
ನಟ ರಮೇಶ್ ಅರವಿಂದ್ ಪಾಲಿಗೆ ಇಂದು (ಸೆ.10) ಎರಡೆರಡು ಸಂಭ್ರಮ. ಅವರ ಹುಟ್ಟುಹಬ್ಬದ ದಿನವೇ ಗೌರಿ-ಗಣೇಶ್ ಹಬ್ಬ ಕೂಡ ಬಂದಿದೆ. ಈ ಖುಷಿಯನ್ನು ದುಪ್ಪಟ್ಟು ಮಾಡಲು ‘ಶಿವಾಜಿ ಸುರತ್ಕಲ್ 2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ‘ಶಿವಾಜಿ ಸುರತ್ಕಲ್’ ಸಿನಿಮಾ ಮಾಡಿದ್ದ ತಂಡವೇ ಸೇರಿಕೊಂಡು ಈಗ ಅದರ ಎರಡನೇ ಪಾರ್ಟ್ ತಯಾರಿಸುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನ ಮಾಡುತ್ತಿದ್ದು, ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
2020ರ ಆರಂಭದಲ್ಲಿ ಲಾಕ್ಡೌನ್ ಶುರು ಆಗುವುದಕ್ಕೂ ಮುನ್ನ ‘ಶಿವಾಜಿ ಸುರತ್ಕಲ್’ ಸಿನಿಮಾ ತೆರೆಕಂಡು ಯಶಸ್ವಿಯಾಗಿತ್ತು. ಸಸ್ಪೆನ್ಸ್-ಥ್ರಿಲ್ಲರ್ ಕಥೆಯುಳ್ಳ ಚಿತ್ರ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವಾಗಲೇ ಲಾಕ್ಡೌನ್ ಜಾರಿ ಆಗಿದ್ದರಿಂದ ಪ್ರದರ್ಶನ ನಿಲ್ಲಿಸುವುದು ಅನಿವಾರ್ಯ ಆಯಿತು. ಬಳಿಕ ಓಟಿಟಿ ಮೂಲಕವೂ ಈ ಸಿನಿಮಾ ಹೆಚ್ಚಿನ ಜನರನ್ನು ತಲುಪಿತ್ತು. ಮೊದಲ ಪಾರ್ಟ್ನಲ್ಲಿ ಇದ್ದ ಶಿವಾಜಿ ಸುರತ್ಕಲ್ ಪಾತ್ರ ಎರಡನೇ ಪಾರ್ಟ್ನಲ್ಲೂ ಮುಂದುವರಿಯುತ್ತಿದೆ. ಪತ್ತೆದಾರಿ ಆಗಿರುವ ಆತ ಈಗ ಹೊಸ ಕೇಸ್ ಭೇದಿಸಲು ಸಜ್ಜಾಗುತ್ತಿದ್ದಾನೆ.
ಮೊದಲ ಪಾರ್ಟ್ಗೆ ‘ದಿ ಕೇಸ್ ಆಫ್ ರಣಗಿರಿ ರಹಸ್ಯ’ ಎಂಬ ಟ್ಯಾಗ್ಲೈನ್ ಇತ್ತು. ಈಗ ಎರಡನೇ ಪಾರ್ಟ್ಗೆ ‘ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಎಂಬ ಟ್ಯಾಗ್ಲೈನ್ ಇದೆ. ಇದರ ಪೋಸ್ಟರ್ ಗಮನ ಸೆಳೆಯುತ್ತಿದೆ. ಪತ್ತೇದಾರಿ ಆಗಿರುವ ಶಿವಾಜಿಯ ಕೈಗೆ ಕೋಳ ತೊಡಿಸಲಾಗಿದೆ. ಹಾಗಾದರೆ ಈ ಕೇಸ್ನಲ್ಲಿ ಆತನೇ ಆರೋಪಿ ಆಗಲಿದ್ದಾನಾ? ಆ ಮಾಯಾವಿ ಯಾರು ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡುವಂತಾಗಿದೆ.
ಅಕ್ಟೋಬರ್ನಿಂದ ಈ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದೆ. ಹಲವು ಗೆಟಪ್ಗಳಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದಾರೆ. ಕರ್ನಾಟಕದ ಅನೇಕ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ರಾಧಿಕಾ ನಾರಾಯಣ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಟೀಮ್ ಜೊತೆ ಕೆಲಸ ಮಾಡಲು ರಮೇಶ್ ಉತ್ಸುಕರಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಈ ಪೋಸ್ಟರ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಚಿತ್ರರಂಗದ ಸಮಸ್ಯೆಗಳಿಗೆ ಟಿವಿ9 ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪರಿಹಾರ ಕೇಳಿದ ರಮೇಶ್ ಅರವಿಂದ್