ಸೀರಿಯಲ್ ಮತ್ತು ಸಿನಿಮಾ ಈ ಎರಡೂ ಕ್ಷೇತ್ರಗಳಲ್ಲಿ ಫೇಮಸ್ ಆಗಿರುವ ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ಹೀರೋ ಆಗಿ ಅಭಿನಯಿಸಿರುವ ‘ಶೆಫ್ ಚಿದಂಬರ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ರೂಪ ಡಿ.ಎನ್. ನಿರ್ಮಾಣ ಮಾಡಿರುವ ಈ ಸಿನಿಮಾಗೆ ಆನಂದ್ರಾಜ್ ಎಂ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಅವರು ಈ ಸಿನಿಮಾದ ಟ್ರೇಲರ್ ಅನಾವರಣ ಮಾಡಿದ್ದಾರೆ. ಅಲ್ಲದೇ ಅವರು ಟ್ರೇಲರ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಜೂನ್ 14ಕ್ಕೆ ‘ಶೆಫ್ ಚಿರಂಬರ’ ಸಿನಿಮಾ (Chef Chidambara Movie) ಬಿಡುಗಡೆ ಆಗಲಿದೆ. 5 ವರ್ಷಗಳ ಬಳಿಕ ಅನಿರುದ್ದ್ ಅವರು ನಟಿಸಿರುವ ಸಿನಿಮಾ ಎಂಬ ಕಾರಣಕ್ಕೆ ಅವರ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿದೆ.
ಟ್ರೇಲರ್ ಬಿಡುಗಡೆ ವೇಳೆ ರಮೇಶ್ ಅರವಿಂದ್ ಅವರು ವಿಷ್ಣುವರ್ಧನ್ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಬಳಿಕ ಅನಿರುದ್ಧ್ ಬಗ್ಗೆ ಮಾತನಾಡಿದರು. ‘ನನ್ನ ನಿರ್ದೇಶನದ ‘ರಾಮ ಶ್ಯಾಮ ಭಾಮ’ ಸೇರಿದಂತೆ 2 ಸಿನಿಮಾಗಳಲ್ಲಿ ಅನಿರುದ್ಧ್ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ಕಲಾವಿದ. ಈ ಸಿನಿಮಾ ಟ್ರೇಲರ್ ಕೂಡ ಚೆನ್ನಾಗಿದೆ. ಡಾರ್ಕ್ ಕಾಮಿಡಿ ಶೈಲಿಯ ಈ ಸಿನಿಮಾದ ಟ್ರೇಲರ್ ಕುತೂಹಲ ಮೂಡಿಸಿದೆ. ಸಿನಿಮಾ ನೋಡುವ ಕಾತುರವನ್ನು ಹೆಚ್ಚು ಮಾಡಿದೆ. ಚಿತ್ರತಂಡದವರ ಶ್ರಮ ಕಾಣುತ್ತಿದೆ. ಸಿನಿಮಾ ಯಶಸ್ವಿಯಾಗಲಿ’ ಎಂದು ರಮೇಶ್ ಅರವಿಂದ್ ಹಾರೈಸಿದರು.
ನಟ ಅನಿರುದ್ಧ್ ಮಾತನಾಡಿ, ‘ನಿರ್ಮಾಪಕಿ ರೂಪಾ ಅವರ ಪತಿ ಸರ್ವೋತಮ್ ಮತ್ತು ನಾನು ಬಹಳ ವರ್ಷಗಳಿಂದ ಗೆಳೆಯರು. ಅವರು ಸಿನಿಮಾ ಮಾಡೋಣ ಎಂದಾಗ ಅನೇಕ ಕಥೆಗಳನ್ನು ಕೇಳಿದ್ದೆ. ಆನಂದ್ರಾಜ್ ಅವರು ಹೇಳಿದ ಈ ಕಥೆ ಇಷ್ಟ ಆಯಿತು. ನಂತರ ವಿಷ್ಣುವರ್ಧನ್ ಸ್ಮಾರಕದ ಬಳಿ ಸ್ಕ್ರಿಪ್ಟ್ ಪೂಜೆ ಮಾಡಿದೆವು. ಮುಹೂರ್ತದ ದಿನ ಭಾರತಿ ವಿಷ್ಣುವರ್ಧನ್ ಅವರು ಕ್ಲ್ಯಾಪ್ ಮಾಡಿ ಚಾಲನೆ ನೀಡಿದ್ದರು. ಕಿಚ್ಚ ಸುದೀಪ್ ಅವರು ಟೀಸರ್ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದರು. ಈಗ ರಮೇಶ್ ಅರವಿಂದ್ ಅವರು ಟ್ರೇಲರ್ ಅನಾವರಣ ಮಾಡಿ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದರು.
‘ಶೆಫ್ ಚಿದಂಬರ’ ಸಿನಿಮಾದ ಚಿತ್ರೀಕರಣವು ಚಿತ್ರತಂಡದ ಸಹಕಾರದಿಂದ ಕೇವಲ 29 ದಿನಗಳಲ್ಲಿ ಮುಕ್ತಾಯವಾಗಿದೆ ಎಂದು ನಿರ್ದೇಶಕ ಆನಂದ್ರಾಜ್ ಹೇಳಿದರು. ‘ ಈ ಸಿನಿಮಾದಲ್ಲಿ 3 ಹಾಡುಗಳಿವೆ. ಒಂದು ಹಾಡಿಗೆ ಅನಿರುದ್ಧ್ ಅವರೇ ಧ್ವನಿ ನೀಡಿದ್ದಾರೆ. ರೂಪಾ ಡಿ.ಎನ್. ಅವರು ಯಾವುದೇ ಕೊರತೆ ಬಾರದ ರೀತಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಕಾಮಿಡಿ ಇರುವ ಈ ಸಿನಿಮಾ ಎಲ್ಲರಿಗೂ ಪ್ರಿಯವಾಗಲಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಕೇಸ್ ಬೆನ್ನಲ್ಲೇ ರಮೇಶ್ ಅರವಿಂದ್ಗೆ ಪೆನ್ಡ್ರೈವ್ ಕೊಟ್ಟ ಫ್ಯಾನ್; ನಟನ ರಿಯಾಕ್ಷನ್ ನೋಡಿ
ಈ ಸಿನಿಮಾದಲ್ಲಿ ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ರೆಚೆಲ್ ಡೇವಿಡ್ ನಟಿಸಿದ್ದಾರೆ. ಶಿವಮಣಿ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ರಿತ್ವಿಕ್ ಮುರಳಿಧರ್ ಅವರ ಸಂಗೀತ, ಉದಯ್ ಲೀಲ ಅವರ ಛಾಯಾಗ್ರಹಣ, ವಿಜೇತ್ ಚಂದ್ರ ಅವರ ಸಂಕಲನ, ಗಣೇಶ್ ಪರಶುರಾಮ್ ಅವರ ಸಂಭಾಷಣೆ ಈ ಸಿನಿಮಾಗೆ ಇದೆ. ಟ್ರೇಲರ್ ಬಿಡುಗಡೆ ಮಾಡಿದ ರಮೇಶ್ ಅರವಿಂದ್ ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ನಿರ್ಮಾಪಕಿ ರೂಪಾ ಡಿ.ಎನ್. ಅವರು ಧನ್ಯವಾದ ಅರ್ಪಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.