ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರ ನಿಧನದ ಸುದ್ದಿ ಕೇಳಿ ಇಡೀ ಸ್ಯಾಂಡಲ್ವುಡ್ಗೆ ಶಾಕ್ ಆಗಿತ್ತು. ಏ.26ರಂದು ಮಹಾಮಾರಿ ಕೊರೊನಾ ವೈರಸ್ ರಾಮು ಅವರನ್ನು ಬಲಿ ಪಡೆದುಕೊಂಡಿತು. ರಾಮು ಅಗಲಿಕೆಯಿಂದ ಅವರ ಪತ್ನಿ, ನಟಿ ಮಾಲಾಶ್ರೀ ತೀವ್ರ ನೋವಿನಲ್ಲಿ ಮುಳುಗಿಹೋದರು. ದಿಕ್ಕು ತೋಚದಂತಹ ಪರಿಸ್ಥಿತಿ ಅವರದ್ದಾಗಿತ್ತು. ರಾಮು ನಿಧನರಾಗಿ 12 ಕಳೆದ ಬಳಿಕ ಇದೇ ಮೊದಲ ಬಾರಿಗೆ ಮಾಲಾಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ಬಹಿರಂಗ ಪತ್ರದ ಮೂಲಕ ಮನದ ಮಾತು ಹಂಚಿಕೊಂಡಿದ್ದಾರೆ.
‘ಕಳೆದ 12 ದಿನಗಳು ತುಂಬ ನೋವಿನಿಂದ ಕೂಡಿದ್ದವು. ಸಂಪೂರ್ಣ ಅಸ್ಪಷ್ಟವಾಗಿತ್ತು. ನನ್ನ ಪ್ರೀತಿಯ ಪತಿ ರಾಮು ನಿಧನದಿಂದಾಗಿ ನಮ್ಮ ಇಡೀ ಕುಟುಂಬದ ಹೃದಯ ಛಿದ್ರವಾಯಿತು. ಯಾವಾಗಲೂ ಅವರೇ ನಮ್ಮ ಬೆನ್ನೆಲುಬು. ನಮಗೆ ದಾರಿ ತೋರಿಸು ಬೆಳಕು ಅವರು’ ಎಂದು ಮಾಲಾಶ್ರೀ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ, ಈ ಕಷ್ಟದ ಸಮಯದಲ್ಲಿ ಸಾಂತ್ವನ ಹೇಳಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
‘ಇಂಥ ದಾರುಣ ಪರಿಸ್ಥಿತಿಯಲ್ಲಿ ರಾಮುಗಾಗಿ ಇಡೀ ಚಿತ್ರರಂಗವೇ ಪ್ರೀತಿ ತೋರಿಸಿದೆ. ನಮಗೆ ತೋರಿದ ಬೆಂಬಲವನ್ನು ಸದಾ ಕಾಲ ಸ್ಮರಿಸುತ್ತೇವೆ. ಮಾಧ್ಯಮದವರು, ಕಲಾವಿದರು, ನಿರ್ಮಾಪಕರು, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ರಾಮ ಜೀವನದ ಮುಖ್ಯ ಭಾಗವಾಗಿದ್ದಕ್ಕೆ ಧನ್ಯವಾದಗಳು. ಕಷ್ಟದ ಸಂದರ್ಭದಲ್ಲಿ ನಮಗಾಗಿ ಪ್ರೀತಿ ತೋರಿಸಿ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ತಮ್ಮ ಕುಟುಂಬದ ಪರವಾಗಿ ಮಾಲಾಶ್ರೀ ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ರಾಮು ಅವರ ಕೊಡುಗೆ ಅಪಾರ. ಕೇವಲ 21ನೇ ವಯಸ್ಸಿನಲ್ಲಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಅದ್ದೂರಿ ಸಿನಿಮಾಗಳ ಮೂಲಕ ಕೋಟಿ ರಾಮು ಎಂದೇ ಫೇಮಸ್ ಆದರು. ಅವರ ಒಡೆತನದ ರಾಮು ಎಂಟರ್ಪ್ರೈಸಸ್ ಬ್ಯಾನರ್ ಎಂದರೆ ಅದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಎಂದು ಹೆಸರಾಗುವ ಮಟ್ಟಕ್ಕೆ ತಮ್ಮದೇ ಆದಂತಹ ಸ್ವಂತ ಬ್ರ್ಯಾಂಡ್ ಕಟ್ಟಿ ಬೆಳೆಸಿದ್ದ ಸಾಹಸಿ ಈ ರಾಮು.
ಗೋಲಿಬಾರ್, ಲಾಕಪ್ ಡೆತ್, ಸರ್ಕಲ್ ಇನ್ಸ್ಪೆಕ್ಟರ್, ಎಕೆ 47 ಮುಂತಾದ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದರು. ಶಿವರಾಜ್ಕುಮಾರ್, ಸುದೀಪ್, ದರ್ಶನ್, ಡಾರ್ಲಿಂಗ್ ಕೃಷ್ಣ, ಸಾಯಿ ಕುಮಾರ್, ಉಪೇಂದ್ರ, ರವಿಚಂದ್ರನ್ ಮುಂತಾದ ಸ್ಟಾರ್ ಕಲಾವಿದರ ಚಿತ್ರಗಳಿಗೆ ರಾಮು ಬಂಡವಾಳ ಹೂಡಿದ್ದರು. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ.
ಇದನ್ನೂ ಓದಿ:
ಕೇವಲ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ರಾಮು, ನಂತರ ಕೋಟಿ ರಾಮು ಆಗಿದ್ದರ ಹಿಂದಿದೆ ಅಚ್ಚರಿಯ ಕಥೆ
Ramu Death: ನಿಧನಕ್ಕೂ ಮುನ್ನ ಫೋನ್ನಲ್ಲಿ ಕೊವಿಡ್ ಕಷ್ಟ ವಿವರಿಸಿದ್ದ ಕೋಟಿ ರಾಮು