‘ನನ್ನ ಆಟಿಕೆಗಳ ಮೇಲೆ ಪುನೀತ್ಗೆ ಹೆಚ್ಚು ಆಸಕ್ತಿ ತೋರಿಸಿದ್ರು’; ಅಚ್ಚರಿಯ ವಿಚಾರ ಬಿಚ್ಚಿಟ್ಟ ಸುದೀಪ್
ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಭೇಟಿಯಾಗುವಷ್ಟರಲ್ಲೇ ಪುನೀತ್ ಒಬ್ಬ ಸ್ಟಾರ್. ಅಭೂತಪೂರ್ವ ಯಶಸ್ಸನ್ನು ಕಂಡ ‘ಭಾಗ್ಯವಂತ’ ಚಿತ್ರದ ವಿಜಯ ಯಾತ್ರೆಯಲ್ಲಿ ತೊಡಗಿದ್ದರು ಎಂದು ಪುನೀತ್ ಮಾತು ಆರಂಭಿಸಿದರು.
ಪುನೀತ್ ರಾಜ್ಕುಮಾರ್ ಮೃತಪಟ್ಟಿದ್ದು ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್ಕುಮಾರ್ ನಡುವೆ ಒಳ್ಳೆಯ ಒಡನಾಟವಿತ್ತು. ಈ ಬಗ್ಗೆ ಸುದೀಪ್ ತಮ್ಮ ಬರಹದ ಮೂಲಕ ವಿವರಿಸಿದ್ದಾರೆ.
‘ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಭೇಟಿಯಾಗುವಷ್ಟರಲ್ಲೇ ಪುನೀತ್ ಒಬ್ಬ ಸ್ಟಾರ್. ಅಭೂತಪೂರ್ವ ಯಶಸ್ಸನ್ನು ಕಂಡ ‘ಭಾಗ್ಯವಂತ’ ಚಿತ್ರದ ವಿಜಯ ಯಾತ್ರೆಯಲ್ಲಿ ತೊಡಗಿದ್ದರು. ಚಿತ್ರರಂಗಕ್ಕೂ ಹಾಗು ಚಿತ್ರರಂಗದವರಿಗೂ ನನ್ನ ತಂದೆಯೂಂದಿಗೆ ಹತ್ತಿರದ ನಂಟಿದ್ದಿದ್ದರಿಂದ, ಅವರ ಜೊತೆಗಿದ್ದವರೊಂದಿಗೆ ಪುನೀತ್ ಚಿತ್ರಮಂದಿರದ ಭೇಟಿ ಮುಗಿಸಿದ ನಂತರ ನಮ್ಮ ಮನೆಗೆ ಊಟಕ್ಕೆ ಬಂದರು. ನಾವಿಬ್ಬರೂ ಹೆಚ್ಚುಕಮ್ಮಿ ಒಂದೇ ವಯಸ್ಸಿನವರಾಗಿದ್ದರಿಂದ ಕ್ಷಣಮಾತ್ರದಲ್ಲೇ ಸ್ನೇಹಿತರಾದೆವು. ಡೈನಿಂಗ್ ಟೇಬಲ್ ಮೇಲಿದ್ದ ಊಟಕ್ಕಿಂತ ನನ್ನ ಆಟಿಕೆಗಳ ಮೇಲೆ ಅವರು ಹೆಚ್ಚು ಆಸಕ್ತಿ ತೋರಿಸಿದ್ರು. ಅಪ್ಪು ಹಾಗು ನಾನು ಆಟವಾಡುತ್ತಿದ್ದಾಗ, ಅವರ ಜೊತೆಗಿದ್ದ ಹೆಂಗಸು ಒಬ್ಬರು ಅವರಿಗೆ ಊಟ ಮಾಡಿಸಲು ಅವರ ಹಿಂದೆಯೇ ತಟ್ಟೆ ಹಿಡಿದುಕೊಂಡು ಓಡಿ ಬರಿತಿದ್ದದ್ದು ನನಗಿನ್ನೂ ನೆನಪು. ಅವರ ಉತ್ಸಾಹ ನೋಡಿ ನನ್ನಲ್ಲೂ ಇನ್ನಿಲ್ಲದ ಹುರುಪು. ನನ್ನ ಅಕ್ಕಪಕ್ಕದ ಮನೆಯವರು, ಮಕ್ಕಳು ಏಲ್ಲಾ ನಮ್ಮ ಮನೆಯನ್ನು ಸುತ್ತುವರಿದಿದ್ದರು. ಒಳಗಿದ್ದಿದ್ದು ಯಾರೋ ಸಾಮಾನ್ಯ ಬಾಲಕನಲ್ಲ, ಒಂದು ನಕ್ಷತ್ರ. ಮೇಲಾಗಿ ವರನಟ ಡಾ|ರಾಜ್ ಕುಮಾರ್ ಅರವರ ಪುತ್ರ- ಪುನೀತ್’ ಎಂದು ಪತ್ರ ಆರಂಭಿಸಿದ್ದಾರೆ ಸುದೀಪ್.
‘ಅಲ್ಲಿಂದ ಇಲ್ಲಿಯವರೆಗೆ ಆಗಾಗ ನಾವು ಭೇಟಿ ಆಗಿದ್ದೂ ಉಂಟು. ಹಾಗೆ ಒಂದೇ ಚಿತ್ರರಂಗದಲ್ಲಿ ಸ್ನೇಹಿತರಾಗಿ ಮತ್ತೆ ಸಿಕ್ಕಿದ್ದೂ ಉಂಟು. ಆದರೆ ಈಗ ಒಬ್ಬ ಸ್ನೇಹಿತ ಮಾತ್ರ ಅಲ್ಲ, ಅವರು ಪ್ರತಿಸ್ಪರ್ಧಿ ಆಗಿದ್ದೂ ಹೌದು. ಒಬ್ಬ ಅದ್ಭುತ ನಟ, ಒಳ್ಳೆಯ ಡಾನ್ಸರ್, ಫೈಟರ್, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಅಸಮಾನ್ಯ ವ್ಯಕ್ತಿ. ಅವರೊಂದಿಗಿನ ಸ್ಪರ್ಧೆಯನ್ನು ನಾನು ತುಂಬಾ ಆನಂದಿಸಿದ್ದೇನೆ. ನನ್ನನ್ನು ಇನ್ನಷ್ಟು ಉತ್ತಮನಾಗಲು ಅದು ಪ್ರೇರೇಪಿಸಿದೆ. ನಾನು ಅವರ ಸಮಕಾಲೀನ ನಟನಾಗಿದದ್ದು ನನಗೆ ಒಂದು ಹೆಮ್ಮೆ, ಚಿತ್ರರಂಗ ಇಂದು ಬರಿದಾಗಿದೆ’ ಎಂದಿದ್ದಾರೆ ಸುದೀಪ್
‘ಸಮಯ ಕ್ರೂರಿಯಂತೆ ಕಾಣುತ್ತಿದೆ. ಪ್ರಕೃತಿ ಕೂಡ ಶೋಕಾಚರಣೆಯಲ್ಲಿದ್ದಂತಿದೆ. ನಾನು ಬೆಂಗಳೂರಿಗೆ ಬಂದು ಇಳಿದು, ಅವರ ಪಾರ್ತೀವ ಶರೀರ ಇರಿಸಿದ್ದ ಜಾಗಕ್ಕೆ ತೆರಳುತ್ತಿದ್ದಂತೆ ನನ್ನ ಉಸಿರಾಟ ಭಾರವಾಗತೊಡಗಿತು. ನಾನು ಒಪ್ಪಿಕೊಳ್ಳಲಾಗದ ಸತ್ಯಕ್ಕೆ ಹತ್ತಿರವಾಗುತ್ತಿರುವ ಆತಂಕ. ಅವರು ಚಿರನಿದ್ರೆಯಲ್ಲಿರುವುದನ್ನು ನೋಡಿ ಎದೆಯ ಮೇಲೆ ಬಂಡೆಯನ್ನಿಟ್ಟಂತ ಅನುಭವ. ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳು, ಯೋಚನೆಗಳು…ಹೇಗೆ?…ಯಾಕೆ…?? ಮೊಟ್ಟಮೊದಲ ಬಾರಿಗೆ ಉಸಿರಾಟವೇ ಕಷ್ಟವಾಯಿತು. ಒಬ್ಬ ಸಹೋದ್ಯೋಗಿ, ಒಬ್ಬ ಸ್ನೇಹಿತ ಹೀಗೆ ಶಾಂತವಾಗಿ ಮಲಗಿರುವುದನ್ನು ಹೆಚ್ಚು ಹೊತ್ತು ನೋಡಲಾಗಲ್ಲಿಲ್ಲ. ಆ ದೃಶ್ಯ ಈಗಲೂ ನನ್ನನ್ನು ಕಾಡುತ್ತಿದೆ’ ಎಂದು ಭಾವುಕ ಸಾಲುಗಳನ್ನು ಸುದೀಪ್ ಬರೆದುಕೊಂಡಿದ್ದಾರೆ.
Go in Peace,, Rest in Power my friend . ? pic.twitter.com/31We7IpkTM
— Kichcha Sudeepa (@KicchaSudeep) October 30, 2021
‘ಶಿವಣ್ಣನನ್ನು ಆ ಪರಿಸ್ಥಿತಿಯಲ್ಲಿ ನೋಡಿ ಇನ್ನೂ ದುಃಖವಾಯಿತು. ಅವರು ಹೇಳಿದ ಆ ಮಾತು “ಅವನು (ಪುನೀತ್) ನನಗಿಂತ ಹದಿಮೂರು ವರ್ಷ ಚಿಕ್ಕವನು. ಅವನನ್ನು ಈ ತೋಳುಗಳಲ್ಲಿ ಎತ್ತಿ ಆಡಿಸಿದ್ದೀನಿ. ಇನ್ನೂ ಏನೇನು ನೋಡಬೇಕೋ?” – ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಎಲ್ಲರೂ ದು:ಖದಲ್ಲಿದ್ದಾರೆ, ನೊಂದಿದ್ದಾರೆ. ಪ್ರತಿಯೊಬ್ಬರಿಗೂ ಈ ಸತ್ಯವನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಒಪ್ಪಿಕೊಂಡರೂ, ಅ ಸ್ಥಾನ ಬರಿದಾಗಿದೆ. ಅದನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಆ ಸ್ಥಾನ ಸೇರಿರುವುದು ಈ ಸರಳ ಜೀವಿಗೆ ಮಾತ್ರ, ಪುನೀತ್.. ನಮ್ಮೆಲ್ಲರ ಪ್ರೀತಿಯ ಅಪ್ಪು’ ಎಂದು ಸುದೀಪ್ ಪತ್ರ ಮುಗಿಸಿದ್ದಾರೆ.
ಇದನ್ನೂ ಓದಿ: ‘ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ’; ಪುನೀತ್ ರಾಜ್ಕುಮಾರ್ಗೆ ಸುದೀಪ್ ಭಾವುಕ ನುಡಿ ನಮನ
‘ಪುನೀತ್ ರಾಜ್ಕುಮಾರ್ ಇಲ್ಲ ಅನ್ನೋದನ್ನ ನನಗೆ ನಂಬೋಕೆ ಆಗ್ತಿಲ್ಲ’: ರಿಷಬ್ ಶೆಟ್ಟಿ