ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ: ನಿಯಮ ಉಲ್ಲಂಘನೆ ಮಾಡಿಲ್ಲ ಎಂದ ಗಣೇಶ್
Golden Star Ganesh: ಪರಿಸರ ಸೂಕ್ಷ್ಮ ವಲಯದಲ್ಲಿ ಶಾಶ್ವತ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿರುವ ಬಗ್ಗೆ ನಟ ಗಣೇಶ್ಗೆ ನೊಟೀಸ್ ನೀಡಲಾಗಿದೆ. ಆದರೆ ತಾವು ನಿಯಮ ಉಲ್ಲಂಘಿಸಿಲ್ಲ ಎಂದಿದ್ದಾರೆ ಗಣೇಶ್.
ನಟ ಗೋಲ್ಡನ್ ಸ್ಟಾರ್ ಗಣೇಶ್ಗೆ (Ganesh) ಅರಣ್ಯ ಇಲಾಖೆ ನೊಟೀಸ್ ನೀಡಿದೆ. ಬಂಡಿಪುರ ಹುಲಿ ಸಂರಕ್ಷಿತ ಸೂಕ್ಷ್ಮ ವಲಯದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂದು ಅರಣ್ಯ ಇಲಾಖೆ ಗಣೇಶ್ಗೆ ನೊಟೀಸ್ ನೀಡಿದ್ದು, ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗಣೇಶ್, ನಾವು ಯಾವುದೇ ರೀತಿ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದಿದ್ದಾರೆ.
ಚಾಮರಾಜನಗರ ಜಿಲ್ಲೆ, ಗುಂಡ್ಲಪೇಟೆ ತಾಲ್ಲೂಕಿನ ಹಂಗಳ ಹೋಬಳಿ, ಜಕ್ಕಳ್ಳಿ ಗ್ರಾಮದ ಸರ್ವೆ ಸಂಖ್ಯೆ 105 ರಲ್ಲಿ ಒಂದು ಎಕರೆ 24 ಗುಂಟೆ ಜಮೀನನ್ನು ಗಣೇಶ್ ಹೊಂದಿದ್ದಾರೆ. ಈ ಜಾಗದಲ್ಲಿ ತೋಟಗಾರಿಕೆ ಮಾಡುವ ಉದ್ದೇಶದಿಂದ ಅದರ ಅನುಕೂಲಕ್ಕಾಗಿ ತಾತ್ಕಾಲಿಕ ಕಟ್ಟಡವೊಂದನ್ನು ನಿರ್ಮಾಣ ಮಾಡಿಕೊಳ್ಳುವುದಾಗಿ ಅರಣ್ಯ ಇಲಾಖೆ ಬಳಿ ಗಣೇಶ್ ಅನುಮತಿ ಪಡೆದಿದ್ದರು. ಆದರೆ ಈಗ ಗಣೇಶ್, ಅದೇ ಸ್ಥಳದಲ್ಲಿ ದೊಡ್ಡ ಕಟ್ಟದ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ನಿಗದಿತ ಸ್ಥಳದಲ್ಲಿ ಗಣೇಶ್, ಕಟ್ಟಡ ನಿರ್ಮಾಣಕ್ಕಾಗಿ ಪಾಯ ನಿರ್ಮಾಣ ಮಾಡಿದ್ದ್ದಾರೆ.
ಪರಿಸರ ಸೂಕ್ಷ್ಮ ವಲಯದಲ್ಲಿ ಗಣೇಶ್ ಕಟ್ಟಡ ನಿರ್ಮಾಣ ಮಾಡುವುದನ್ನು ಕೆಲ ಪರಿಸರವಾದಿಗಳು ವಿರೋಧಿಸಿದ್ದರು. ದೂರು ಬಂದ ಕಾರಣ ಸ್ಥಳ ಪರಿಶೀಲನೆ ಮಾಡಿದ್ದ ಅರಣ್ಯ ಇಲಾಖೆ ಹಾಗೂ ಬಂಡಿಪುರ ಹುಲಿ ಯೋಜನೆ ಇಲಾಖೆ ಅಧಿಕಾರಿಗಳು ಆ ಬಳಿಕ ಗಣೇಶ್ಗೆ ನೊಟೀಸ್ ನೀಡಿ ಉತ್ತರಿಸುವಂತೆ ಸೂಚಿಸಿದ್ದಾರೆ. ನೊಟೀಸ್ಗೆ ಉತ್ತರಿಸಿದ ಬಳಿಕವಷ್ಟೆ ಗಣೇಶ್, ಕಾಮಗಾರಿಯನ್ನು ಮುಂದುವರೆಸಬಹುದಾಗಿದೆ.
ಇದನ್ನೂ ಓದಿ:Golden Star Ganesh: ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಸಜ್ಜಾದ ಗಣೇಶ್; ಈ ಚಿತ್ರಕ್ಕೆ ವಿಖ್ಯಾತ್ ಬಂಡವಾಳ
ಮುಚ್ಚಳಿಕೆ ಪತ್ರದಲ್ಲಿ ಬರೆದುಕೊಟ್ಟಿರುವ ಷರತ್ತುಗಳನ್ನು ಉಲ್ಲೇಖಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಟ್ಟಡ ನಿರ್ಮಾಣದ ನೀಲ ನಕ್ಷೆ, ಅನುಮೋದನೆ ಪತ್ರ, ಕಂದಾಯ ಇಲಾಖೆ ದಾಖಲೆ ಇನ್ನಿತರೆ ಮಾಹಿತಿಗಳನ್ನು ಈ ನೊಟೀಸ್ ತಲುಪಿದ ಏಳು ದಿನಗಳ ಒಳಗಾಗಿ ಹಾಜರುಪಡಿಸಬೇಕು, ನೊಟೀಸ್ಗೆ ಉತ್ತರ ನೀಡುವವರೆಗೆ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಗಣೇಶ್ಗೆ ನೀಡಲಾಗಿರುವ ನೊಟೀಸ್ನಲ್ಲಿ ಉಲ್ಲೇಖಿಸಲಾಗಿದೆ.
ಗಣೇಶ್ ಜಮೀನು ಖರೀದಿಸಿರುವ ಜಾಗದಲ್ಲಿ ಜೆಸಿಬಿ, ಕಾಂಕ್ರಿಟ್ ಮಿಕ್ಸ್ಚರ್ ಆರ್ಎಂಸಿ ಯಂತ್ರಗಳು ಇನ್ನಿತರೆ ಯಂತ್ರಗಳು ಕೆಲಸ ಮಾಡುತ್ತಿದ್ದು ಶಾಶ್ವತ ಕಟ್ಟಡ ನಿರ್ಮಾಣವಾಗುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಗಣೇಶ್ ಅನುಮತಿ ಪಡೆದಿರುವುದು ಕಾಂಪೌಂಡ್ ನಿರ್ಮಾಣ ಹಾಗೂ ತಾತ್ಕಾಲಿಕ ಕಟ್ಟಡ ನಿರ್ಮಾಣಕ್ಕೆ ಮಾತ್ರವೇ ಆಗಿದೆ.
ನೊಟೀಸ್ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಟ ಗಣೇಶ್, ”ನಾವು ಯಾವುದೇ ರೀತಿ ಕಾನೂನು ಉಲ್ಲಂಘನೆ ಮಾಡಿಲ್ಲ, ಯಾವುದೇ ಶಾಶ್ವತ ಕಟ್ಟಡದ ಕಾಮಗಾರಿಯನ್ನೂ ಸಹ ಮಾಡಿಲ್ಲ, ನಿಯಮಾನುಸಾರವೇ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ, ನಮ್ಮ ವಕೀಲರೊಟ್ಟಿಗೆ ಚರ್ಚೆ ಮಾಡಿದ ಬಳಿಕವಷ್ಟೆ ನೋಟೀಸ್ಗೆ ಉತ್ತರ ನೀಡಲಿದ್ದೇನೆ” ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ