ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ

| Updated By: ಮದನ್​ ಕುಮಾರ್​

Updated on: Apr 13, 2021 | 7:38 AM

ರಾಜ್​ಕುಮಾರ್​ ಕಿಡ್ನ್ಯಾಪ್​ ಆದಾಗ ಪರಿಸ್ಥಿತಿ ಕೈ ಮೀರಿತ್ತು. ಅಣ್ಣಾವ್ರನ್ನು ವೀರಪ್ಪನ್​ ಅಪಹರಣ ಮಾಡಿದ ವಿಚಾರ ತಿಳಿದು ವಿಜಯ್​ಕುಮಾರ್​ ಹೆಸರಿನ ಅಭಿಮಾನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು!

ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ
(ರಾಜ್​ಕುಮಾರ್​ ಹಾಗೂ ಪತ್ನಿ ಪಾರ್ವತಮ್ಮ ಅವರನ್ನು ವಿಜಯ್​ಕುಮಾರ್​ ಭೇಟಿ ಆದ ಕ್ಷಣ)
Follow us on

ಡಾ. ರಾಜ್​ಕುಮಾರ್​ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಅವರನ್ನು ನೇರವಾಗಿ ಕಣ್ತುಂಬಿಕೊಂಡರೆ ಸಾಕು ಎಂದು ಕನಸನ್ನು ಕಂಡು, ಅದನ್ನು ನನಸು ಮಾಡಿಕೊಳ್ಳೋಕೆ ದೂರದ ಊರಿನಿಂದ ಬೆಂಗಳೂರಿಗೆ ಬಂದು ಹೋದವರ ಸಂಖ್ಯೆಯೇನೂ ಕಡಿಮೆ ಇಲ್ಲ. ಇಂಥ ಅಸಾಮಾನ್ಯ ಹೀರೋ ಅಪಹರಣಕ್ಕೆ ಒಳಗಾದ ಸುದ್ದಿಯನ್ನು ಅನೇಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅನೇಕರಿಗೆ ದಿಕ್ಕು ತೋಚದಂತಾಗಿತ್ತು. ರಾಜ್​ಕುಮಾರ್​ ಕಿಡ್ನ್ಯಾಪ್​ ಆದಾಗ ಪರಿಸ್ಥಿತಿ ಕೈ ಮೀರಿತ್ತು. ಅಣ್ಣಾವ್ರನ್ನು ವೀರಪ್ಪನ್​ ಅಪಹರಣ ಮಾಡಿದ ವಿಚಾರ ತಿಳಿದು ವಿಜಯ್​ಕುಮಾರ್​ ಹೆಸರಿನ ಅಭಿಮಾನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು! ನಂತರ ರಾಜ್​ಕುಮಾರ್​ ಇವರನ್ನು ಕರೆದು ಊಟ ಹಾಕಿದ್ದರು. ಈ ಬಗ್ಗೆ ಅವರು ಟಿವಿ9 ಕನ್ನಡದ ಜತೆ ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ.

ಅಣ್ಣಾವ್ರು​ ಅಪಹರಣವಾದಾಗ ನನಗೇನೂ ತೋಚಲಿಲ್ಲ
ರಾಜ್​ಕುಮಾರ್​ ಅಪಹರಣಕ್ಕೆ ಒಳಗಾದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ವಿಷಯ ತಿಳಿದು ಚಿಂತ್ರಾಕ್ರಾಂತರಾಗಿದ್ದರಂತೆ ವಿಜಯ್​ಕುಮಾರ್​.  ‘ರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿ ನಾನು. ಅವರು ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನುವ ವಿಚಾರ ತಿಳಿದು ನನಗೆ ಏನು ಮಾಡಬೇಕು ಎಂದು ತೋಚಲಿಲ್ಲ. ಹೀಗಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೆ. ಆದರೆ, ಅದು ವಿಫಲವಾಗಿತ್ತು. ನನಗೆ ನಿಜಕ್ಕೂ ಆ ಸಮಯಕ್ಕೆ ಏನು ಮಾಡಬೇಕು ಎಂದು ಗೊತ್ತಾಗಿರಲಿಲ್ಲ’ ಎಂದಿದ್ದಾರೆ ವಿಜಯ್​ಕುಮಾರ್.

ತಾವು ಅಪಹರಣಕ್ಕೆ ಒಳಗಾಗಿದ್ದಕ್ಕೆ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎನ್ನುವ ವಿಚಾರ ರಾಜ್​​ಕುಮಾರ್​ಗೆ ಗೊತ್ತಾಗಿತ್ತು. ಅವರು ಸುಮ್ಮನಿರಲಿಲ್ಲ.  ನನ್ನನ್ನು ಮನೆಗೆ ಕರೆದರು. ಊಟ ಬಡಿಸಿದರು. ಊಟದ ನಂತರ ಸ್ವೀಟ್​ ಕೊಟ್ಟರು. ನನ್ನ ತಲೆ ಸವರಿಗೆ ಮುತ್ತಿಟ್ಟರು. ಆ ಕ್ಷಣ ಈಗಲೂ ನನ್ನ ಕಣ್ಣಿಗೆ ಕಟ್ಟುವಂತಿದೆ. ಅದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂಬುದು ವಿಜಯ್​ಕುಮಾರ್​ ಮಾತು.

ನಾವು ಅಂದುಕೊಂಡಂತೆ ಅವರಿಲ್ಲ
ರಾಜ್​ಕುಮಾರ್
​ ಹೇಗೆ ಎನ್ನುವ ಬಗ್ಗೆ ಅನೇಕರಿಗೆ ಅನೇಕ ರೀತಿಯ ಕಲ್ಪನೆ ಇರುತ್ತದೆ. ಅದೇ ರೀತಿ, ವಿಜಯ್​ಕುಮಾರ್​ ತಮ್ಮದೇ ಕಲ್ಪನೆ ಇಟ್ಟುಕೊಂಡಿದ್ದರು. ‘ರಾಜ್​ಕುಮಾರ್​ ಅವರು ದೊಡ್ಡ ನಟರು. ನಮ್ಮಂತ ಅಭಿಮಾನಿಗಳ ಹತ್ತಿರ ಅವರು ಸರಿಯಾಗಿ ಮಾತನಾಡುವುದಿಲ್ಲ ಎಂದುಕೊಂಡಿದ್ದೆ. ಆದರೆ, ಅದು ಸುಳ್ಳು ಎಂಬುದು ಅವರನ್ನು ಭೇಟಿ ಮಾಡಿದಾಗ ಗೊತ್ತಾಗಿತ್ತು. ನನ್ನನ್ನು ಕಳುಹಿಸಿಕೊಡುವಾಗ ಅವರು ಮನೆಯ ಗೇಟ್​ವರೆಗೆ ಬಂದಿದ್ದರು. ಇಲ್ಲಿವರೆಗೆ ಯಾಕೆ ಬರೋಕೆ ಹೋದಿರಿ ಎಂದು ನಾನು ಕೇಳಿದೆ. ಆಗ ಅವರು, ಮನೆಗೆ ಬಂದವರು ಯಾರೇ ಇರಲಿ, ಅವರನ್ನು ನಾನು ಕಳುಹಿಸಿಕೊಡುವುದೇ ಹೀಗೆ ಎಂದರು. ಅವರ ಸರಳತೆ ನೋಡಿ ನನ್ನ ಮನಸ್ಸು ತುಂಬಿ ಬಂತು’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಫೋಟೋ ಸಿಕ್ಕಿದ್ದೂ ಅದೃಷ್ಟವೇ
ಈಗಿನಂತೆ ಆಗೆಲ್ಲ ಮೊಬೈಲ್​ಗಳ ಬಳಕೆ ಇರಲಿಲ್ಲ. ಫೋಟೋ ಸಿಗೋದು ಕೂಡ ಕಷ್ಟದ ಕೆಲಸ. ನಾನು ಅವರನ್ನು ಭೇಟಿ ಮಾಡಿದಾಗ ಅಪ್ಪು ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ಆಗ ಮನೆಗೆ ಬಂದಿದ್ದ ಛಾಯಾಗ್ರಾಹಕರು ಫೋಟೋ ತೆಗೆದಿದ್ದರು. ಅವರ ಜತೆ ಫೋಟೋ ಸಿಕ್ಕಿತ್ತು ಎನ್ನುವುದೇ ಖುಷಿಯ ವಿಚಾರ ಎನ್ನುತ್ತಾರೆ ವಿಜಯ್​ಕುಮಾರ್​.

ಕಾಮನ ಬಿಲ್ಲು ಸಿನಿಮಾ ನನಗಿಷ್ಟ
ಕಾಮನ ಬಿಲ್ಲು ಸಿನಿಮಾ ನೋಡಿದ ನಂತರ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಸಿನಿಮಾದಲ್ಲಿ ಹೇಳಿದ ತತ್ವವನ್ನು ನಾನು ಅಳವಡಿಸಿಕೊಂಡಿದ್ದೇನೆ. ಸಿನಿಮಾ ನೋಡಿದ ನಂತರದಲ್ಲಿ ಎಲ್ಲಾ ಜಾತಿ-ಧರ್ಮ ಒಂದೇ ಎನ್ನುವ ಭಾವನೆ ಮೂಡಿದೆ ಎಂದು ತಮ್ಮ ಜೀವನದಲ್ಲಾದ ಬದಲಾವಣೆ ಬಗ್ಗೆ ಹೇಳಿಕೊಂಡಿದ್ದಾರೆ.

ಮನೆಗೆ ಅವರದೇ ಸಿನಿಮಾ ಹೆಸರು
ಮನೆ ಕಟ್ಟಿಸಿದ ನಂತರ ಕುಟುಂಬಕ್ಕೆ ಸಂಬಂಧಿಸಿದ ಹೆಸರನ್ನು ಇಡಲಾಗುತ್ತದೆ. ಆದರೆ, ವಿಜಯ್​ಕುಮಾರ್​ ತಮ್ಮ ಮನೆಗೆ ರಾಜ್​ಕುಮಾರ್​ ಸಿನಿಮಾ ಹೆಸರಿಟ್ಟಿದ್ದಾರೆ. ನಾನು ರಾಜ್​ಕುಮಾರ್​ ಅವರ ಕಟ್ಟಾಭಿಮಾನಿ. ಅವರ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಹೀಗಾಗಿ, ನನ್ನ ಮನೆಗೆ ‘ಕಸ್ತೂರಿ ನಿವಾಸ’ ಎಂದು ಹೆಸರಿಟ್ಟಿದ್ದೇನೆ ಎಂದರು ಅವರು.

ಇದನ್ನೂ ಓದಿ: Rajkumar Death Anniversary: ಡಾ. ರಾಜ್​ಕುಮಾರ್​ ಭೌತಿಕವಾಗಿ ನಮ್ಮೆಲ್ಲರನ್ನು ಅಗಲಿ 15 ವರ್ಷ!