ಜಪಾನ್​ಗೆ ಹೊರಟ ‘777 ಚಾರ್ಲಿ’; ಕನ್ನಡ ಸಿನಿಮಾಗೆ ಮತ್ತೊಂದು ಗರಿ

|

Updated on: Apr 28, 2024 | 10:21 AM

‘777 ಚಾರ್ಲಿ’ ಸಿನಿಮಾ ಎಲ್ಲ ಗಡಿಗಳನ್ನು ದಾಟಿ ಯಶಸ್ಸು ಕಾಣುತ್ತಿದೆ. ಕಿರಣ್​ ರಾಜ್​ ನಿರ್ದೇಶನದ, ರಕ್ಷಿತ್​ ಶೆಟ್ಟಿ ನಟನೆಯ ಈ ಸಿನಿಮಾಗೆ ಜಪಾನ್​ನಲ್ಲೂ ಬೇಡಿಕೆ ಬಂದಿದೆ. ಶೀಘ್ರದಲ್ಲೇ ‘777 ಚಾರ್ಲಿ’ ಚಿತ್ರ ಜಪಾನ್​ನಲ್ಲಿ ಬಿಡುಗಡೆ ಆಗಲಿದೆ. ಆ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಸಂಗೀತಾ ಶೃಂಗೇರಿ, ರಾಜ್​ ಬಿ. ಶೆಟ್ಟಿ ಕೂಡ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಜಪಾನ್​ಗೆ ಹೊರಟ ‘777 ಚಾರ್ಲಿ’; ಕನ್ನಡ ಸಿನಿಮಾಗೆ ಮತ್ತೊಂದು ಗರಿ
ರಕ್ಷಿತ್​ ಶೆಟ್ಟಿ, 777 ಚಾರ್ಲಿ
Follow us on

ಭಾರತದಲ್ಲಿ ‘777 ಚಾರ್ಲಿ’ (777 Charlie) ಸಿನಿಮಾ ಮೋಡಿ ಮಾಡಿತ್ತು. ಪ್ರಾಣಿಪ್ರಿಯರು ಈ ಸಿನಿಮಾ ನೋಡಿ ಖುಷಿಪಟ್ಟಿದ್ದರು. ರಕ್ಷಿತ್​ ಶೆಟ್ಟಿ (Rakshit Shetty) ಅಭಿನಯಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದರು. ‘ಪರಂವಃ ಸ್ಟುಡಿಯೋಸ್’ ಮೂಲಕ ನಿರ್ಮಾಣವಾದ ‘777 ಚಾರ್ಲಿ’ ಸಿನಿಮಾ ತಂಡದಿಂದ ಒಂದು ವಿಶೇಷ ಸುದ್ದಿ ಕೇಳಿಬಂದಿದೆ. ಈಗ ಜಪಾನ್​ನಲ್ಲಿ ಈ ಚಿತ್ರ ಬಿಡುಗಡೆ ಆಗಲು ಸಿದ್ಧವಾಗಿದೆ. ಕನ್ನಡದ ಈ ಸಿನಿಮಾ ಜಪಾನೀಸ್​ ಭಾಷೆಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಜೂನ್ 28ರಂದು ಜಪಾನ್ (Japan) ದೇಶದ ಹಲವು ನಗರಗಳಲ್ಲಿ ‘777 ಚಾರ್ಲಿ’ ರಿಲೀಸ್​ ಆಗಲಿದೆ.

ಬಾಲಿವುಡ್​ ಹಾಗೂ ಟಾಲಿವುಡ್​ನ ಸಿನಿಮಾಗಳು ಜಪಾನ್​ನಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿದ್ದುಂಟು. ಈಗ ಕನ್ನಡದ ಒಂದು ಸಿನಿಮಾ ಜಪಾನ್​ನಲ್ಲಿ ತೆರೆ ಕಾಣಲು ಸಜ್ಜಾಗಿರುವುದು ಹೆಮ್ಮೆಯ ವಿಷಯ. ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ ‘ಶೋಚಿಕೋ ಮೂವೀ’ ಕಿರಣ್​ ರಾಜ್​ ನಿರ್ದೇಶನದ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲು ಮುಂದಾಗಿದೆ. ಈ ಹಿಂದೆ ಇದೇ ಸಂಸ್ಥೆ ‘Hachi: A Dog’s Tale’ ಸಿನಿಮಾವನ್ನು ಜಪಾನಿನಲ್ಲಿ ವಿತರಣೆ ಮಾಡಿ ಗಮನ ಸೆಳೆದಿತ್ತು.

2023ರಲ್ಲಿ ‘777 ಚಾರ್ಲಿ’ ಸಿನಿಮಾ ಥೈಲ್ಯಾಂಡ್​ನಲ್ಲಿ ಡಬ್ ಆಗಿ ತೆರೆಕಂಡಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ‘ಬಿಗ್​ ಬಾಸ್​’ ಖ್ಯಾತಿಯ ಸಂಗೀತಾ ಶೃಂಗೇರಿ ಅವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಜಪಾನ್​ನಲ್ಲೂ ಸೃಷ್ಟಿಯಾಗಿದೆ ರಶ್ಮಿಕಾ ಮಂದಣ್ಣ ಅಭಿಮಾನಿ ಬಳಗ

ಇದು ಕಿರಣ್ ರಾಜ್ ನಿರ್ದೇಶನದ ಮೊದಲ ಸಿನಿಮಾ. 2022ರ ಜೂನ್ 10ರಂದು ಭಾರತದ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಈ ಸಿನಿಮಾ ಸೆಳೆದಿಕೊಂಡಿತ್ತು. ಅನೇಕ ಪ್ರಶಸ್ತಿಗಳನ್ನ ಬಾಚಿಕೊಂಡ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ರಾಜ್​ ಬಿ. ಶೆಟ್ಟಿ ಕೂಡ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ನೋಬಿಲ್​ ಪೌಲ್​ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.