವಿಧ ನಾಗರಿಕರು ನಮನ ಸಲ್ಲಿಸಿದ್ದಾರೆ. ವಿಜಯಪುರ, ಕೋಲಾರ ಸೇರಿದಂತೆ ರಾಜ್ಯಾದ್ಯಂತ ಶ್ರದ್ಧಾಂಜಲಿ ಕೋರಲಾಗಿದೆ.
ಸಾಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿರುವ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಜಲಿ ಸಲ್ಲಿಸಲಾಗಿದೆ. ದೇವಸ್ಥಾನದ ಧರ್ಮದರ್ಶಿ ರಾಮಪ್ಪರಿಂದ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ದೇವಿಗೆ ಪ್ರಾರ್ಥಿಸಲಾಗಿದೆ.
ಪುನೀತ್ ಹಠಾತ್ ನಿಧನದಿಂದ ಮತ್ತೊಬ್ಬ ಅಭಿಮಾನಿ ಸಾವಿಗೀಡಾಗಿದ್ದಾರೆ. ಮಂಡ್ಯ ತಾಲೂಕಿನ ಕೆರಗೋಡಿನ ಕೆ.ಎಂ.ರಾಜೇಶ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪುನೀತ್ ನಿಧನದ ಬಳಿಕ ಸರಿಯಾಗಿ ಊಟ ಸೇವಿಸದೆ ಅಸ್ವಸ್ಥರಾಗಿದ್ದರು. ನಿನ್ನೆ ಅಂತಿಮ ದರ್ಶನಕ್ಕೆ ಹೋಗುವುದಾಗಿ ಮನೆ ಬಿಟ್ಟಿದ್ದರು. ಆದರೆ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ಬಳಿ ಸುಸ್ತಾಗಿ ಬಿದ್ದಿದ್ದರು. ಪರಿಚಯಸ್ಥರು ನೋಡಿ ಮನೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕುಟುಂಬಸ್ಥರು ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಿದ್ದರು. ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಅವರು ಮೃತಪಟ್ಟಿದ್ದಾರೆ.
ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದ ರಾಜೇಶ್, ರಾಜ್‌ಕುಮಾರ್ ಹೆಸರಿನ ಹೋಟೆಲ್ ನಡೆಸುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಈವರೆಗೆ ಇಬ್ಬರು ಅಭಿಮಾನಿಗಳು ಸಾವಿಗೀಡಾಗಿದ್ದಾರೆ. ನಿನ್ನೆ ಯಲಾದಹಳ್ಳಿ ನಿವಾಸಿ ವೈ.ಎಸ್.ಸುರೇಶ್ ಮೃತಪಟ್ಟಿದ್ದರು.
ಅಪ್ಪು ಅಭಿಮಾನಿಗಳ ಆತ್ಮಹತ್ಯೆ ವಿಚಾರಕ್ಕೆ ಶಿವಣ್ಣ, ದಯವಿಟ್ಟು ಆ ರೀತಿ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಪ್ಪು ಇದ್ದಿದ್ದರೆ ಇದನ್ನು ಇಷ್ಟಪಡುತ್ತಿರಲಿಲ್ಲ. ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ನಿಮ್ಮ ಸಹಾಯ ನಿಮ್ಮ ಕುಟುಂಬಕ್ಕೆ ಬೇಕಾಗಿದೆ. ಖಂಡಿತಾ ನೋವಾಗುತ್ತದೆ, ಆದರೆ ಆ ನೋವನ್ನು ನುಂಗಿ ಬದುಕಬೇಕು. ನಾವು ಸಹಾ ಅದನ್ನೇ ಮಾಡುತ್ತಿದ್ದೇವೆ. ಕುಟುಂಬದ ಜೊತೆ ಇರಬೇಕಾದದ್ದು ನಮ್ಮ ಜವಾಬ್ದಾರಿ. ಬೇರೆ ರೀತಿ ಕೋಪ ತೋರಿಸಬೇಡಿ. ಅಪ್ಪು ಅಪ್ಪಾಜಿ ಸಹಾ ಇದನ್ನೇ ಹೇಳುತ್ತಿದ್ದರು. ಏನೇ ಆದರೂ ಜೀವನ ನಡೆಯಬೇಕು. ಶೋ ಮಸ್ಟ್ ಗೋ ಆನ್’’ ಎಂದು ಶಿವರಾಜ್ ಕುಮಾರ್ ಸದಾಶಿವನಗರ ನಿವಾಸದ ಬಳಿ ನುಡಿದಿದ್ದಾರೆ.
ಸ್ಥಳಕ್ಕೆ ನಿರ್ಬಂಧವಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ‘‘ಹಾಲು ತುಪ್ಪ ಆಗುವವರೆಗೂ ಬಿಡಲು ಸಾಧ್ಯವಿಲ್ಲ. ಹಾಲು ತುಪ್ಪ ಆದ ಮೇಲೆ ಸಿಎಂ ಬೊಮ್ಮಾಯಿ ಅವರ ಜೊತೆ ಮಾತನಾಡುತ್ತೇವೆ. ಐದು ದಿನ ಅಲ್ಲ ಬೇಗನೆ ಅವಕಾಶ ಮಾಡಿಕೊಡುತ್ತೇವೆ. ಅಪ್ಪು ನಿಮ್ಮವನು ನೀವು ನೋಡದೆ ಇನ್ನು ಯಾರು ನೋಡುತ್ತಾರೆ. ಈ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟೋಕೆ ಆಗುವುದಿಲ್ಲ. ಇದಕ್ಕೆ ನಾವು ಚಿರಋಣಿಗಳು. ಅಪ್ಪು ನನ್ನಲ್ಲಿ ಇದ್ದಾನೆ ರಾಘುವಿನಲ್ಲಿದ್ದಾನೆ, ಚಿತ್ರರಂಗದಲ್ಲಿದ್ದಾನೆ, ನಿರ್ಮಾಪಕರು ಪ್ರತಿಯೊಬ್ಬರಲ್ಲಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ (ಅಭಿಮಾನಿಗಳು) ಹೃದಯದಲ್ಲಿ ಇದ್ದಾನೆ. ನೀವು ಯಾವತ್ತು ಅವನನ್ನು ಮರೆಯುವುದಿಲ್ಲ’’ ಎಂದಿದ್ದಾರೆ.
ಏನೇ ಆದರೂ ಮುಂದಿನ ಜೀವನ ಸಾಗಬೇಕು ಎಂದು ಶಿವಣ್ಣ ನುಡಿದಿದ್ದಾರೆ. ‘‘ಜೀವನ ಸಾಗಬೇಕು, ಫ್ಯಾಮಿಲಿ ಇದೆ. ನಾವು ಅವರ ಜೊತೆ ಇದ್ದೇವೆ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಅಪ್ಪು ಆಸೆ ಆಕಾಂಕ್ಷೆ ನೆರವೇರಿಸಲು ಪ್ರಯತ್ನಿಸುತ್ತೇವೆ’’ ಎಂದು ನುಡಿದಿದ್ದಾರೆ. ಸರ್ಕಾರದ ವ್ಯವ್ಥಸ್ಥೆಗೆ ಕೃತಜ್ಞತೆ ಸೂಚಿಸಿದ ಶಿವಣ್ಣ, ‘‘ ವ್ಯವಸ್ಥಿತವಾಗಿ ಅಂತಿಮದರ್ಶನ ಹಾಗೂ ಅಂತ್ಯಕ್ರಿಯೆಗೆ ಸಹಕರಿಸಿದ ಸರ್ಕಾರ, ಪೊಲೀಸರು, ಅಧಿಕಾರಿಗಳಿಗೆ ಕೃತಜ್ಞತೆಗಳು. ತುಂಬಾ ಚೆನ್ನಾಗಿ ಯಾರಿಗೂ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಿದರು. ಬೊಮ್ಮಾಯಿ ಅವರಿಗೆ ವಿಶೇಷ ಧನ್ಯವಾದಗಳು. ನಮ್ಮ ಕುಟುಂಬದ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸವಿಟ್ಟಿದ್ದೀರಾ. ಅಪ್ಪಾಜಿದು ಅಂತ್ಯಕ್ರಿಯೆ ತುಂಬಾ ಕಷ್ಟ ಆಗಿತ್ತು. ಈ ವಿಚಾರವಾಗಿ ಇಡೀ ಸರ್ಕಾರಕ್ಕೆ ಧನ್ಯವಾದಗಳು’’ ಎಂದಿದ್ದಾರೆ.
ಸದಾ ಶಿವನಗರದ ನಿವಾಸದ ಬಳಿ ಡಾ.ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದು, ಪುನೀತ್ ನಿಧನದಿಂದ ಉಂಟಾಗಿರುವ ದುಃಖವನ್ನು ಹಂಚಿಕೊಂಡಿದ್ದಾರೆ. ‘‘ಅಪ್ಪು ಇಲ್ಲ ಎನ್ನುವುದಕ್ಕೆ ತುಂಬಾ ಕಷ್ಟ ಆಗುತ್ತದೆ. ಆತ ವಯಸ್ಸಿನಲ್ಲಿ ಚಿಕ್ಕವನು, ವಯಸ್ಸು ಕಡಿಮೆ. ಅಷ್ಟು ಬೇಗ ಭಗವಂತನಿಗೆ ಇಷ್ಟ ಆಗಿ ಬಿಟ್ಟ. ಆದರೆ ಇದು ನಮಗೆ ನೋವು ಕೊಡುತ್ತೆ. ಅಭಿಮಾನಿ ದೇವರುಗಳಿಗೆ ನೋವು ಕೊಡುತ್ತೆ. ಫ್ಯಾಮಿಲಿಗಳು ಮಕ್ಕಳ ಜೊತೆ ಬಂದಾಗ ಅವರ ದುಖಃ ನೋಡಿ ನಮಗೆ ನೋವಾಯ್ತು. ಅವಸರವಾಗಿ ಕರೆದುಕೊಂಡು ಬಿಟ್ಟ ಅದನ್ನು ಅರಗಿಸಿಕೊಳ್ಳೋದು ಕಷ್ಟ. ಊರಿಗೆ ಹೋಗಿದ್ದಾನೆ ಬರಬಹುದು ಅನಿಸುತ್ತೆ. ನಾನು ಅವನಿಗಿಂತ 13 ವರ್ಷ ದೊಡ್ಡವನು. ನನ್ನ ಮಗುವನ್ನು ಕಳೆದುಕೊಂಡಂತೆ ಆಗುತ್ತಿದೆ’’ ಎಂದು ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದು, ‘‘ಅತ್ಯಂತ ಶಿಸ್ತು ಬದ್ಧವಾಗಿ, ಎಷ್ಟೇ ಕಷ್ಟಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ಕರ್ತವ್ಯ ನಿರ್ವಹಿಸಿದ ಪೊಲೀಸ್, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ’’ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಟ ಪುನೀತ್ ನಿಧನ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಮೇಣದ ಬತ್ತಿ ದೀಪ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತುಮಕೂರು ಜಿಲ್ಲಾದ್ಯಂತ ಅಭಿಮಾನಿಗಳಿಂದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದು, ತಾಲೂಕಿನ ಬೆಳಧರ ಗ್ರಾಮದ ಅಭಿಮಾನಿಗಳಿಂದ ಪುನೀತ್ ಕಟೌಟ್ಗೆ ಪೂಜೆ ಸಲ್ಲಿಸಿ ಹಾರ ಹಾಕಿ ಶ್ರದ್ಧಾಂಜಲಿ ಕೋರಲಾಗಿದೆ.
ಸರ್ಕಾರ ಉತ್ತಮವಾದ ಸಹಕಾರ ನೀಡಿದ್ದಕ್ಕೆ ಧನ್ಯವಾದಗಳು. ಅಚ್ಚುಕಟ್ಟಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಾಲು-ತುಪ್ಪ ಕಾರ್ಯ ಮುಗಿಯುವವರೆಗೆ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋಗೆ ಪ್ರವೇಶವಿಲ್ಲ. ಆದಷ್ಟು ಬೇಗ ಸಾರ್ವಜನಿಕರಿಗೆ ಅವಕಾಶ ನೀಡುತ್ತೇವೆ. ಅಪ್ಪು ನೋಡುವುದಕ್ಕೆ ನಿಮಗೆ ಅವಕಾಶ ಮಾಡಿಕೊಡ್ತೇವೆ. ಅಪ್ಪು ಎಲ್ಲರ ಮನದಲ್ಲಿಯೂ ಇರುತ್ತಾನೆ ಎಂದು ಶಿವರಾಜ್ ಕುಮಾರ್ ನುಡಿದಿದ್ದಾರೆ.
ಪುನೀತ್ ಅಂತ್ಯಕ್ರಿಯೆ ಮುಗಿಸಿ ಕುಟುಂಬಸ್ಥರು ಮನೆಗೆ ವಾಪಾಸ್ಸಾಗಿದ್ದಾರೆ. ಶಿವಕುಮಾರ್ ದಂಪತಿ, ಪುನೀತ್ ಪತ್ನಿ ಅಶ್ವಿನಿ ಹಾಗೂ ಮಕ್ಕಳು, ವಿಜಯ ರಾಘವೇಂದ್ರ, ರಾಕ್ ಲೈನ್ ವೆಂಕಟೇಶ್ ಮನೆಗೆ ಮರಳಿದ್ದಾರೆ.
ಬಾಯಿಯಿಂದ ಪುನೀತ್ ಚಿತ್ರ ಬಿಡಿಸಿ ದಾವಣಗೆರೆ ಜಿಲ್ಲೆಯ ಹರಿಹರದ ಕಲಾವಿದ ಜಯಕುಮಾರ ಅವರು ಪುನೀತ್ಗೆ ನಮನ ಸಲ್ಲಿಸಿದ್ದಾರೆ. ಹತ್ತಾರು ಪುನೀತ್ ಅಭಿಮಾನಿಗಳಿಗೆ ಅವರು ಟ್ಯಾಟೋ ಹಾಕುತ್ತಿದ್ದಾರೆ. ಪುನೀತ್ ಭಾವಚಿತ್ರವನ್ನು ಅಭಿಮಾನಿಗಳು ಎದೆಯ ಮೇಲೆ ಬರೆಯಿಸಿಕೊಳ್ಳುತ್ತಿದ್ದಾರೆ. ಅವರು ಬಾಯಿಯಲ್ಲಿ ಕುಂಚ ಹಿಡಿದು ಪುನೀತ್ ಚಿತ್ರವನ್ನೂ ಬಿಡಿಸಿದ್ದಾರೆ.
ಎಲ್ಲರ ಸಹಕಾರದಿಂದ ಅಂತ್ಯಕ್ರಿಯೆ ಶಾಂತಿಯುತವಾಗಿ ನೆರವೇರಿದೆ. ಸರ್ಕಾರ, ಅಭಿಮಾನಿಗಳು ಸೇರಿ ಎಲ್ಲರಿಗೂ ಧನ್ಯವಾದಗಳು. ಪುನೀತ್ ಇಲ್ಲದ ಕೊರಗು ಕೊನೆಯವರೆಗೂ ಇರುತ್ತದೆ. ಮಂಗಳವಾರ ಹಾಲು-ತುಪ್ಪ ಕಾರ್ಯ ನೆರವೇರಿಸುತ್ತೇವೆ ಎಂದು ರಾಘವೇಂದ್ರ ರಾಜ್‌ಕುಮಾರ್ ನುಡಿದಿದ್ದಾರೆ.
ಕಂಠೀರವ ಸ್ಟುಡಿಯೋ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಕಂಠೀರವ ಸ್ಟುಡಿಯೋ ಒಳಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಐದು ದಿನದ ನಂತರ ಕುಟುಂಬಸ್ಥರಿಂದ ಹಾಲು-ತುಪ್ಪ ಬಿಡುವ ಕಾರ್ಯ ನೆರವೇರಲಿದೆ. ಇಂದು ಪೂಜೆ ನಡೆಯಲಿದೆ.
ಪುನೀತ್‌ರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಹೀಗಾಗಿ ಪುನೀತ್ ಅಂತ್ಯಕ್ರಿಯೆ ವೇಳೆ ಭಾವುಕನಾದೆ ಎಂದು ಅಂತ್ಯಕ್ರಿಯೆಯ ನಂತರ ಸಿಎಂ ಬೊಮ್ಮಾಯಿ ಭಾವುಕರಾಗಿದ್ದಾರೆ.
ಪುನೀತ್ ಅಂತಿಮ ದರ್ಶನ, ಮೆರವಣಿಗೆಗೆ ಸರ್ಕಾರ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು. ನಗರದಲ್ಲಿ ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. 2 ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ನಮನ ಸಲ್ಲಿಸಿದರು.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪೊಲೀಸ್ ಸಿಬ್ಬಂದಿಯನ್ನು ಪ್ರಶಂಸಿಸಿದ್ದಾರೆ. ಹಗಲು-ರಾತ್ರಿ ಎನ್ನದೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ನಟ ಪುನೀತ್ ಅಂತಿಮ ದರ್ಶನ, ಅಂತಿಮ ಯಾತ್ರೆ, ಅಂತ್ಯಕ್ರಿಯೆಯ ವೇಳೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕರ್ತವ್ಯ ನಿರ್ವಹಿಸಿದ್ದರು. ಪೊಲೀಸರ ಕರ್ತವ್ಯ ಮೆಚ್ಚಿ ಪಂತ್ ಧನ್ಯವಾದ ತಿಳಿಸಿದ್ದಾರೆ. ಸಿಬ್ಬಂದಿಯ ಕೈ ಕುಲುಕಿ ಅವರು ಪ್ರಶಂಸಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನೆರವೇರಿದೆ. ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಡಾ.ಅಶ್ವತ್ಥ್, ಆರ್.ಅಶೋಕ್, ಸುಧಾಕರ್, ಗೋಪಾಲಯ್ಯ, ಮುನಿರತ್ನ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರು ಭಾಗಿಯಾಗಿದ್ದರು. ಸ್ಯಾಂಡಲ್‌ವುಡ್ ನಟರಾದ ರವಿಚಂದ್ರನ್, ಸುದೀಪ್, ಯಶ್, ಜಗ್ಗೇಶ್, ದುನಿಯಾ ವಿಜಯ್, ಉಪೇಂದ್ರ, ಗಣೇಶ್, ಸಾಧು ಕೋಕಿಲ, ನಟಿಯರಾದ ಉಮಾಶ್ರೀ, ಶ್ರುತಿ, ತಾರಾ, ರಚಿತಾ ರಾಮ್, ಸುಧಾರಾಣಿ, ರಶ್ಮಿಕಾ ಮಂದಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿ ಹಲವರು ಭಾಗಿಯಾಗಿ ಪುನೀತ್ಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅಂತ್ಯಕ್ರಿಯೆ ನೆರವೇರಿದೆ. ನಟ ಪುನೀತ್ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ, ವಂದನಾ, ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್, ಶಿವಣ್ಣ, ಡಾ.ರಾಜ್‌ಕುಮಾರ್ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಮನೆ ಬಳಿ ಹೈ ಸೆಕ್ಯೂರಿಟಿ ಏರ್ಪಡಿಸಲಾಗಿದೆ. ಅಂತ್ಯಸಂಸ್ಕಾರ ಮುಗಿಸಿ ಕುಟುಂಬಸ್ಥರು ಮನೆ ಕಡೆ ಬರುವ ಸಾಧ್ಯತೆ ಇರುವುದರಿಂದ ಸದಾಶಿವನಗರದ ಮನೆಯ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಮನೆಯ ಹತ್ತಿರಕ್ಕೆ ಅಭಿಮಾನಿಗಳನ್ನು ನಿರ್ಬಂಧಿಸಲಾಗಿದೆ.
ಸರ್ಕಾರದ ವತಿಯಿಂದ ವಿಧಿವಿಧಾನಗಳು ಮುಕ್ತಾಯವಾಗಿದ್ದು, ಈಗ ಕುಟುಂಬಸ್ಥರಿಂದ ಅಂತ್ಯಕ್ರಿಯೆ ಪ್ರಕ್ರಿಯೆ ನಡೆಯುತ್ತಿದೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕೆಲ ಹೊತ್ತಿನಲ್ಲೇ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಡೆಯಲಿದ್ದು, ಕುಶಾಲತೋಪು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ.
ಮೈಸೂರು: ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಮೈಸೂರಿನ ಮದುವೆ ಮಂಟಪವೊಂದರಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮೈಸೂರಿನ ಕನಕ ಭವನದಲ್ಲಿ ಮನುಕಿರಣ್ ಮತ್ತು ಲಾವಣ್ಯ ಎಂಬುವವರ ಮದುವೆಯ ಸಂದರ್ಭದಲ್ಲಿ ಮದುಮಕ್ಕಳು ಹಾಗೂ ಮದುವೆಗೆ ಬಂದ ಅತಿಥಿಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.
ಡಾ.ರಾಜ್ ಸಮಾಧಿಯಿಂದ 125 ಅಡಿ ಅಂತರದಲ್ಲಿ ಹಾಗೂ ಪಾರ್ವತಮ್ಮ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ಅಂತ್ಯಕ್ರಿಯೆ ನಡೆಸಲಾಗುವುದು. ವಿನಯ್ ರಾಜಕುಮಾರ್ ಅಂತ್ಯಕ್ರಿಯೆ ಮಾಡಲಿದ್ದಾರೆ. ಕಂಠೀರವ ಸ್ಟುಡಿಯೋ ಹೊರಗೆ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿದ್ದು, ಅಭಿಮಾನಿಗಳು ಅಂತಿಮ ವಿಧಿವಿಧಾನಗಳನ್ನು ಅದರಲ್ಲಿ ವೀಕ್ಷಿಸುತ್ತಿದ್ದಾರೆ.
ಕಂಠೀರವ ಕ್ರೀಡಾಂಗಣದಿಂದ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯ ಮುಂಖಾಂತರ ಕಂಠೀರವ ಸ್ಟುಡಿಯೋಗೆ ಕರೆತರಲಾಯಿತು. ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಟುಂಬಸ್ಥರು ಮೂರು ಬಿಎಂಟಿಸಿ ವೋಲ್ವೋ ಬಸ್ಗಳ ಮುಖಾಂತರ ಸ್ಟುಡಿಯೋ ತಲುಪಿದರು.
ಇಂದು (ಭಾನುವಾರ) ಮುಂಜಾನೆ 4ಕ್ಕೆ ಸಾರ್ವಜನಿಕರಿಗೆ ದರ್ಶನವನ್ನು ಅಂತ್ಯಗೊಳಿಸಲಾಯಿತು. ಕೊನೆಯದಾಗಿ ಭದ್ರತಾ ಪಡೆಗಳು ನಟನ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಹಣೆಗೆ ಮುತ್ತಿಟ್ಟು, ಅಂತಿಮ ನಮನ ಸಲ್ಲಿಸಿದರು.
Published On - 6:52 am, Sun, 31 October 21