ಪುನೀತ್ ರಾಜ್ಕುಮಾರ್ ಅವರು ಬಹುಬೇಡಿಕೆಯ ನಟ ಆಗಿದ್ದರು. ಅವರ ಕಾಲ್ಶೀಟ್ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದರು. ನಿಧನರಾಗುವುದಕ್ಕೂ ಮುನ್ನ ಅಪ್ಪು ಹಲವು ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಂಡಿದ್ದರು. ಆ ಪೈಕಿ ‘ಜೇಮ್ಸ್’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಚಂದನವನದ ಯಶಸ್ವಿ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿತ್ತು. ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಆದರೂ ಕೂಡ ‘ಜೇಮ್ಸ್’ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಈಗ ಸಿಕ್ಕಿದೆ. ಈ ಕುರಿತು ಚೇತನ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಜೇಮ್ಸ್ ಚಿತ್ರಕ್ಕೆ ಬಹುತೇಕ ಶೂಟಿಂಗ್ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್ ಶೂಟಿಂಗ್ ಮಾಡಲು ನ.8ರಿಂದ ಪುನೀತ್ ರಾಜ್ಕುಮಾರ್ ಅವರು ಡೇಟ್ಸ್ ನೀಡಿದ್ದರು. ಅವರ ಪಾತ್ರದ ಡಬ್ಬಿಂಗ್ ಅರ್ಧ ಬಾಕಿ ಉಳಿದಿದೆ. ಈ ಸಿನಿಮಾ ಖಂಡಿತ ರಿಲೀಸ್ ಆಗಲಿದೆ’ ಎಂದು ಚೇತನ್ ಕುಮಾರ್ ಹೇಳಿದ್ದಾರೆ.
ಪುನೀತ್ ಅವರ ಇನ್ನುಳಿದ ಭಾಗದ ದೃಶ್ಯಗಳಿಗೆ ಸಹೋದರ ಶಿವರಾಜ್ಕುಮಾರ್ ಧ್ವನಿ ನೀಡುವ ಸಾಧ್ಯತೆ ಇದೆ. ಶಿವಣ್ಣ ಧ್ವನಿ ನೀಡಿದರೆ ಡಬ್ಬಿಂಗ್ ಕೆಲಸ ಪೂರ್ಣಗೊಳ್ಳಲಿದೆ. ಆಗ ಸಿನಿಮಾ ಬಿಡುಗಡೆ ಮಾಡಬಹುದು. ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಅಭಿಮಾನಿಗಳ ಬಯಕೆ. ಪುನೀತ್ ಬದುಕಿದ್ದಾಗ ರಿಲೀಸ್ ಆದ ಅವರ ಕೊನೇ ಸಿನಿಮಾ ‘ಯುವರತ್ನ’. ಆ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದರು. ಇನ್ನು, ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದಲ್ಲೂ ಪುನೀತ್ ನಟಿಸಬೇಕಿತ್ತು. ಆ ಚಿತ್ರದ ಕೆಲಸಗಳು ಎಲ್ಲಿಯವರೆಗೆ ಬಂದಿದ್ದವು ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ‘ದ್ವಿತ್ವ’ ಚಿತ್ರವನ್ನು ‘ಹೊಂಬಾಳೆ ಫಿಲ್ಸ್ಮ್’ ಸಂಸ್ಥೆ ನಿರ್ಮಿಸುತ್ತಿತ್ತು.
ಪುನೀತ್ ರಾಜ್ಕುಮಾರ್ ಅವರು ನಟನೆ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಅವರ ಹೋಮ್ ಬ್ಯಾನರ್ ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ಅನೇಕ ಸಿನಿಮಾಗಳು ಸಿದ್ಧವಾಗುತ್ತಿದ್ದವು. ಆದರೆ ಆ ಎಲ್ಲ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿ, ಪುನೀತ್ ಸಾವಿನೂರಿನ ದಾರಿ ಹಿಡಿದಿದ್ದಾರೆ. ಬೆಂಗಳೂರಿನ ಕಂಠೀರವ ಸ್ಡುಡಿಯೋ ಆವರಣದಲ್ಲಿ ಶನಿವಾರ (ಅ.30) ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ:
Puneeth Rajkumar: ಪುನೀತ್ ಹೃದಯಾಘಾತದ ವೈರಲ್ ವಿಡಿಯೋ ಅಸಲಿಯೋ ನಕಲಿಯೋ? ಇಲ್ಲಿದೆ ಫ್ಯಾಕ್ಟ್ ಚೆಕ್
‘ಪುನೀತ್ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ