ಕಲಾವಿದರಿಗೆ ಮತ್ತು ಕಲೆಗೆ ಯಾವುದೇ ಗಡಿ ಇಲ್ಲ. ಅದೇ ಪರಿಕಲ್ಪನೆಯಲ್ಲಿ ಟೂರ್ನಿವಲ್ ಆಯೋಜನೆ ಮಾಡಲಾಗಿದೆ. ಟೂರ್ನಮೆಂಟ್ ಮತ್ತು ಕಾರ್ನಿವಲ್ ಎಂಬ ಎರಡು ಪದಗಳ ಮಿಲನದಿಂದ ‘ಟೂರ್ನಿವಲ್’ (Tournival) ಆಗಿದೆ. ಇದರಲ್ಲಿ ಮೂರು ದೇಶಗಳ ಸೆಲೆಬ್ರಿಟಿಗಳು ಪರಸ್ಪರ ಸಾಂಸ್ಕೃತಿಕ ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಾರೆ ಎಂಬುದು ವಿಶೇಷ. ANYELP ಎಂಟರ್ಟೇನ್ಮೆಂಟ್ ಮತ್ತು ವೈಟ್ ಲೋಟಸ್ ಎಂಟರ್ಟೇನ್ಮೆಂಟ್ ಸಂಸ್ಥೆಗಳು ಜೊತೆಯಾಗಿ ಇದನ್ನು ಆಯೋಜಿಸಿವೆ. ಇತ್ತೀಚೆಗೆ ಇದರ ಉದ್ಘಾಟನೆ ನಡೆಯಿತು. ಈ ವೇಳೆ ಪ್ರಿಯಾಂಕಾ ಉಪೇಂದ್ರ (Priyanka Upendra) ರಾಗಿಣಿ ದ್ವಿವೇದಿ, ಅಜಯ್ ರಾವ್ (Ajay Rao), ನಾಗತಿಹಳ್ಳಿ ಚಂದ್ರಶೇಖರ್ ಮುಂತಾದ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ‘ಟೂರ್ನಿವಲ್ ಎಂದರೆ ಸೌತ್ ಏಷ್ಯಾ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ. ಬೇರೆಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ದೇಶಗಳಲ್ಲಿ ನಡೆಸುವ ಉದ್ದೇಶವಿದೆ’ ಎಂದಿದ್ದಾರೆ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಪೂಜಾಶ್ರೀ.
ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯಾನ ಗ್ಯಾಮೇಜ್, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಟೂರ್ನಿವಲ್ ಪ್ರಯುಕ್ತ ಮಾಲ್ಡೀವ್ಸ್ನಲ್ಲಿ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತವೆ. ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ನ ಸೆಲೆಬ್ರಿಟಿಗಳ ನಡುವೆ ಫುಟ್ಬಾಲ್ ಪಂದ್ಯ ಸಹ ನಡೆಯುತ್ತದೆ.
‘ಈ ಕಾನ್ಸೆಪ್ಟ್ ಚೆನ್ನಾಗಿದೆ. ಭಾರತ ನಮ್ಮ ಸಹೋದರ ರಾಷ್ಟ್ರ. ಸದಾ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಭಾರತ ಮತ್ತು ಮಾಲ್ಡೀವ್ಸ್ ನಡುವೆ ಬಹುಕಾಲದ ಸ್ನೇಹ ಇದೆ. ಈ ದೇಶದಿಂದ ಮಾಲ್ಡೀವ್ಸ್ಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಅದಕ್ಕಾಗಿ ಭಾರತ ಸರ್ಕಾರಕ್ಕೆ ಮತ್ತು ಸಿನಿಮಾ ಸೆಲೆಬ್ರಿಟಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್.
‘ಕಳೆದ ಎರಡು ವರ್ಷಗಳಿಂದ ಪ್ರವಾಸೋದ್ಯಮಕ್ಕೆ ತೊಂದರೆ ಆಗಿತ್ತು. ಶ್ರೀಲಂಕಾದಲ್ಲಿ ಅಹಿತಕರ ಘಟನೆಗಳು ನಡೆದವು. ಕೊವಿಡ್ನಿಂದ ಸಮಸ್ಯೆ ಎದುರಿಸುವಂತಾಯಿತು. ನಮಗೆ ಪ್ರವಾಸೋದ್ಯಮ ತುಂಬ ಮುಖ್ಯ. ಈಗ ನಮ್ಮ ದೇಶದ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ಟೂರ್ನಿವಲ್ಗೆ ಬೆಂಬಲ ನೀಡಲು ನಾನಿಲ್ಲಿಗೆ ಬಂದಿದ್ದೇನೆ. ಟೂರ್ನಿವಲ್ನಿಂದ ನಮ್ಮ ದೇಶಕ್ಕೆ ಸಹಾಯ ಆಗಲಿದೆ. ನಮ್ಮ ಆರ್ಥಿಕತೆ ದಿವಾಳಿ ಆಗಿರಬಹುದು. ಆದರೆ ನಮ್ಮ ನೆಲೆದ ಸೌಂದರ್ಯ ದಿವಾಳಿ ಆಗಿಲ್ಲ. ನಮ್ಮ ಆಥಿತ್ಯದ ಗುಣಮಟ್ಟ ಕಡಿಮೆ ಆಗಿಲ್ಲ’ ಎಂಬುದು ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯಾನ ಗ್ಯಾಮೇಜ್ ಅವರ ಮಾತುಗಳು.
‘ಪೂಜಾ, ಝಾಕೀರ್ ಹುಸೇನ್ ಮತ್ತು ರುದ್ರ ಅವರು ಈ ರೀತಿ ಕಾನ್ಸೆಪ್ಟ್ ಪರಿಚಯಿಸುತ್ತಿರುವುದಕ್ಕೆ ಅಭಿನಂದನೆಗಳು. ನನ್ನ ಸಿನಿಮಾ ಇದರಲ್ಲಿ ಪ್ರದರ್ಶನ ಆಗುತ್ತಿರುವುದಕ್ಕೆ ಖುಷಿ ಇದೆ. ಸಿನಿಮಾ, ಸಂಸ್ಕೃತಿ ಮತ್ತು ಕ್ರೀಡೆ ಎಲ್ಲರಿಗೂ ಇಷ್ಟ. ಟೂರ್ನಿವಲ್ನಲ್ಲಿ ಈ ಮೂರೂ ಇದೆ’ ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.