
ಸ್ಯಾಂಡಲ್ವುಡ್ನ ಟಾಪ್ ನಟರಲ್ಲಿ ತಾವೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ. ಹೊಸತನದ ಸಿನಿಮಾಗಳ ಮೂಲಕ ಅವರು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸೋಲು-ಗೆಲುವುಗಳ ನಡುವೆ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಅವರು ಸೃಷ್ಟಿಸಿಕೊಂಡಿದ್ದಾರೆ. ಅವರ ವೃತ್ತಿ ಬದುಕಿಗೆ ದೊಡ್ಡ ಟರ್ನ್ ನೀಡಿದ್ದು, ಒಂದು ಲವ್ ಸ್ಟೋರಿ. ಅದೇ ‘ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ’!
ಹೌದು, ರಕ್ಷಿತ್ ಶೆಟ್ಟಿಗೆ ಚಿತ್ರರಂಗದಲ್ಲಿ ಮೊದಲ ಯಶಸ್ಸು ಸಿಕ್ಕಿದ್ದು ‘ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ‘ ಸಿನಿಮಾ ಮೂಲಕ. 2013ರಲ್ಲಿ ತೆರೆಕಂಡಿದ್ದ ಆ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಶ್ವೇತಾ ಶ್ರೀವಾಸ್ತವ ನಟಿಸಿದ್ದರು. ‘ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ‘ ತೆರೆಕಂಡು ಇಂದಿಗೆ (ಮಾ.8) 8 ವರ್ಷಗಳಾಗಿವೆ. ತಮ್ಮ ಬದುಕಿಗೆ ಹೊಸ ತಿರುವು ನೀಡಿದ ಆ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಇಡೀ ತಂಡದವರು ನೆನಪಿಸಿಕೊಂಡಿದ್ದಾರೆ.
‘ಚಿತ್ರರಂಗದಲ್ಲಿ ನನ್ನ ವೃತ್ತಿಬದುಕಿಗೆ ಪುಷ್ಠಿ ನೀಡಿದ ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ ಸಿನಿಮಾ ಸುಂದರವಾದ 8 ವರ್ಷಗಳನ್ನು ಪೂರೈಸಿದೆ. ಈ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದಗಳು‘ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಹೊಸತನದ ಚಿತ್ರಕಥೆಯನ್ನು ಹೊಂದಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಗೆಲುವಿನ ಬಳಿಕ ರಕ್ಷಿತ್ ಶೆಟ್ಟಿಗೆ ‘ಸಿಂಪಲ್ ಸ್ಟಾರ್’ ಎಂಬ ಬಿರುದು ಕೂಡ ಸಿಕ್ಕಿತು.
‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರಕ್ಕೆ ಸುನಿ ನಿರ್ದೇಶನ ಮಾಡಿದ್ದರು. ಬಳಿಕ ಅವರು ಸಿಂಪಲ್ ಸುನಿ ಎಂದೇ ಖ್ಯಾತರಾದರು. ಅವರು ಕೂಡ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘8 ವರುಷದ ಹಿಂದಿನ ಈ ದಿನ ಕನಸೊಂದು ಮೊಳಗಿತ್ತು. ಬೆಳ್ಳಿತೆರೆಗೆ ಹಾರಿ, ಮರೆಯಲಾಗದ ನನ್ನ 2ನೇ ಜನನ ಈ ಸಿಂಪಲ್ಲಾಗ್ ಒಂದ್ LOVE STORY’ ಎಂದಿದ್ದಾರೆ ನಿರ್ದೇಶಕ ಸುನಿ. ಬಿ.ಜೆ. ಭರತ್ ಸಂಗೀತ ನಿರ್ದೇಶನ ಮಾಡಿದ್ದ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್ ಆಗಿವೆ.
ಇದನ್ನೂ ಓದಿ: ಇನ್ನೂ ಉತ್ತಂಗಕ್ಕೇರು: ರಶ್ಮಿಕಾಗೆ ಮನಃಪೂರ್ವಕವಾಗಿ ಹಾರೈಸಿದ ರಕ್ಷಿತ್ ಶೆಟ್ಟಿ