‘ದೆ ಕಾಲ್ ಮಿ ಓಜಿ, ಒರಿಜಿನಲ್ ಗ್ಯಾಂಗ್ಸ್ಟರ್’: ‘ಘೋಸ್ಟ್’ ಸಿನಿಮಾದ ಈ ಡೈಲಾಗ್ ಬರೆದಿದ್ಯಾರು?
Ghost: ಶಿವರಾಜ್ ಕುಮಾರ್ ನಟಿಸಿರುವ 'ಘೋಸ್ಟ್' ಸಿನಿಮಾದ 'ನೀನು ಗನ್ನಲ್ಲಿ ಎಷ್ಟು ಜನರನ್ನ ಹೆದರ್ಸಿದ್ದೀಯೋ ಅದಕ್ಕಿಂತ ಹೆಚ್ಚು ಜನಾನ ನಾನು ಕಣ್ಣಲ್ಲಿ ಹೆದರ್ಸಿದ್ದೀನಿ, ದೇ ಕಾಲ್ ಮಿ ಓಜಿ, ಒರಿಜಿನಲ್ ಗ್ಯಾಂಗ್ಸ್ಟರ್' ಡೈಲಾಗ್ ಸಖತ್ ಜನಪ್ರಿಯವಾಗಿದೆ. ಅಂದಹಾಗೆ ಈ ಸಂಭಾಷಣೆ ಬರೆದಿದ್ದು ಯಾರು ಗೊತ್ತೆ?
ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್‘ (Ghost) ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು ಅಭಿಮಾನಿಗಳ ಆದರ, ವಿಮರ್ಶಕರ ಮೆಚ್ಚುಗೆ ಗಳಿಸಿಕೊಂಡಿದೆ. ಸಿನಿಮಾದಲ್ಲಿ ಹಲವು ಷೇಡ್ಗಳಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಡೈಲಾಗ್ಗಳು, ಶಿವಣ್ಣನ ಲುಕ್ ಎಲ್ಲವನ್ನೂ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿತ್ತು, ಅದಕ್ಕೆ ಕಾರಣವಾಗಿದ್ದು ಸಿನಿಮಾದ ಟೀಸರ್. ಅದರಲ್ಲಿಯೂ ಟೀಸರ್ನಲ್ಲಿದ್ದ ಶಿವಣ್ಣನ ಓಜಿ ಡೈಲಾಗ್ ಅಂತೂ ಸಖತ್ ಜನಪ್ರಿಯವಾಗಿತ್ತು.
‘ನೀನು ಗನ್ನಲ್ಲಿ ಎಷ್ಟು ಜನರನ್ನ ಹೆದರ್ಸಿದ್ದೀಯೋ ಅದಕ್ಕಿಂತ ಹೆಚ್ಚು ಜನಾನ ನಾನು ಕಣ್ಣಲ್ಲಿ ಹೆದರ್ಸಿದ್ದೀನಿ, ದೇ ಕಾಲ್ ಮಿ ಓಜಿ, ಒರಿಜಿನಲ್ ಗ್ಯಾಂಗ್ಸ್ಟರ್’ ಎಂದು ಖಡಕ್ ಆಗಿ ಶಿವಣ್ಣ ಹೇಳುವ ಡೈಲಾಗ್ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಅದರಲ್ಲಿಯೂ ಓಜಿ ಡೈಲಾಗ್ ಅಂತೂ ಮೀಮರ್ಗಳಿಗೆ ಒಳ್ಳೆಯ ಸರಕಾಗಿಬಿಟ್ಟಿದೆ. ಅಂದಹಾಗೆ ಈ ಓಜಿ ಡೈಲಾಗ್ ಅನ್ನು ಬರೆದವರು ನಿರ್ದೇಶಕ ಶ್ರೀನಿ ಅಲ್ಲ ಬದಲಿಗೆ ಸ್ವತಃ ಶಿವರಾಜ್ ಕುಮಾರ್.
ಹೌದು, ಅನುಶ್ರೀ ಅವರೊಟ್ಟಿಗಿನ ಸಂದರ್ಶನದಲ್ಲಿ ಈ ವಿಷಯವನ್ನು ಸ್ವತಃ ನಿರ್ದೇಶಕ ಶ್ರೀನಿ ಹೇಳಿಕೊಂಡಿದ್ದಾರೆ. ನಾವು ‘ನೀನು ಗನ್ನಲ್ಲಿ ಎಷ್ಟು ಜನರನ್ನ ಹೆದರ್ಸಿದ್ದೀಯೋ ಅದಕ್ಕಿಂತ ಹೆಚ್ಚು ಜನಾನ ನಾನು ಕಣ್ಣಲ್ಲಿ ಹೆದರ್ಸಿದ್ದೀನಿ’ ಎಂದಷ್ಟೆ ಡೈಲಾಗ್ ಬರೆದಿದ್ದೆ. ಆದರೆ ಶೂಟಿಂಗ್ ಮಾಡುವಾಗ ಡೈಲಾಗ್ ಹೇಳಿದ ಶಿವಣ್ಣ ಅದನ್ನೇ ಕಂಟಿನ್ಯೂ ಮಾಡಿ ಸ್ಟೈಲ್ ಆಗಿ ಚೇರ್ಗೆ ಒರಗಿಕೊಂಡು ‘ದೇ ಕಾಲ್ ಮಿ ಓಜಿ, ಒರಿಜಿನಲ್ ಗ್ಯಾಂಗ್ಸ್ಟರ್’ ಆ ಡೈಲಾಗ್ ಕೇಳಿ ನಾನಂತೂ ಥ್ರಿಲ್ ಆಗಿಬಿಟ್ಟೆ, ಸೆಟ್ನಲ್ಲಿರುವವರೆಲ್ಲ ಚಪ್ಪಾಳೆ ತಟ್ಟಲು ಶುರು ಮಾಡಿದರು. ಒಳ್ಳೆಯ ಡೈಲಾಗ್ ಆದ ಕಾರಣ ಅದನ್ನು ಹಾಗೆ ಉಳಿಸಿಕೊಂಡೆವು ಎಂದಿದ್ದಾರೆ.
ಇದನ್ನೂ ಓದಿ: ಅವರು ಹಾಗೆ ಮಾಡಬಾರದಿತ್ತು: ಕಬ್ಜ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಅಸಮಾಧಾನ
ಶಿವಣ್ಣನ ರೀತಿ ಇಂಪ್ರೊವೈಸೇಷನ್, ಸ್ಪಾಂಟೇನಿಯಸ್ ಆಗಿ ಇರುವ ನಟರು ಬಹಳ ಕಡಿಮೆ. ನಿರ್ದೇಶಕರು ಬರೆದ ಸಂಭಾಷಣೆ, ಸನ್ನಿವೇಶಕ್ಕೆ ತಮ್ಮ ಟಚ್ ಅನ್ನು ಶಿವಣ್ಣ ನೀಡುತ್ತಾರೆ ಎಂದು ಶ್ರೀನಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ಸ್ವಲ್ಪ ನಮ್ಮ ತನವನ್ನೂ ಪಾತ್ರಕ್ಕೆ ತರಬೇಕಾಗುತ್ತದೆ, ಚೆನ್ನಾಗಿದ್ದರೆ ಸಂತೋಷ ಇಲ್ಲದಿದ್ದರೆ ಏನು ಮಾಡೋಕಾಗಲ್ಲ ಎಂದು ಸರಳವಾಗಿ ಹೇಳಿದ್ದಾರೆ ಶಿವಣ್ಣ.
ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ನಿನ್ನೆಯಷ್ಟೆ (ಅಕ್ಟೋಬರ್ 19) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಶಿವಣ್ಣನ ಅಭಿಮಾನಿಗಳಿಗೆ ಹಬ್ಬವಾಗುವಂತೆ ಶ್ರೀನಿ ಮಾಸ್ ಆಗಿ ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಬಾಲಿವುಡ್ ನಟ ಅನುಪಮ್ ಖೇರ್, ತಮಿಳು ನಟ ಜಯರಾಂ ಸಹ ಇದ್ದಾರೆ. ಶಿವಣ್ಣನ ಪುತ್ರಿಯ ಪಾತ್ರದಲ್ಲಿ ಕೆಜಿಎಫ್ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ, ನಿರ್ಮಾಣ ಮಾಡಿರುವುದು ಸಂದೇಶ್ ನಾಗರಾಜ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ