
ಖ್ಯಾತ ನಟಿ ರಚಿತಾ ರಾಮ್ (Rachita Ram) ಅವರು ಈಗಾಗಲೇ ಹಲವು ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಈಗ ಅವರು ಮೊದಲ ಬಾರಿಗೆ ಸಿಕ್ಕಾಪಟ್ಟೆ ಮಾಸ್ ಆಗಿರುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೌದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ಅವರು ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಚಿತಾ ರಾಮ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯಲ್ಲಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಲಾಯಿತು. ಈ ವೇಳೆ ‘ಲ್ಯಾಂಡ್ಲಾರ್ಡ್’ (Landlord Movie) ಸಿನಿಮಾದಿಂದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಯಿತು. ಇದರಲ್ಲಿ ರಚಿತಾ ರಾಮ್ ಅವರ ಲುಕ್ ತುಂಬ ರಗಡ್ ಆಗಿದೆ.
‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ವಿಜಯ್ ಕುಮಾರ್ (ದುನಿಯಾ ವಿಜಯ್) ಅವರು ಹೀರೋ ಆಗಿ ನಟಿಸುತ್ತಿದ್ದು, ರಚಿತಾ ರಾಮ್ ಅವರು ನಾಯಕಿ ಪಾತ್ರ ಮಾಡುತ್ತಿದ್ದಾರೆ. ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್. ಅವರು ನಿರ್ಮಾಣ ಮಾಡುತ್ತಿದ್ದಾರೆ. ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕ್ಯಾರೆಕ್ಟರ್ ಟೀಸರ್ ಗಮನ ಸೆಳೆದಿದೆ.
ಟೀಸರ್ ಬಿಡುಗಡೆ ಸಂದರ್ಭದಲ್ಲಿ ರಚಿತಾ ರಾಮ್ ಅವರು ಮಾತನಾಡಿದರು. ‘ಈ ವರ್ಷದ ಹುಟ್ಟುಹಬ್ಬ ನನಗೆ ಬಹಳ ಸ್ಪೆಷಲ್. ಲ್ಯಾಂಡ್ಲಾರ್ಡ್ ಚಿತ್ರತಂಡದ ಕಡೆಯಿಂದ ಈ ಟೀಸರ್ ನನಗೆ ಅಚ್ಚರಿಯ ಉಡುಗೊರೆ. ಇದೊಂದು ವಿಭಿನ್ನ ಪಾತ್ರ’ ಎಂದು ಹೇಳಿದರು ರಚಿತಾ ರಾಮ್. ಟೀಸರ್ ನೋಡಿದ ಅಭಿಮಾನಿಗಳು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
ಈ ವೇಳೆ ನಿರ್ದೇಶಕ ಜಡೇಶ್ ಕೆ. ಹಂಪಿ ಕೂಡ ರಚಿತಾ ರಾಮ್ ಅವರ ಪಾತ್ರದ ಕುರಿತು ಮಾಹಿತಿ ನೀಡಿದರು. ‘ಇಂಥ ಪಾತ್ರವನ್ನು ರಚಿತಾ ರಾಮ್ ಅವರು ಒಪ್ಪುತ್ತಾರಾ ಎನ್ನುವ ಆತಂಕ ನಮಗೆ ಇತ್ತು. ಅವರು ಒಪ್ಪಿಕೊಂಡು ನಟಿಸಿದ್ದು ಬಹಳ ಸಂತೋಷ. ರಚಿತಾ ಅವರು ತಮಿಳಿನ ಕೂಲಿ ಸಿನಿಮಾದಲ್ಲಿ ಕಲ್ಯಾಣಿಯಾಗಿ ನಟಿಸಿದ್ದರು. ಅದಕ್ಕಿಂತ ಬೇರೆ ರೀತಿಯಾಗಿ ಈ ಪಾತ್ರ ಮೂಡಿಬಂದಿದೆ. ಇದರಲ್ಲಿ ಅವರು ಚಿನ್ನಮ್ಮ ಎಂಬ ಪಾತ್ರ ಮಾಡಿದ್ದಾರೆ’ ಎಂದು ಜಡೇಶ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕೆಟ್ಟ ಕಮೆಂಟ್ ಯಾರೇ ಮಾಡಿದರೂ ತಪ್ಪು’; ದರ್ಶನ್ ಅಭಿಮಾನಿಗಳ ನಡೆ ಖಂಡಿಸಿದ ರಚಿತಾ ರಾಮ್
ಈ ಪಾತ್ರಕ್ಕಾಗಿ ರಚಿತಾ ರಾಮ್ ಅವರಿಗೆ ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಗಲಿವೆ ಎಂದು ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಅವರು ಭರವಸೆ ವ್ಯಕ್ತಪಡಿಸಿದರು. ‘ನಮ್ಮ ಸಿನಿಮಾದಲ್ಲಿ ರಚಿತಾ ರಾಮ್ ಅವರು ಅದ್ಭುತ ಪಾತ್ರ ನಿರ್ವಹಿಸಿದ್ದಾರೆ. ಅವರು ರಾಷ್ಟ್ರಪ್ರಶಸ್ತಿ ಪಡೆಯುವ ಮಟ್ಟಕ್ಜೆ ಬೆಳೆಯಲಿ. ಇದು ನೈಜ ಘಟನೆಯನ್ನು ಆಧರಿಸಿ ನಿರ್ಮಿಸಿದ ಸಿನಿಮಾ. ಈ ಸಿನಿಮಾ ಅಭಿನಯಕ್ಕೆ ರಚಿತಾ ರಾಮ್ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗುತ್ತದೆ’ ಎಂದಿದ್ದಾರೆ ಕೆ.ವಿ. ಸತ್ಯಪ್ರಕಾಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.