ಕನ್ನಡ ಚಿತ್ರರಂಗದಲ್ಲಿ ರಾಜ್ ಬಿ. ಶೆಟ್ಟಿ (Raj B Shetty) ಅವರು ಬಹಳ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ ಅವರು ತಮ್ಮದೇ ಚಾಪು ಮೂಡಿಸಿದ್ದಾರೆ. ತುಂಬ ಭಿನ್ನವಾದ ಸಿನಿಮಾಗಳನ್ನು ಮಾಡುವ ಮೂಲಕ ಅವರು ಸ್ಯಾಂಡಲ್ವುಡ್ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇಂದು ಅವರ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಅವರ ಹೊಸ ಚಿತ್ರಕ್ಕೆ ‘ಟೋಬಿ’ (Toby Kannada Movie) ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಅನೌನ್ಸ್ ಮಾಡುವ ಸಲುವಾಗಿ ಮೋಷನ್ ಪೋಸ್ಟರ್ ಹಂಚಿಕೊಳ್ಳಲಾಗಿದೆ. ‘ಮಾರಿ.. ಮಾರಿ.. ಮಾರಿಗೆ ದಾರಿ’ ಎಂದು ಕ್ಯಾಪ್ಷನ್ನೊಂದಿಗೆ ಅವರು ಈ ಸುದ್ದಿ ತಿಳಿಸಿದ್ದಾರೆ. ಇನ್ನು, ‘ಟೋಬಿ’ ಚಿತ್ರದ ರಿಲೀಸ್ ದಿನಾಂಕದ ಬಗ್ಗೆಯೂ ರಾಜ್ ಬಿ. ಶೆಟ್ಟಿ ಅವರು ಅಪ್ಡೇಟ್ ನೀಡಿದ್ದಾರೆ. ಆಗಸ್ಟ್ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳನ್ನು ರಾಜ್ ಬಿ. ಶೆಟ್ಟಿ ಅವರು ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಇನ್ನೊಂದು ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಕೂಡ ನಿರೀಕ್ಷೆ ಮೂಡಿಸಿದೆ. ಆ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ಅವರು ಹೊಸ ಚಿತ್ರದ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ‘ಟೋಬಿ’ ಸಿನಿಮಾದ ಮೋಷನ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಪ್ರತಿ ಸಿನಿಮಾದಲ್ಲಿಯೂ ಅವರು ಬೇರೆ ಬೇರೆ ಶೈಲಿ ಪ್ರಯತ್ನಿಸುತ್ತಾರೆ. ‘ಟೋಬಿ’ ಕೂಡ ತುಂಬ ಡಿಫರೆಂಟ್ ಆಗಿರಲಿದೆ ಎಂಬ ಭರವಸೆ ಮೂಡಿದೆ.
‘ಲೈಟರ್ ಬುದ್ಧ ಫಿಲ್ಮ್ಸ್’ ಮೂಲಕ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೂಡಿಬಂದಿತ್ತು. ಈಗ ಅದೇ ಬ್ಯಾನರ್ನಲ್ಲಿ ‘ಟೋಬಿ’ ಸಿನಿಮಾ ಸಿದ್ಧವಾಗುತ್ತಿದೆ. ‘ಅಗಸ್ತ್ಯ ಫಿಲ್ಮ್ಸ್’ ಕೂಡ ಸಾಥ್ ನೀಡಿದೆ. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಜೊತೆ ಸಂಯುಕ್ತಾ ಹೊರನಾಡು ಮತ್ತು ಚೈತ್ರಾ ಆಚಾರ್ ಕೂಡ ನಟಿಸಿದ್ದಾರೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ. ‘ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಹಾಗೂ ಟೋಬಿ ಚಿತ್ರತಂಡದ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು. ರಾಜ್ ಬಿ. ಶೆಟ್ಟಿ ಮತ್ತು ಇಡೀ ತಂಡದಿಂದ ಸಿಕ್ಕ ಪ್ರೀತಿಗೆ ಧನ್ಯವಾದಗಳು’ ಎಂದು ಸಂಯುಕ್ತಾ ಹೊರನಾಡು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Ramya: ರಾಜ್ ಬಿ. ಶೆಟ್ಟಿ ಜತೆಗಿನ ಚಿತ್ರದ ನಟನೆಯಿಂದ ರಮ್ಯಾ ಔಟ್; ಫ್ಯಾನ್ಸ್ಗೆ ಬೇಸರ ತರಿಸಿತು ಈ ನಿರ್ಧಾರ
‘ನನ್ನ ತಂಡದ ಎಲ್ಲರೂ ಕೂಡ ಈವರೆಗೆ ಮೀಡಿಯಂ ಬಜೆಟ್ನಲ್ಲಿ ಸಿನಿಮಾ ಮಾಡುತ್ತಿದ್ದೆವು. ಮೊದಲ ಬಾರಿ ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡಲು ಎಲ್ಲರೂ ಒಟ್ಟಾಗಿದ್ದೇವೆ. ಪ್ರತಿ ಕಥೆಗಾರನಿಗೆ ಅನುಭವ ತುಂಬ ಮುಖ್ಯ. ನನಗೆ ಆದ ಅನುಭವವನ್ನೇ ಈ ಸಿನಿಮಾದಲ್ಲಿ ತೋರಿಸಿದ್ದೇನೆ. ನನ್ನ ಸಿಟ್ಟನ್ನು ಸೃಜನಾತ್ಮಕವಾಗಿ ಬಳಸಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಇಷ್ಟ ಆಗುತ್ತದೆ ಅಂತ ನಂಬಿಕೆ ನನಗೆ ಇದೆ’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.