ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ ಇಂದು (ಮಾರ್ಚ್ 1) ವಿಶೇಷ ದಿನ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ನ (James Movie) ಲಿರಿಕಲ್ ಸಾಂಗ್, ‘ಟ್ರೇಡ್ಮಾರ್ಕ್..’ (Trademark Song) ಬೆಳಗ್ಗೆ 11:11ಕ್ಕೆ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಈ ಮೊದಲು ಚಿತ್ರತಂಡ ಘೋಷಣೆ ಮಾಡಿತ್ತು. ಹೀಗಾಗಿ, ಅಭಿಮಾನಿಗಳು ಈ ಸಾಂಗ್ ಕೇಳೋಕೆ ಕಾದು ಕೂತಿದ್ದಾರೆ. ಈಗಾಗಲೇ ಟೀಸರ್ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗ ಚಿತ್ರದ ಹಾಡು ಹೇಗಿರಲಿದೆ ಎಂಬುದನ್ನು ನೋಡೋಕೆ ಅಭಿಮಾನಿಗಳು ಕಾದಿದ್ದಾರೆ.
ಲಿರಿಕಲ್ ಸಾಂಗ್ ರಿಲೀಸ್ ಮಾಡುವಾಗ ಅದಕ್ಕೊಂದು ಸಿದ್ಧಸೂತ್ರವಿದೆ. ಸಿನಿಮಾದ ಸ್ಟಿಲ್ಗಳನ್ನು ಹಾಕಿ, ಬ್ಯಾಕ್ಗ್ರೌಂಡ್ನಲ್ಲಿ ಸಾಂಗ್ ಹಾಕಲಾಗುತ್ತದೆ. ಬಹುತೇಕರು ಹೀಗೆಯೇ ಮಾಡುತ್ತಾರೆ. ಆದರೆ, ‘ಟ್ರೇಡ್ಮಾರ್ಕ್’ ಲಿರಿಕಲ್ ಸಾಂಗ್ ಆ ರೀತಿಯಲ್ಲಿ ಇರುವುದಿಲ್ಲ ಎಂಬುದನ್ನು ಇತ್ತೀಚೆಗೆ ಚೇತನ್ ಕುಮಾರ್ ಹೇಳಿದ್ದರು. ‘ಟ್ರೇಡ್ಮಾರ್ಕ್ ಸಾಂಗ್ಅನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್ ಹಾಕಿ ರಿಲೀಸ್ ಮಾಡುವ ಹಾಗೆ ರೆಗ್ಯುಲರ್ ಆಗಿ ಇದನ್ನು ಬಿಡುಗಡೆ ಮಾಡಲ್ಲ. ತುಂಬ ವಿಶೇಷವಾದ ಕಲಾವಿದರು ಇದರಲ್ಲಿ ಪರ್ಫಾರ್ಮ್ ಮಾಡಿದ್ದಾರೆ. ಅದರ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇರಲಿದೆ. ಮಾ.1ರಂದು ಎಲ್ಲ ಮಾಹಿತಿ ತಿಳಿಯಲಿದೆ. ಇದು ಪವರ್ಫುಲ್ ರ್ಯಾಪ್ ಸಾಂಗ್. ಅಭಿಮಾನಿಗಳಿಗೆ ಇದು ಹೆಚ್ಚು ಇಷ್ಟ ಆಗಲಿದೆ’ ಎಂದಿದ್ದರು. ಈ ಕಾರಣಕ್ಕೂ ಹಾಡಿನ ಬಗ್ಗೆ ನಿರೀಕ್ಷೆ ಹುಟ್ಟಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರು ಸೈನಿಕನ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ನಂತರ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳ ಮನಗೆಲ್ಲಲಾಯಿತು. 1 ನಿಮಿಷ 27 ಸೆಕೆಂಡ್ಗಳ ಟೀಸರ್ನಲ್ಲಿ ‘ಜೇಮ್ಸ್’ ಪಾತ್ರದ ಒಂದು ಸಣ್ಣ ಪರಿಚಯ ನೀಡಲಾಗಿತ್ತು. ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದೆ ಎಂಬುದನ್ನು ಟೀಸರ್ ನೋಡಿದ ಯಾರಾದರೂ ಊಹಿಸಬಹುದು. ಈ ಸಿನಿಮಾದಲ್ಲಿ ಪುನೀತ್ ಪಾತ್ರಕ್ಕೆ ಶಿವರಾಜ್ಕುಮಾರ್ ಕಂಠದಾನ ಮಾಡಿದ್ದು, ಒಂದು ಪವರ್ಫುಲ್ ಡೈಲಾಗ್ ಕೂಡ ಟೀಸರ್ನಲ್ಲಿ ಹೈಲೈಟ್ ಆಗಿದೆ. ‘ಭಾವನೆಗಳು ಬ್ಯುಸಿನೆಸ್ಗಿಂತ ದೊಡ್ಡದು- ಜೇಮ್ಸ್’ ಎಂಬ ಬರಹವನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಇಂದು ಬಿಡುಗಡೆ ಆಗೋ ಸಾಂಗ್ ಹೇಗಿರಲಿದೆ ಎಂಬುದು ಸದ್ಯದ ಕುತೂಹಲ.
ಇದನ್ನೂ ಓದಿ: ನಮ್ಮ ಟೈಮ್ಗೆ ಅವರು ಫ್ರೀ ಇರ್ತಾರಾ ನೋಡಿಕೊಳ್ಳಬೇಕು; ‘ಜೇಮ್ಸ್’ ಇವೆಂಟ್ ಬಗ್ಗೆ ಚೇತನ್ ಕುಮಾರ್ ಮಾತು
‘ಜೇಮ್ಸ್’ ಚಿತ್ರದಲ್ಲಿ ಪುನೀತ್ಗೆ ಡಬ್ ಮಾಡುವಾಗ ಶಿವಣ್ಣ ಎಮೋಷನಲ್ ಆಗಿದ್ದರು: ನಿರ್ದೇಶಕ ಚೇತನ್