ಪ್ರತಿ ಸಿನಿಮಾದಲ್ಲೂ ರಕ್ಷಿತ್ ಶೆಟ್ಟಿ (Rakshit Shetty) ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಾರೆ. ಅದೇ ಕಾರಣಕ್ಕಾಗಿ ಅಭಿಮಾನಿಗಳಿಗೆ ಅವರು ಇಷ್ಟ ಆಗುತ್ತಾರೆ. ಈ ವರ್ಷ ಬಿಡುಗಡೆಯಾದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ (SSE Side A) ಸಿನಿಮಾ ಕೂಡ ವಿಶೇಷ ಎನಿಸಿಕೊಂಡಿದೆ. ಇದರ ಮುಂದುವರಿದ ಭಾಗ ಯಾವಾಗ ಬಿಡುಗಡೆ ಆಗಲಿದೆ ಎಂದ ಕಾಯುತ್ತಿದ್ದ ಎಲ್ಲರಿಗೂ ಈಗ ಗುಡ್ ನ್ಯೂಸ್ ಸಿಕ್ಕಿದೆ. ಕಾರಣಾಂತರಗಳಿಂದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ (SSE Side B) ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ ಹೊಸ ರಿಲೀಸ್ ಡೇಟ್ ಫಿಕ್ಸ್ ಮಾಡಲಾಗಿದೆ. ನವೆಂಬರ್ 17ರಂದು ಈ ಚಿತ್ರ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ ಈ ಬಾರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ.
‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಆಯಿತು. ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕ ಬಳಿಕ ತೆಲುಗಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ನಂತರ ಒಟಿಟಿಗೆ ಕಾಲಿಟ್ಟ ಈ ಸಿನಿಮಾ 5 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಾಯ್ತು. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಈ ಸಿನಿಮಾಗೆ ಹೇಮಂತ್ ರಾವ್ ಅವರು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಅವರು ಸಂಗೀತ ನೀಡಿರುವ ಹಾಡುಗಳಿಗೆ ಜನರು ತಲೆದೂಗಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್ ಮುಂತಾದವರು ಪೋಷಕ ಪಾತ್ರಗಳಲ್ಲಿ ಇದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರದಲ್ಲಿ ನಟಿ ಚೈತ್ರಾ ಆಚಾರ್ ಅವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರ ಗೆಟಪ್ ಬದಲಾಗಲಿದೆ.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಮರುಳಾದ ನಟಿ ಸಮಂತಾ; ತಂಡದ ಬಗ್ಗೆ ಮೆಚ್ಚುಗೆ
ಒಂದು ಗಾಢವಾದ ಪ್ರೇಮಕಥೆಯನ್ನು ‘ಸೈಡ್ ಎ’ ಮೂಲಕ ಹೇಳಲಾಗಿದೆ. ತನ್ನದಲ್ಲದ ತಪ್ಪಿಗೆ ಜೈಲು ಸೇರಿದ ಕಥಾನಾಯಕ ‘ಸೈಡ್ ಬಿ’ ಚಿತ್ರದಲ್ಲಿ ಸೇಡು ತೀರಿಸಿಕೊಳ್ಳುತ್ತಾನಾ? ಆತನಿಂದ ದೂರ ಆಗಿರುವ ಪ್ರೇಯಸಿ ಪ್ರಿಯಾ ಮತ್ತೆ ಸಿಕ್ತಾಳಾ? ಅವರ ಜೀವನದಲ್ಲಿ ಹೊಸ ಹುಡುಗಿಯ ಎಂಟ್ರಿ ಆಗುತ್ತಾ ಎಂಬಿತ್ಯಾದಿ ಪ್ರಶ್ನೆಗಳು ಪ್ರೇಕ್ಷಕರ ತಲೆಯಲ್ಲಿ ಕೊರೆಯುತ್ತಿವೆ. ಆ ಪ್ರಶ್ನೆಗೆ ಉತ್ತರ ಪಡೆಯಲು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.