ಸಾಗರದಷ್ಟು ಪ್ರೇಮವನ್ನು ಎದೆಯೊಳಗೆ ಇಟ್ಟುಕೊಂಡ ಜೋಡಿಯ ಬಗ್ಗೆ, ತಣ್ಣಗೆ ಹರಿವ ನೀರಿನಂಥಹಾ ನವಿರಾದ ಸಿನಿಮಾವನ್ನು ನಿರ್ದೇಶಕ ಹೇಮಂತ್ ರಾವ್ (Hemanth Rao) ಕಟ್ಟಿದ್ದಾರೆ ಎಂಬುದನ್ನು ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಟ್ರೈಲರ್ ಸಾರಿ ಹೇಳುತ್ತಿದೆ. ಟ್ರೈಲರ್ನಲ್ಲಿ (Trailer) ಪ್ರೇಮದ ನವಿರತೆ, ತೀವ್ರತೆ, ವಿಧಿಯ ಕ್ರೂರತನ, ನಾಯಕ-ನಾಯಕಿಯ ಪ್ರೇಮವನ್ನು ಪರೀಕ್ಷಿಸುವ ಕೆಟ್ಟ ಸಮಯ ಎಲ್ಲದರ ಇಣುಕು ನೋಟ ಟ್ರೈಲರ್ನಲ್ಲಿವೆ. ಟ್ರೈಲರ್ ನೋಡಿ ಮುಗಿಸಿದವರು, ದಿಗಂತದೆಡೆಗೆ ಮುಖ ಮಾಡಿ ಕಣ್ಮುಚ್ಚಿ ತಾನು ನೋಡಿದ ಸುಂದರ ದೃಶ್ಯ, ಸಂಗೀತವನ್ನು ಮತ್ತೆ ಮೆಲುಕು ಹಾಕಲು ಪ್ರಯತ್ನಿಸುವಷ್ಟು ಗಾಢ ಭಾವದಲೆಗಳನ್ನು ಎಬ್ಬಿಸುವಂತಿದೆ ಟ್ರೈಲರ್.
ಸರಳ, ಸುಂದರ ಪ್ರೇಮಕತೆಯೇನೋ ಅನ್ನಿಸುವಂತೆ ಆರಂಭವಾಗುವ ಟ್ರೈಲರ್ ದುತ್ತನೆ ನಾಯಕ ಮನು (ರಕ್ಷಿತ್ ಶೆಟ್ಟಿ) ಇರುವ ಭಿನ್ನ ಲೋಕವನ್ನು ಎದುರುಗಾಣಿಸುತ್ತದೆ. ಸಿನಿಮಾದಲ್ಲಿ ಪ್ರೇಮದ ಜೊತೆಗೆ ದ್ವೇಷ, ಅಸೂಯೆ, ಉಳ್ಳವರ ದಬ್ಬಾಳಿಕೆ, ಇಲ್ಲದವರ ಹೋರಾಟ ಎಲ್ಲವೂ ಇದ್ದಂತಿದೆ. ಅದರಲ್ಲಿಯೂ ನಾಯಕಿ ಹೋರಾಟದ ಮುಂಚೂಣಿಯಲ್ಲಿರುವ ಸುಳಿವನ್ನು ಟ್ರೈಲರ್ ನೀಡುತ್ತಿದೆ. ಸಮುದ್ರ, ನೀಲಿ ಬಣ್ಣ, ಅಲೆಗಳ ಶಬ್ದವನ್ನು ರೂಪಕದಂತೆ ನಿರ್ದೇಶಕ ಹೇಮಂತ್ ರಾವ್ ಬಳಸಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಅದರಲ್ಲಿಯೂ ಸಮುದ್ರ, ಸಿನಿಮಾದಲ್ಲಿ ಪ್ರಮುಖ ಭಾಗವಾಗಿರುವುದು ಗೊತ್ತಾಗುತ್ತಿದೆ.
ನಟರ ವಿಷಯಕ್ಕೆ ಬರುವುದಾದರೆ ನಾಯಕಿ ರುಕ್ಮಿಣಿ ವಸಂತ್ ಟ್ರೈಲರ್ನಲ್ಲಿ ಬಹುವಾಗಿ ಗಮನ ಸೆಳೆಯುತ್ತಿದ್ದಾರೆ. ಟ್ರೈಲರ್ನಲ್ಲಿ ಅವರ ಹಿನ್ನೆಲೆ ದನಿ ಹೆಚ್ಚಿಗಿದೆ, ಕತೆಯನ್ನು ನಿರೂಪಣೆ ಮಾಡಿರುವುದೇ ಅವರ ಪಾತ್ರವೇ. ಸರಳವಾದ ಉಡುಗೆಗಳಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ, ಅವರ ನಟನೆಯೂ ಪಾತ್ರಕ್ಕೆ ತಕ್ಕಂತೆ ಇದೆಯೆಂಬುದನ್ನು ಟ್ರೈಲರ್ ಹೇಳುತ್ತಿದೆ. ಇನ್ನು ರಕ್ಷಿತ್ ಶೆಟ್ಟಿ ಲವರ್ ಬಾಯ್ ಆಗಿ ಗಮನ ಸೆಳೆಯುತ್ತಿದ್ದಾರೆ, ಅವರ ಭಿನ್ನ ಹೇರ್ಸ್ಟೈಲ್ ಚೆನ್ನಾಗಿದೆ. ನಟನೆಯಲ್ಲಿಯೂ ಹೊಸದನ್ನೇನೊ ಪ್ರಯತ್ನಿಸಿರುವಂತಿದ್ದು, ಸಿನಿಮಾ ಬಿಡುಗಡೆ ಆದ ಮೇಲೆ ಮೌಲ್ಯಮಾಪನ ಸುಲಭವಾಗುತ್ತದೆ.
ಇದನ್ನೂ ಓದಿ:ಸಪ್ತ ಸಾಗರದಾಚೆ ಎಲ್ಲೊ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ: ಲೈವ್ ಇಲ್ಲಿ ವೀಕ್ಷಿಸಿ
ಟ್ರೈಲರ್ನಲ್ಲಿ ಬಹುವಾಗಿ ಗಮನ ಸೆಳೆಯುತ್ತಿರುವುದು ಹಿನ್ನೆಲೆ ಸಂಗೀತ. ಚರಣ್ ರಾಜ್ರ ಹಿತವಾದ ಸಂಗೀತ, ಸುಂದರ ದೃಶ್ಯಗಳನ್ನು ನೋಡುಗನ ಎದೆಗೆ ಇಳಿಯುವಂತೆ ಮಾಡುವಲ್ಲಿ ಮಹತ್ವದ ಕಾರ್ಯ ಮಾಡಿದೆ. 3:14 ನಿಮಿಷದ ಟ್ರೈಲರ್ನಲ್ಲಿಯೇ ಅವರ ಸಂಗೀತ ಎದ್ದು ಗಮನ ಸೆಳೆಯುತ್ತಿದೆ, 3 ಗಂಟೆಯ ಸಿನಿಮಾದಲ್ಲಿ ದೊಡ್ಡ ಅಂಕವನ್ನೇ ಚರಣ್ ರಾಜ್ ಗಳಿಸುವುದು ಖಾತ್ರಿ. ಡಿಒಪಿ ಗುರು ಮೂರ್ತಿಯವರ ಫ್ರೇಮುಗಳಲ್ಲಿ ಸಮುದ್ರ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆದ ಬಳಿಕ ತೆರೆಯ ಮೇಲೆ ಅವರ ಪ್ರತಿಭೆಗೆ ಇನ್ನಷ್ಟು ಸಾಕ್ಷ್ಯಗಳು ಸಿಗಬಹುದು.
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 1ಕ್ಕೆ ಬಿಡುಗಡೆ ಆಗುತ್ತಿದೆ. ಒಂದು ತಿಂಗಳ ಅಂತರದಲ್ಲಿ ಸಿನಿಮಾದ ಎರಡನೇ ಭಾಗವೂ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೊತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Thu, 17 August 23